

ಅರಸೀಕೆರೆ: ಪಶುವೈದ್ಯಕೀಯ ಇಲಾಖೆಗೆ ಬರುವ ಜಾನುವಾರು ಲಸಿಕೆ, ಔಷಧ ಸೇರಿದಂತೆ ಇನ್ನಿತರ ಪರಿಕರಗಳು ಖಾಸಗಿ ಅಂಗಡಿಗಳ ಪಾಲಾಗುತ್ತಿದ್ದು, ಲೋಪ ತಡೆಯುವ ಕುರಿತು ಅಗತ್ಯ ಕ್ರಮ ಕೈಗೊಳ್ಳಬೇಕು ಎನ್ನುವ ವಿಷಯ ಕರ್ನಾಟಕ ಗೃಹಮಂಡಳಿ ಅಧ್ಯಕ್ಷ, ಶಾಸಕ ಕೆ.ಎಂ.ಶಿವಲಿಂಗೇಗೌಡ ಹಾಗೂ ಪಶುವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಶಶಿಕಾಂತ್ ಬೂದಿಹಾಳ್ ನಡುವೆ ಮಾತಿನ ಚಕಮಕಿಗೆ ಸಾಕ್ಷಿಯಾಯಿತು.
ನಗರದ ತಾಲೂಕು ಪಂಚಾಯಿತಿ ಸಾಮರ್ಥ್ಯಸೌಧ ಸಭಾಂಗಣದಲ್ಲಿ ಗುರುವಾರ ಶಾಸಕ ಕೆ.ಎಂ.ಶಿವಲಿಂಗೇಗೌಡ ಹಾಗೂ ಬೇಲೂರು ಶಾಸಕ ಎಚ್.ಕೆ.ಸುರೇಶ್ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಸಭೆಯಲ್ಲಿ ಮೇಲಿನ ವಿಷಯ ಚರ್ಚೆಗೆ ಬಂತು.
ಹೈನುಗಾರಿಕೆ ಬಡವರ ಪಾಲಿನ ಆಶಾಕಿರಣವಾಗಿದೆ. ಅತಿಹೆಚ್ಚು ಹಾಲು ನೀಡುವ ಹಸುಗಳು ರೋಗಬಾಧೆಯಿಂದ ದಿಢೀರ್ ಸಾವಿಗೀಡಾಗುತ್ತಿದ್ದು, ಸಂಕಷ್ಟ ಎದುರಿಸುವಂತಾಗಿದೆ. ಲಸಿಕೆ, ಔಷಧ ಸೇರಿದಂತೆ ಇನ್ನಿತರ ಪರಿಕರಗಳು ಖಾಸಗಿ ಅಂಗಡಿಗಳ ಪಾಲಾಗುತ್ತಿವೆ ಎನ್ನುವ ದೂರುಗಳು ಕೇಳಿ ಬರುತ್ತಿದ್ದು, ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಪಶುವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಶಶಿಕಾಂತ್ ಬೂದಿಹಾಳ್ ಅವರನ್ನು ಕೆ.ಎಂ.ಶಿವಲಿಂಗೇಗೌಡ ಪ್ರಶ್ನಿಸಿದರು.
ಅರಸೀಕೆರೆ ಹಾಗೂ ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ 37 ಪಶುವೈದ್ಯಕೀಯ ಆಸ್ಪತ್ರೆಗಳಿವೆ. ಸರ್ಕಾರದಿಂದ ಪೂರೈಕೆ ಮಾಡುತ್ತಿರುವ ಔಷಧಗಳ ಮೇಲೆ ಅಧಿಕೃತ ಮದ್ರೆಯಿರುತ್ತದೆ. ಖಾಸಗಿಯವರಿಗೆ ಮಾರಾಟ ಮಾಡಲು ಸಾಧ್ಯವಿಲ್ಲ. ಸುಖಾಸುಮ್ಮನೆ ಅಧಿಕಾರಿಯೊಬ್ಬರ ಮೇಲೆ ಅರೋಪ ಮಾಡುವುದು ಸರಿಯಲ್ಲ ಎಂದು ಏರುದನಿಯಲ್ಲಿ ಉತ್ತರಿಸಿದರು.
ಇದರಿಂದ ಕೆರಳಿದ ಶಾಸಕ ಕೆ.ಎಂ.ಶಿವಲಿಂಗೇಗೌಡ, ರೈತರು ಕೇಳುವ ಪ್ರಶ್ನೆಗಳಿಗೆ ಸಭೆಯಲ್ಲಿ ಪರಿಹಾರ ಕಂಡುಕೊಳ್ಳಬೇಕಿದ್ದು ಸಮರ್ಪಕ ಮಾಹಿತಿ ನೀಡಬೇಕು. ಮನಸ್ಸಿಗೆ ಬಂದಂತೆ ಮಾತನಾಡುವುದು ಸರಿಯಲ್ಲ ಎಂದು ತರಾಟೆಗೆ ತೆಗುದುಕೊಂಡರಲ್ಲದೆ ಅಧಿಕಾರಿಯ ವರ್ತನೆಯನ್ನು ನಡಾವಳಿ ಪುಸ್ತಕದಲ್ಲಿ ದಾಖಲಿಸುವಂತೆ ತಾಪಂ ಇಒ ಗಂಗಣ್ಣ ಅವರಿಗೆ ಸೂಚಿಸಿದರು. ನಿವೃತ್ತಿಯ ಅಂಚಿನಲ್ಲಿರುವ ನಾನು ಯಾವುದೇ ತಪ್ಪು ಮಾಡಿಲ್ಲ. ಒಬ್ಬ ದಲಿತ ಅಧಿಕಾರಿಯ ಮೇಲೆ ದರ್ಪ ತೋರುತ್ತಿರುವುದನ್ನು ಸಹಿಸಲಾಗದು. ಸುಖಾಸುಮ್ಮನೆ ಭ್ರಷ್ಟಾಚಾರದ ಆರೋಪ ಮಾಡಲಾಗುತ್ತಿದ್ದು ಸುದ್ದಿ ಮಾಧ್ಯಮವದರು ಇದ್ದಾರೆ. ಲೋಪವಾಗಿದ್ದರೆ ನೇಣಿಗೆ ಹಾಕಿ ಎಂದು ಸಹಾಯಕ ನಿರ್ದೇಶಕ ಶಶಿಕಾಂತ್ ಬೂದಿಹಾಳ್ ಅಸಹಾಯಕತೆ ತೋಡಿಕೊಂಡರು.
ತಕ್ಷಣವೇ ಮಧ್ಯೆಪ್ರವೇಶಿಸಿದ ಎಚ್.ಕೆ.ಸುರೇಶ್, ಉಭಯ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಆಂಬುಲೆನ್ಸ್ ಹಾಗೂ ಔಷಧ ಕೊರತೆಯಿದ್ದರೆ ಸರ್ಕಾರದ ಗಮನ ಸೆಳೆಯುತ್ತೇವೆ. ಅಧಿಕಾರಿಯೊಬ್ಬರು ಉದ್ವೇಗದಿಂದ ಮಾತನಾಡುವುದು ಸಭೆಗೆ ಶೋಭೆ ತರುವುದಿಲ್ಲ ಎಂದು ಹೇಳಿ ಪರಿಸ್ಥಿತಿ ತಿಳಿಗೊಳಿಸಿದರು.
ಉದ್ಘಾಟನೆ ಕಾಣದ ರೈತ ಸಂಪರ್ಕ ಕೇಂದ್ರ: ಕೃಷಿ ಇಲಾಖೆ ವತಿಯಿಂದ ಜಾವಗಲ್ ಹೋಬಳಿಯಲ್ಲಿ ನಿರ್ಮಿಸಿರುವ ರೈತ ಸಂಪರ್ಕ ಕೇಂದ್ರವನ್ನು ಇದೂವರೆಗೂ ಉದ್ಘಾಟನೆ ಮಾಡಿಲ್ಲ. ಅನ್ನದಾತರ ಸಂಕಷ್ಟ ಎದುರಿಸುವಂತಾಗಿದ್ದು, ಕೂಡಲೇ ಕೃಷಿ ಸಚಿವರಿಗೆ ಪತ್ರ ಬರೆಯಬೇಕು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎ.ಪಿ.ಶಿವಕುಮಾರ್ ಅವರಿಗೆ ಎಚ್.ಕೆ.ಸುರೇಶ್ ಸೂಚಿಸಿದರು.
ರಾಗಿ, ಮುಸುಕಿನ ಜೋಳ ಒಳಗೊಂಡಂತೆ ವಿವಿಧ ಬೆಳೆಗಳು ಹಾಳಾಗಿದ್ದು, ವಿಮಾ ಮೊತ್ತ ತಲುಪಿಸಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ರೇಷ್ಮೆ ಕೃಷಿ ವಿಸ್ತರಣೆಗೂ ಉತ್ತೇಜನ ಕೊಡಬೇಕು ಎಂದು ಶಾಸಕರಿಬ್ಬರೂ ಹೇಳಿದರು.
ಮೀನುಗಾರಿಕೆ, ಸಮಾಜಕಲ್ಯಾಣ, ಲೋಕೋಪಯೋಗಿ, ಸಣ್ಣ ನಿರಾವರಿ, ಆಹಾರ, ಆರೋಗ್ಯ, ತೋಟಗಾರಿಕೆ ಒಳಗೊಂಡಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು. ತಹಸೀಲ್ದಾರ್ ಎಂ.ಜಿ.ಸಂತೋಷ್ ಕುಮಾರ್, ಡಿವೈಎಸ್‌ಪಿ ಬಿ.ಆರ್.ಗೋಪಿ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಗೀಜಿಹಳ್ಳಿ ಧರ್ಮಶೇಖರ್, ಇಒ ಗಂಗಣ್ಣ ಹಾಗೂ ಕೆಡಿಪಿ ಸದಸ್ಯರು ಪಾಲ್ಗೊಂಡಿದ್ದರು.