

ಅರಸೀಕೆರೆ: ಸಣ್ಣಪುಟ್ಟ ಸಮುದಾಯಗಳು ಸಂಘಟಿತರಾದಲ್ಲಿ ಮಾತ್ರವೇ ಸರ್ಕಾರದ ಸವಲತ್ತುಗಳನ್ನು ಪಡೆಯಲು ಸಾಧ್ಯ ಎಂದು ಜೆಡಿಎಸ್ ಮುಖಂಡ ಎನ್.ಆರ್. ಸಂತೋಷ್ ಹೇಳಿದರು.
ನಗರದ ಸೀತಾರಾಮ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಕೋಡುಗೊಲ್ಲ ಸಮುದಾಯದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಭಾರತೀಯ ಸಂಸ್ಕೃತಿಯ ಅಭ್ಯುದಯಕ್ಕೆ ಕೋಡುಗೊಲ್ಲ ಸಮಾಜದ ಕೊಡುಗೆ ಅಪಾರ ಎಂಬುದನ್ನು ಮರೆಯಬಾರದು. ರಾಜಕೀಯ, ಶಿಕ್ಷಣ, ಆರ್ಥಿಕ, ಸಾಮಾಜಿಕ ಸ್ಥಾನಮಾನ ಪಡೆಯಲು ಸಂಘಟನೆ ಬಲಿಷ್ಠಗೊಳಿಸುವ ಅಗತ್ಯವಿದೆ ಎಂಬುದನ್ನು ಮನಗಂಡು ಯುವ ಸಮುದಾಯ ಸೂಕ್ತ ಸಮಯದಲ್ಲಿ ಉತ್ತಮ ತೀರ್ಮಾನ ತೆಗೆದುಕೊಂಡಿದೆ. ಕಾಡುಗೊಲ್ಲರ ಏಳಿಗೆಗೆ ಶಕ್ತಿ ಮೀರಿ ಸಹಕಾರ ನೀಡುತ್ತೇನೆ ಎಂದರು.
ಕಾಡುಗೊಲ್ಲರ ಪರಿಷತ್ ರಾಜ್ಯಾಧ್ಯಕ್ಷ ಅರುಣ್ ಕೃಷ್ಣಯ್ಯ ಮಾತನಾಡಿ, ಬೆರಳೆಣಿಕೆ ಜನರಿಂದ ಸಂಘಟನೆ ಬಲಗೊಳಿಸಲು ಸಾಧ್ಯವಿಲ್ಲ. ಒಗ್ಗಟ್ಟಿನ ಕೊರತೆಯಿಂದ ಸರ್ಕಾರದ ಸವಲತ್ತುಗಳನ್ನು ಪಡೆಯಲು ಸಂಕಷ್ಟ ಅನುಭವಿಸುವಂತಾಗಿದೆ.ಇದನ್ನೇ ಬಂಡವಾಳ ಮಾಡಿಕೊಂಡಿರುವ ರಾಜಕಾರಣಿಗಳು ಚುನಾವಣೆ ವೇಳೆ ಬಳಸಿಕೊಂಡು ಬಿಸಾಡುವ ಪ್ರವೃತ್ತಿ ಮುಂದುವರಿಸಿಕೊಂಡು ಬಂದಿದ್ದಾರೆ. ಎಲ್ಲರೂ ಒಗ್ಗೂಡಿ ಹೋರಾಟ ನಡೆಸುವ ಮೂಲಕ ನ್ಯಾಯ ಬದ್ಧ ಹಕ್ಕು ಪಡೆಯೋಣ ಎಂದು ಕರೆ ನೀಡಿದರು.
ಸಮುದಾಯದ ಮುಖಂಡ ಹಾಗೂ ದುಮ್ಮೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಜಯ್ ಮಾತನಾಡಿ, ಹಿಂದುಳಿದ ವರ್ಗಗಳ ದೌರ್ಬಲ್ಯ ಅರಿತಿರುವ ಕೆಲವರು ಮತ ಹಾಕಿಸಿಕೊಳ್ಳುವವರೆಗೆ ಇಂದ್ರ, ಚಂದ್ರನನ್ನು ತೋರಿಸುತ್ತಾರೆ. ನಂತರ ತಮಗೇನು ಗೊತ್ತಿಲ್ಲ ಎನ್ನುವ ರೀತಿ ನಾಟಕ ಮಾಡಿ ಲಾಭ ಮಾಡಿಕೊಳ್ಳುತ್ತಿರುವುದು ಜಗಜ್ಜಾಹಿರಾಗಿದೆ. ದೇಶ ಭಕ್ತಿ, ಸಾಮಾಜಿಕ ನ್ಯಾಯ ಇರುವವರನ್ನು ಗೌರವಿಸುವ ನಾಯಕತ್ವ ಬೆಂಬಲಿಸೋಣ ಎಂದು ಹೇಳಿದರು.
ರಾಜ್ಯ ಘಟಕದ ಉಪಾಧ್ಯಕ್ಷ ಉಮೇಶ್ ಈರಣ್ಣ, ಜಿಲ್ಲಾಧ್ಯಕ್ಷ ಸೋಮಶೇಖರ್, ಉಪಾಧ್ಯಕ್ಷ ತೋಂಟದಾರ್ಯ, ತುಮಕೂರು ಜಿಲ್ಲಾ ಘಟಕದ ಉಪಾಧ್ಯಕ್ಷ ಗುರುಶಾಂತ, ಪವನ್ ಕುಮಾರ್, ತಾಲೂಕು ಅಧ್ಯಕ್ಷ ಅಶೋಕ್ ಇತರರು ಇದ್ದರು. ಅರಸೀಕೆರೆ ತಾಲೂಕು ಘಟಕದ ಪದಾಧಿಕಾರಿಗಳು ಪದಗ್ರಹಣ ಸ್ವೀಕರಿಸಿದರು.