

ಹಾಸನ: ಸರ್ಕಾರಿ ಶಾಲಾ ಮೈದಾನದಲ್ಲಿ ಆರ್‌ಎಸ್‌ಎಸ್ ಚಟುವಟಿಕೆ ನಡೆಸದಂತೆ ಸುತ್ತೋಲೆ ಹೊರಡಿಸಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದ ವಿಚಾರಕ್ಕೆ ನಾವು ಉತ್ತರ ಕೊಡುವುದು ಸಮಂಜಸವಲ್ಲ ಎಂದು ವಿಧಾನ ಪರಿಷತ್ ಉಪಸಭಾಪತಿ ಪ್ರಾಣೇಶ್ ಹೇಳಿದರು.
ಗುರುವಾರ ಹಾಸನಾಂಬೆ ದರ್ಶನ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿ, ಇಡೀ ದೇಶ, ಪ್ರಪಂಚದ ಒಳಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂದರೆ ಎಲ್ಲರಿಗೂ ತಿಳಿದಿರುವ ವಿಚಾರ. ತಿಳಿದಿರುವ ವಿಚಾರಗಳನ್ನು ತಿಳಿವಳಿಕೆ ಇಲ್ಲದಂತಹವರು ಮಾತನಾಡಿದಾಗ ಅದರ ಬಗ್ಗೆ ಏನಂತ ಉತ್ತರ ಕೊಡಬೇಕು ಎಂದು ಪ್ರಶ್ನಿಸಿದರು.
ಆರ್‌ಎಸ್‌ಎಸ್ ಇಂದು, ನಿನ್ನೆಯದಲ್ಲ. 1925ರಿಂದ ಪ್ರಾರಂಭವಾಗಿದೆ. ಇವರು ಕಣ್ಣು ಬಿಡುವುದಕ್ಕೆ ಮುಂಚೆ, ಇವರ ತಲೆಮಾರು, ಇವರ ಹಿಂದಿನ ತಲೆಮಾರುಗಳು ಕೂಡ ಒಪ್ಪಿಕೊಂಡಿದ್ದಾರೆ. ಜವಾಹರ್ ಲಾಲ್ ನೆಹರು, ಇಂದಿರಾಗಾಂಧಿ ವಿರೋಧ ಮಾಡಿ ಮತ್ತೆ ಒಪ್ಪಿಕೊಂಡಿದ್ದಾರೆ. ಗಣರಾಜ್ಯೋತ್ಸವದಲ್ಲಿ ಸಂಘಕ್ಕೆ ಪರೇಡ್ ಮಾಡಲಿಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಇವೆಲ್ಲವೂ ಕಣ್ಣ ಮುಂದೆ ಇದೆ. ಪ್ರಿಯಾಂಕ್ ಖರ್ಗೆ ರಾಜ್ಯದ ಮಂತ್ರಿ. ತನ್ನ ನಡವಳಿಕೆಗಳು ಹೇಗೆ ಇರಬೇಕು, ಜ್ಞಾನ ಹೇಗಿರಬೇಕು ಎಂದು ತಿಳಿದುಕೊಳ್ಳಬೇಕು. ಈ ರೀತಿ ತಿಳಿವಳಿಕೆ ಇಲ್ಲದವರು ಸರ್ಕಾರದಲ್ಲಿ ಮುಂದುವರಿಯುವುದಕ್ಕಿಂತ ರಾಜೀನಾಮೆ ಕೊಟ್ಟು ಮತ್ತೆ ತಿಳಿವಳಿಕೆ ಪಡೆದು ಮಂತ್ರಿಯಾಗುವುದು ಸೂಕ್ತ ಎಂದರು.
ಮನುಷ್ಯನಿಗೆ ತುಂಬಾ ವಿದ್ಯಾಭ್ಯಾಸದ ಅವಶ್ಯಕತೆ ಇದೆ. ವಿದ್ಯಾಭ್ಯಾಸದ ಕೊರತೆಯಿಂದ ಈ ಮಾತುಗಳನ್ನು ಆಡುತ್ತಿದ್ದಾರೆ. ಪ್ರಿಯಾಂಕ್ ಖರ್ಗೆಯವರೇ ಇನ್ನಾದರೂ ಪತ್ರ ಬರೆಯುವುದು, ಮಾತನಾಡುವಾಗ ಹಿನ್ನೆಲೆಗಳನ್ನು ತಿಳಿಯಿರಿ. ಆರ್‌ಎಸ್‌ಎಸ್ ನಡೆದುಕೊಂಡು ಬಂದ ದಾರಿಯನ್ನು, ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡಿರುವ ವಿಚಾರಗಳನ್ನು ವಿಷಯಾಧಾರಿತವಾಗಿ ಮಾತನಾಡಿದರೆ ಸೂಕ್ತ. ಆಗ ನಿಮಗೂ ಗೌರವ ಬರುತ್ತದೆ ಎಂದರು.