

ಹಾಸನ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಖಾಸಗಿ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ವತಿಯಿಂದ ಶುಕ್ರವಾರ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಖಾಸಗಿ ಶಾಲೆಗಳ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಜಿಲ್ಲೆಯ ಖಾಸಗಿ ಅನುದಾನರಹಿತ ಶಾಲೆಗಳ ಜಿಲ್ಲಾ ಅತ್ಯುತ್ತಮ ಶಿಕ್ಷಕ, ಶಿಕ್ಷಕಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಆಲೂರು ತಾಲೂಕಿನ ಮನ್ಸೂರ್ ಶಾಲೆ ಶಿಕ್ಷಕ ಮೊಹ್ಸಿನ್ ಅಲಿ, ಅರಕಲಗೂಡು ತಾಲೂಕಿನ ನಿವೇದಿತಾ ಶಾಲೆಯ ಬಿ.ಎಂ.ರಾಗಿಣಿ, ಅರಸೀಕೆರೆ ತಾ. ಜಾವಗಲ್‌ನ ಮಾಡೆಲ್ ಆಂಗ್ಲ ಶಾಲೆಯ ಪ್ರಸನ್ನ ಕುಮಾರ್, ಬೇಲೂರು ತಾ. ವಿದ್ಯಾ ವಿಕಾಸ ಪಬ್ಲಿಕ್ ಶಾಲೆಯ ಶಾಲಿನಿ ಕೇಶವ್, ಚನ್ನರಾಯಪಟ್ಟಣ ತಾ. ಜ್ಞಾನಸಾಗರ ಇಂಟರ್‌ನ್ಯಾಷನಲ್ ಶಾಲೆಯ ವಿಜಿ ಪಿ.ಜೆ., ಹಾಸನ ತಾಲೂಕಿನ ವಿಜಯ ಶಾಲೆಯ ಅನಿತಾ ಜೆ. ಹಾಗೂ ವಿದ್ಯಾಸೌಧ ಶಾಲೆಯ ಮಮತಾ ಎಂ.ಜೆ., ಹೊಳೆನರಸೀಪುರ ತಾ. ವಾಸವಿ ಶಾಲೆಯ ಜಯಶಂಕರ್ ಹಾಗೂ ಸಕಲೇಶಪುರ ತಾ. ಗಣಪಯ್ಯ ರೋಟರಿ ಮೂಕ ಮತ್ತು ಕಿವುಡ ಮಕ್ಕಳ ಶಾಲೆಯ ಶಿಕ್ಷಕ ಈಶ್ವರಪ್ಪ ಹಕಾರಿ ಅವರನ್ನು ಸನ್ಮಾನಿಸಲಾಯಿತು.
ಖಾಸಗಿ ಅನುದಾನರಹಿತ ಶಾಲೆಗಳ ಒಕ್ಕೂಟದ ಅಧ್ಯಕ್ಷ ಬಿ.ಈ. ಶಿವರಾಮೇಗೌಡ ಮಾತನಾಡಿ, ಖಾಸಗಿ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಒತ್ತಾಯದ ಮೇರೆಗೆ, ಹಾಸನ ಜಿಲ್ಲಾಡಳಿತ, ಜಿಪಂ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇಂತಹ ಉತ್ತಮ ಕಾರ್ಯಕ್ಕೆ ಕಳೆದ ಐದು ವರ್ಷಗಳ ಹಿಂದೆ ಚಾಲನೆ ನೀಡಿದೆ ಎಂದರು.
ಖಾಸಗಿ ಅನುದಾನರಹಿತ ಶಾಲೆಗಳ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಟೈಮ್ಸ್ ಬಿ.ಕೆ. ಗಂಗಾಧರ್, ವಿಜಯ ಶಾಲೆಯ ಮುಖ್ಯಸ್ಥೆ ತಾರಾ ಎಸ್. ಸ್ವಾಮಿ ಇತರರು ಇದ್ದರು.