ಸಚಿವ ಪ್ರಿಯಾಂಕ್ ಖರ್ಗೆ ಕನಸಿನ "ಚಿತ್ತಾಪುರ" ಸಮಗ್ರ ಅಭಿವೃದ್ಧಿಗೆ ಮಾಸ್ಟರ್‌ ಪ್ಲಾನ್ ರೆಡಿ

IMG-20240205-WA0057
Published on

ಬೆಂಗಳೂರಿನ ಸಚಿವರ ಕಚೇರಿಯಲ್ಲಿ ಚಿತ್ತಾಪುರ ನಗರದ ಯೋಜನಾ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಸಲಹೆ

ಬೆಂಗಳೂರು: ಕಲಬುರಗಿ ಜಿಲ್ಲೆಯ ಚಿತ್ತಾಪುರ ನಗರವನ್ನು 2041ನೆ ವರ್ಷದ ಜನಸಂಖ್ಯೆಯ ಗುರಿಯಿರಿಸಿಕೊಂಡು ಆಧುನಿಕವಾಗಿ ಸರ್ವತೋಮುಖ ಅಭಿವೃದ್ಧಿ ಪಡಿಸಲು ಈ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಆಸಕ್ತಿ ವಹಿಸಿದ್ದು, ಬೆಂಗಳೂರಿನ ತಮ್ಮ ಕಚೇರಿಯಲ್ಲಿ ʼಚಿತ್ತಾಪುರ ಮಾಸ್ಟರ್‌ ಪ್ಲಾನ್‌ʼ ವೀಕ್ಷಿಸಿ ಮತ್ತಷ್ಟು ಸುಧಾರಣೆ ಮಾಡಲು ಸೂಚಿಸಿದರು. 

ಚಿತ್ತಾಪುರ ನಗರ ಯೋಜನೆ ಅಧಿಕಾರಿಗಳ ತಂಡದೊಂದಿಗೆ ಇಂದು ಚರ್ಚೆ ನಡೆಸಿದ ಸಚಿವ ಪ್ರಿಯಾಂಕ್‌ ಖರ್ಗೆ ಅವರು ವ್ಯಾಪಾರ ಹಾಗೂ ವಾಣಿಜ್ಯ ಸಂಸ್ಥೆಗಳು, ಕೈಗಾರಿಕೆಗಳು, ಶಾಲೆ ಹಾಗೂ  ಕಾಲೇಜುಗಳು, ಉದ್ಯಾನವನ, ಸರ್ಕಾರಿ ಕಚೇರಿಗಳು ಸೇರಿದಂತೆ ನಗರದ ವಿಸ್ತರಣೆ ಹಾಗೂ ಸಂಪರ್ಕ ಕಲ್ಪಿಸುವ ವಿಶಾಲ ರಸ್ತೆಗಳನ್ನು ರೂಪಿಸುವ ಯೋಜನೆ ಇದಾಗಿದೆ. 2041ರ ಜನಸಂಖ್ಯೆಯನ್ನು ಆಧರಿಸಿ, ಕುಡಿಯುವ ನೀರಿನ ಸಂಸ್ಕರಣೆ ಹಾಗೂ ತ್ಯಾಜ್ಯ ನೀರು ಸಂಸ್ಕರಣ ಘಟಕಗಳಿಗೆ ಸೂಕ್ತ ಸ್ಥಳ, ನಗರ ವಿಸ್ತರಣೆಗೆ ಅನುಗುಣವಾಗುವಂತೆ ಉದ್ಯಾನವನಗಳು, ಕ್ರೀಡಾಂಗಣ ಮುಂತಾದ ಸೌಲಬ್ಯಗಳನ್ನು ಉದ್ದೇಶಿತ ಮಾಸ್ಟರ್‌ ಪ್ಲಾನ್‌ ಒಳಗೊಳ್ಳಲಿದೆ.

ಇತಿಹಾಸ ಪ್ರಸಿದ್ಧವಾದ ನಾಗಾವಿ ಕೇಂದ್ರವನ್ನು ಒಳಗೊಂಡಂತೆ ಹಾಗೂ ಈ ಸ್ಥಳಕ್ಕೆ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವಂತೆ ಚಿತ್ತಾಪುರ ನಗರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಸಂಕಲ್ಪಿಸಲಾಗಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಈ ಸಂದರ್ಭಲ್ಲಿ ಹೇಳಿದರು. ʼಚಿತ್ತಾಪುರ ತಾಲ್ಲೂಕು ಶಹಾಬಾದ್‌, ವಾಡಿ ತಾಲ್ಲೂಕುಗಳ ಎಲ್ಲೆಗಳನ್ನು ಹೊಂದಿದ್ದು ಈ ಎರಡೂ ಸ್ಥಳಗಳಿಂದ ಉತ್ತಮ ಸಂಪರ್ಕವನ್ನು ಕಲ್ಪಿಸುವ ಯೋಜನೆಯೂ ಇದೆ, ಕಲಬುರಗಿಯನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿಯೂ ಚಿತ್ತಾಪುರ ಹಾದು ಹೋಗುವುದು, ಚಿತ್ತಾಪುರದಲ್ಲಿ ಕೈಗಾರಿಕಾ ಅಭಿವೃದ್ಧಿಯಾದಲ್ಲಿ ಅಕ್ಕಪಕ್ಕದ ಹಳ್ಳಿಗಳು ಹಾಗೂ ಪಟ್ಟಣಗಳ ಯುವಕರಿಗೆ ಹೆಚ್ಚು ಉದ್ಯೋಗಾವಕಾಶಗಳು ಸಿಗಲಿವೆʼ ಎಂದೂ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net