2 ಕೋಟಿ ಕಳ್ಳತನ ಪ್ರಕರಣ: ಕದ್ದ ಒಡವೆ ಮಾರಲು ಹೊರಟಿದ್ದವರು ಪೊಲೀಸರ ಅತಿಥಿಯಾದರು!

theft
Published on

ಹಾಸನ: ಗ್ರಾನೈಟ್​ ಉದ್ಯಮಿಯೊಬ್ಬರ ಮನೆಗೆ ಕನ್ನ ಹಾಕಿ ಸುಮಾರು 2 ಕೋಟಿ ರೂಪಾಯಿ ಬೆಲೆ ಬಾಳುವ ಚಿನ್ನದ ಆಭರಣ, ಬೆಳ್ಳಿ ಪದಾರ್ಥ ಮತ್ತು ನಗದು ದೋಚಿದ್ದ ಪ್ರಕರಣವನ್ನು ಹಾಸನ ಪೊಲೀಸರು ಬೇಧಿಸಿದ್ದಾರೆ. ಇಂದು ಕಡೂರಿನಿಂದ ಮಂಗಳೂರು ಕಡೆಗೆ ಕದ್ದ ಚಿನ್ನ-ಬೆಳ್ಳಿ ಮಾರಲು ತೆರಳುತ್ತಿದ್ದ ಇಬ್ಬರು ಕಳ್ಳರನ್ನು ಹಳೇಬೀಡು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸೆ.7 ರಂದು ಹಾಸನ ನಗರದ ವಿಶ್ವೇಶ್ವರಯ್ಯ ಬಡಾವಣೆಯ ಗ್ರಾನೈಟ್ ಉದ್ಯಮಿ ರಘು ಎಂಬುವರ ಮನೆಯಲ್ಲಿ ಕಳ್ಳತನವಾಗಿತ್ತು. 2 ಕೆಜಿ ಚಿನ್ನ, ಒಂದು ಡೈಮಂಡ್ ಸೆಟ್, 5 ಕೆಜಿ ಬೆಳ್ಳಿ, 22 ಲಕ್ಷ ರೂ. ನಗದು ಕದ್ದಿದ್ದಾರೆಂದು ಹಾಸನದ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ರಘು ದೂರು ನೀಡಿದ್ದರು. ಈ ಪ್ರಕರಣವನ್ನು ಭೇದಿಸಲು ಐದು ತಂಡಗಳನ್ನು ರಚಿಸಲಾಗಿತ್ತು. ಹಳೇಬೀಡು ಪೊಲೀಸರ ಚಾಕಚಕ್ಯತೆಯಿಂದಾಗಿ ಇಬ್ಬರು ಖತರ್ನಾಕ್‌ ಮನೆಗಳ್ಳರು ಬಂಧಿಸಲ್ಪಟ್ಟಿದ್ದು, ಇನ್ನಿಬ್ಬರು ಆರೋಪಿಗಳಿಗಾಗಿ ಬಲೆ ಬೀಸಲಾಗಿದೆ ಎಂದು ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.

ಇಂದು (ನ.12) ಹಳೇಬೀಡು ಜಾವಗಲ್ ರಸ್ತೆ ಮಾಯಗೊಂಡನಹಳ್ಳಿ ಚೆಕ್ ಪೋಸ್ಟ್​​ನಲ್ಲಿ ಅನುಮಾನಾಸ್ಪದ ಕಾರನ್ನು ಪರಿಶೀಲನೆ ಮಾಡಿದಾಗ ಕಡೂರು ಹಾಗೂ ಶಿವಮೊಗ್ಗ ಮೂಲದ ಇಬ್ಬರು ಖದೀಮರು ಸಿಕ್ಕಿಬಿದ್ದಿದ್ದಾರೆ. ಬಂಧಿತರು ಕಡೂರಿನಿಂದ ಮಂಗಳೂರು ಕಡೆ ಹೊರಟಿದ್ದು, ಕದ್ದ ಒಡವೆಗಳನ್ನು ಮಂಗಳೂರು ಮತ್ತು ಕೇರಳದ ಮಂಜೇಶ್ವರ ತಾಲೂಕಿನ ಉಪ್ಪಳಕ್ಕೆ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದರು. ಅವರ ಬಳಿಯಿಂದ 727 ಗ್ರಾಂ ಚಿನ್ನದ ಒಡವೆಗಳು, 4 ಕೆಜಿ 800 ಗ್ರಾಂ ಬೆಳ್ಳಿಯ ಪದಾರ್ಥಗಳು, ಎರಡು ಲಕ್ಷ ರೂಪಾಯಿ ನಗದು ಹಾಗೂ 2 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net