

* ಹತ್ತು ಮಂದಿಗೆ ತೀವ್ರ ಗಾಯ, ಮೂವತ್ತೆರಡು ಜನರಿಗೆ ಸಣ್ಣಪುಟ್ಟ ಗಾಯ
ಕನಕಪುರ
ತಾಲೂಕಿನ ಪ್ರೇಕ್ಷಣೀಯ ಸ್ಥಳ ಸಂಗಮದ ಕುಂಟೆಕಾರಚ್ ತಿರುವಿನ ಕಂದಕಕ್ಕೆ ಖಾಸಗಿ ಬಸ್ ಉರುಳಿಬಿದ್ದ ಪರಿಣಾಮ ಹತ್ತು ಮಂದಿಗೆ ತೀವ್ರ ಗಾಯವಾಗಿದ್ದು ಮೂವತ್ತೆರಡು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಬೆಂಗಳೂರಿನ ಆಸ್ಟೀನ್ ಟೌನ್ ಹಾಗೂ ರಿಚ್‌ಮಂಡ್ ಸರ್ಕಲ್‌ನ ಚರ್ಚ್‌ನಿಂದ ಬಂದಿದ್ದ ಸಗಾಯಿ ಮೇರಿ, ರಾಣಿ, ಸ್ಟೆಲ್ಲಾ, ಸೆಲ್ವಿ, ಮಂಜುಳಾ, ಮೇರಿ, ಮಾಳ್ವಿಕ, ಕಾರ್ತಿಕ್, ಕಲಾ, ಜಯ ಎಂಬುವವರ ತಲೆಗೆ ತೀವ್ರ ಪೆಟ್ಟುಬಿದ್ದಿದೆ. ಅವರನ್ನು ಕನಕಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ನಿಮ್ಹಾನ್ಸ್ ಮತ್ತು ಸೆಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್‌ನಲ್ಲಿದ್ದ 30 ಮಹಿಳೆಯರು, ಹನ್ನೊಂದು ಪುರುಷರು ಹಾಗೂ ಪವನ್ ಎಂಬ ಬಾಲಕ ಸೇರಿ ಹಲವರಿಗೆ ಗಾಯಗಳಾಗಿವೆ. ಹೇಮಂತ್‌ಕುಮಾರ್ ಕೋಕಿಲಾ, ಪ್ರಭಾಕರ್, ಸಂತೋಷ್, ನಾನ್ಸಿ, ಮೇರಿ, ಕ್ಲಾರಾ, ಮಂಜು ಎಂಬುವವರ ಕೈಕಾಲುಗಳು ಮುರಿದಿವೆ.
ಬೆಟ್ಟದ ಹಲಸೂರು ಯೇಸು ಕ್ರಿಸ್ತನ ಹಬ್ಬಕ್ಕೆ ಬಂದಿದ್ದ ಬೆಂಗಳೂರಿನ ಎರಡು ಖಾಸಗಿ ಬಸ್‌ಗಳು ಪ್ರೇಕ್ಷಣೀಯ ಸ್ಥಳ ಸಂಗಮ ವೀಕ್ಷಿಸಿ ವಾಪಸ್ ತೆರಳುತ್ತಿದ್ದ ವೇಳೆ ಒಂದು ಬಸ್ ಕಂದಕಕ್ಕೆ ಬಿದ್ದಿದೆ. ಹಿಂದೆ ಬರುತ್ತಿದ್ದ ಬಸ್ ಮರಕ್ಕೆ ಡಿಕ್ಕಿ ಹೊಡೆದಿದೆ. ಇದರಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುಮಾರು 50ಕ್ಕೂ ಹೆಚ್ಚು ಪ್ರಯಾಣಿಕರು ಬಸ್‌ನಲ್ಲಿದ್ದರು.
ಸ್ಥಳಕ್ಕೆ ಜಿಲ್ಲಾ ಆರೋಗ್ಯ ಅಧಿಕಾರಿ ನಿರಂಜನ್ ಮೂರ್ತಿ ಸೇರಿ ಹತ್ತಾರು ವೈದ್ಯರು ತೆರಳಿ ಗಾಯಾಳುಗಳಿಗೆ ತುರ್ತು ಚಿಕಿತ್ಸೆ ನೀಡಿದರು. ತೀವ್ರ ಗಾಯಗೊಂಡವರನ್ನು ಸಂಬಂಧಪಟ್ಟ ಆಸ್ಪತ್ರೆಗಳಿಗೆ ರವಾನಿಸಲಾಯಿತು. ಕಾಂಗ್ರೆಸ್ ಮುಖಂಡ ಏಳಗಳ್ಳಿ ರವಿ ಮತ್ತಿತರರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸುವಲ್ಲಿ ಯಶಸ್ವಿಯಾದರು. ಸಾತನೂರು ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಮಾಜಿ ಸಂಸದ ಡಿ.ಕೆ.ಸುರೇಶ್, ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿ ಕೂಡಲೇ ಅಗತ್ಯ ತಜ್ಞರ ಮಾಹಿತಿ ಪಡೆದು ತಡೆಗೋಡೆ ನಿರ್ಮಿಸುವ ಮೂಲಕ ಮುನ್ನೆಚ್ಚರಿಕೆ ಕ್ರಮ ವಹಿಸಲು ಒಂದು ವಾರದೊಳಗಾಗಿ ಸ್ಥಳ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿದ್ದಾರೆ. ಸಂಗಮದ ಮೊದಲನೇ ತಿರುವಿನ ಕುಂಟೆಕರಾಚ್ ಎಂಬ ಸ್ಥಳದಲ್ಲಿ ಇಂತಹ ಪ್ರಕರಣಗಳು ಸಂಭವಿಸುತ್ತಲೇ ಇದೆ, ಸರ್ಕಾರ ಕೂಡಲೇ ಅಪಘಾತಗಳನ್ನು ತಡೆಯಲು ಮುನ್ನೆಚ್ಚರಿಕೆಯನ್ನು ವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.