ಸಹಜ ಕೃಷಿಗೆ ಆಯ್ಕೆಯಾದ ರೈತರಿಗೆ ಸವಲತ್ತು

oppo_2
oppo_2
Published on

ಹನೂರು: ಸಹಜ ಕೃಷಿಗೆ ಆಯ್ಕೆಯಾದ ರೈತರಿಗೆ ಇಲಾಖೆಯಿಂದ ದೊರಕುವ ಸವಲತ್ತುಗಳನ್ನು ಒದಗಿಸಿಕೊಡಲಾಗುವುದು ಎಂದು ತೋಟಗಾರಿಕೆ ಇಲಾಖೆ ಹಿರಿಯ ನಿರ್ದೇಶಕಿ ವಿನುತಾ ತಿಳಿಸಿದರು.


ಪಟ್ಟಣದ ಹಳೇ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಹಾಗೂ ಚಾಮರಾಜನಗರ ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ ವತಿಯಿಂದ 2024-25ನೇ ಸಾಲಿನ ಆತ್ಮ ಯೋಜನೆಯಡಿ ಸಹಜ ಕೃಷಿ ಅನುಷ್ಠಾನ ಸಂಬಂಧ ಆಯೋಜಿಸಿದ್ದ ರೈತರ ತರಬೇತಿ ಕಾರ್ಯಾಗಾರಲ್ಲಿ ಮಾತನಾಡಿದರು.


ಜಿಲ್ಲೆಯಲ್ಲಿ ಸಹಜ ಕೃಷಿ ಅನುಷ್ಠಾನ ಸಂಬಂಧ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ನೇತೃತ್ವದಲ್ಲಿ ಪೈಲೆಟ್ ಯೋಜನೆಯನ್ನು ರೂಪಿಸಿದ್ದು, ಇದರಲ್ಲಿ ಪ್ರತಿ ತಾಲೂಕಿನಿಂದ 10 ಗ್ರಾಮ ಪಂಚಾಯಿತಿ ಪೈಕಿ 10 ರೈತರನ್ನು ಸಹಜ ಕೃಷಿಗೆ ಆಯ್ಕೆ ಮಾಡಲಾಗುವುದು. ಜಿಲ್ಲಾ ಕೇಂದ್ರದಲ್ಲಿ ಈ ಕುರಿತು ಪರಿಣಿತರಿಂದ ತರಬೇತಿ ನೀಡಲಾಗುವುದು. ಸಹಜ ಕೃಷಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನರೇಗಾ ಯೋಜನೆಯಡಿ ಹಾಗೂ ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ಸಹಾಯ ಧನ ನೀಡಲಾಗುವುದು. ಜತೆಗೆ ಇಲಾಖೆಯ ಮಾರ್ಗಸೂಚಿ ಅನ್ವಯ ಜೇನು ಕೃಷಿ ಅಳವಡಿಕೆ, ಹನಿ ನೀರಾವರಿ, ಯಾಂತ್ರೀಕರಣ ಯೋಜನೆಯಡಿ ಕೃಷಿ ಸಾಮಗ್ರಿಗಳ ಖರೀದಿಗೂ ಸಹಾಯಧನ ನೀಡಲಾಗುವುದು. ಆದ್ದರಿಂದ ಪ್ರತಿಯೊಬ್ಬರೂ ತರಬೇತಿಯ ಪ್ರಯೋಜನವನ್ನು ಸದುಪಯೋಗ ಪಡೆದುಕೊಂಡು ಜಮೀನಿನಲ್ಲಿ ಅನುಷ್ಠಾನಗೊಳಿಸಬೇಕು. ಇದರಿಂದ ರೈತರು ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದು ಎಂದು ತಿಳಿಸಿದರು.


ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ಸಹಜ ಕೃಷಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಗ್ರಾಪಂ ಮೂಲಕ ಈ ಯೋಜನೆಯನ್ನು ರೂಪಿಸುತ್ತಿರುವುದು ದೇಶದಲ್ಲಿ ಮಾದರಿಯಾಗಿದ್ದು, ಆಯ್ಕೆಯಾದ ರೈತರು 4 ವರ್ಷ ಸಹಜ ಕೃಷಿಗೆ ಒಳಪಟ್ಟಿರುತ್ತಾರೆ. ಹನೂರು ಭಾಗದಲ್ಲಿ ರೈತರು ಹೆಚ್ಚಾಗಿ ಕೃಷಿಯನ್ನು ಅವಲಂಬಿಸಿದ್ದಾರೆ. ಆದರೆ ಮಾಹಿತಿ ಕೊರತೆಯಿಂದ ಸಹಜ ಕೃಷಿಯತ್ತ ಮನಸ್ಸು ಮಾಡುತ್ತಿಲ್ಲ. ಆದ್ದರಿಂದ ಅಧಿಕಾರಿಗಳು ಹಾಗೂ ಗ್ರಾಮ ಮಟ್ಟದಲ್ಲಿ ಕೃಷಿ ಸಖಿಯರು ಅಗತ್ಯ ಮಾಹಿತಿಯನ್ನು ತಿಳಿಸುವುದರ ಮೂಲಕ ರೈತರನ್ನು ಸಹಜ ಕೃಷಿಯತ್ತ ಕರೆ ತರಬೇಕು. ಇಲಾಖೆಯಿಂದ ಸವಲತ್ತುಗಳನ್ನು ಒದಗಿಸಿ ಕೊಡಬೇಕು ಎಂದು ತಿಳಿಸಿದರು.


ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್, ಕೃಷಿ ಅಧಿಕಾರಿ ನಾಗೇಂದ್ರ, ತಾಪಂ ಸಹಾಯಕ ನಿರ್ದೇಶಕ ರವೀಂದ್ರ, ಲೊಕ್ಕನಹಳ್ಳಿ ಗ್ರಾಪಂ ಅಧ್ಯಕ್ಷ ನಾಗೇಶ್, ಪಿಡಿಒ ರಘುನಾಥ್, ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಅಧ್ಯಕ್ಷ ಚಂಗಡಿ ಕರಿಯಪ್ಪ, ಗ್ರಾಮ ಘಟಕದ ಅಧ್ಯಕ್ಷ ಮಾದಪ್ಪ, ರೈತ ಮುಖಂಡರಾದ ವೆಂಕಟೇಗೌಡ, ರಾಜೀಜಿರಾವ್, ಶ್ರೀನಿವಾಸ್, ಭೈರನತ್ತ ರಾಜು, ಗಂಗಾಧರ್, ಕೃಷಿ ಸಖಿಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net