

ವಿಜಯವಾಣಿ ಸುದ್ದಿಜಾಲ ಮಂಗಳೂರು
ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ನೀಡುವ ರಾಜ್ಯ ಸರ್ಕಾರದ ‘ಶಕ್ತಿ’ ಯೋಜನೆಗೆ ದ.ಕ, ಉಡುಪಿ ಜಿಲ್ಲೆಗಳಲ್ಲಿಯೂ ಖಾಸಗಿ ಬಸ್ ಹಾಗೂ ಆಟೋ ಚಾಲಕರ ವಿರೋಧ ವ್ಯಕ್ತವಾಗಿದೆ.
ಈ ಯೋಜನೆಯಿಂದ ನಮಗೆ ನಷ್ಟವಾಗುತ್ತಿದ್ದು, ಬದುಕು ಮುನ್ನಡೆಸುವುದು ಸವಾಲಾಗಿದೆ. ಆದ್ದರಿಂದ ಈ ಯೋಜನೆಯನ್ನು ವಿರೋಧಿಸುತ್ತಿರುವುದಾಗಿ ಬಸ್ ಹಾಗೂ ಆಟೋ ಚಾಲಕರು ಹೇಳಿದ್ದಾರೆ.
ಖಾಸಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯರು ಈಗ ನಿಂತುಕೊಂಡಾದರೂ ಸರ್ಕಾರಿ ಬಸ್‌ನಲ್ಲೇ ಸಂಚರಿಸುತ್ತಿದ್ದಾರೆ. ಕಂಟ್ರಾಕ್ಟ್ ಕ್ಯಾರಿಯೇಜ್ ಬಸ್‌ಗಳಲ್ಲಿ ಪುರುಷ ಪ್ರಯಾಣಿಕರಷ್ಟೇ ಇರುತ್ತಾರೆ. ಮಂಗಳೂರು ನಗರ ವ್ಯಾಪ್ತಿಯಲ್ಲಿ ಖಾಸಗಿ ಬಸ್‌ಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರೂ, ಪುತ್ತೂರು-ಮಂಗಳೂರು, ಧರ್ಮಸ್ಥಳ-ಮಂಗಳೂರು ಮೊದಲಾದ ರೂಟ್‌ಗಳಲ್ಲಿ ಸರ್ಕಾರಿ ಬಸ್‌ಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಜತೆಗೆ ಖಾಸಗಿ ಬಸ್‌ಗಳು ಸಂಚರಿಸುತ್ತಿವೆ. ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರ ಸಂಖ್ಯೆ ದುಪ್ಪಟ್ಟಾಗಿದೆ. ಪರಿಣಾಮ ಖಾಸಗಿಯವರು ಆದಾಯ ಕಡಿಮೆ ಬರುತ್ತಿದೆ ಎನ್ನುತ್ತಿದ್ದಾರೆ. ಪೇಟೆಗೆ ರಿಕ್ಷಾದಲ್ಲಿ ಹೋಗುತ್ತಿದ್ದವರು ಉಚಿತ ಪ್ರಯಾಣ ಜಾರಿ ಬಳಿಕ ಕಾದು ಕುಳಿತು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾರೆ. ಎಲ್ಲ ಕಡೆ ರಿಕ್ಷಾ ಚಾಲಕರಿಗೆ ಬಾಡಿಗೆ ಕುಸಿದಿದೆ ಎಂದು ರಿಕ್ಷಾ ಚಾಲಕ ಚಂದ್ರಹಾಸ ಹೇಳಿದ್ದಾರೆ.
ಬೆಳಗ್ಗೆ 5ಕ್ಕೆ ಎದ್ದು ಬಂದು ರಾತ್ರಿ ತನಕ ಕೆಲಸ ಮಾಡುತ್ತೇವೆ ಎಂದು ಖಾಸಗಿ ಬಸ್ ನಿರ್ವಾಹಕ ಜಯಪ್ರಕಾಶ್ ಹೇಳಿದರು. ಪ್ರಯಾಣಿಕರು ಇಲ್ಲದಿದ್ದರೆ ಕಲೆಕ್ಷನ್ ಆಗುವುದಿಲ್ಲ. ಸರ್ಕಾರಿ ಬಸ್‌ಗಳಲ್ಲಿ ನಿಗದಿತ ಸಂಖ್ಯೆಗಿಂತ ಅಧಿಕ ಪ್ರಯಾಣಿಕರನ್ನು ತುಂಬಿಕೊಂಡು ಹೋಗುತ್ತಿದ್ದಾರೆ. ಪ್ರಯಾಣಿಕರು ಇದ್ದರೂ, ಇಲ್ಲದಿದ್ದರೂ ಡೀಸೆಲ್ ಹಾಕಬೇಕು. ತೆರಿಗೆ ಕಟ್ಟಬೇಕು. ಮಾಲೀಕರಿಗೆ ಕಲೆಕ್ಷನ್ ಕೊಡಬೇಕು. ಅದರಲ್ಲಿ ನಮ್ಮ ಸಂಬಳವಾಗಬೇಕು. ನಮ್ಮ ಕಷ್ಟ ಯಾರಿಗೂ ಅರ್ಥವಾಗುವುದಿಲ್ಲ ಎಂದರು.
ಶಕ್ತಿ ಯೋಜನೆ ಜಾರಿಯಾದ 3ನೇ ದಿನ, ಮಂಗಳವಾರ ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗದಲ್ಲಿ 48,722 ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಸೋಮವಾರ 25,446 ಮಹಿಳೆಯರು ಪ್ರಯಾಣಿಸಿದ್ದು, ಮಂಗಳವಾರ ಈ ಸಂಖ್ಯೆ ಬಹುತೇಕ ದುಪ್ಪಟ್ಟಾಗಿದೆ. ಸೋಮವಾರ ಪ್ರಯಾಣಿಸಿದ ಮಹಿಳೆಯರ ಒಟ್ಟು ಪ್ರಯಾಣ ವೆಚ್ಚ 11,96,682 ರೂ.ಆಗಿದ್ದರೆ, ಮಂಗಳವಾರದ ವೆಚ್ಚ 17,79,720 ರೂ. ಮಂಗಳೂರು-1ನೇ ಘಟಕದಲ್ಲಿ 3,36,941 ರೂ.(6357 ಮಹಿಳಾ ಪ್ರಯಾಣಿಕರು), ಮಂಗಳೂರು 3ನೇ ಘಟಕದಲ್ಲಿ 6,76,299 ರೂ.(20,292 ಮಹಿಳೆಯರು), ಕುಂದಾಪುರ ಘಟಕದಲ್ಲಿ 4,11,778 ರೂ. (11,966 ಮಹಿಳೆಯರು), ಉಡುಪಿ ಘಟಕದಲ್ಲಿ (10,107 ಮಹಿಳೆಯರು)3,54,702 ರೂ. ವೆಚ್ಚವಾಗಿದೆ ಎಂದು ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ತಿಳಿಸಿದ್ದಾರೆ.
ಸರ್ಕಾರದ ಶಕ್ತಿ ಯೋಜನೆಗೆ ಆಕ್ಷೇಪವಿಲ್ಲ. ಸಾಧಕ-ಬಾಧಕ ಚರ್ಚಿಸದೆ ಜಾರಿ ಮಾಡುವುದರಿಂದ ಕಷ್ಟಪಟ್ಟು ದುಡಿಯುವ ಇನ್ನೊಂದು ವರ್ಗಕ್ಕೆ ತೊಂದರೆಯಾಗುತ್ತದೆ. ನಮಗೂ ಸರ್ಕಾರ ಇಂತಹ ಯೋಜನೆಗಳು ಜಾರಿ ಮಾಡಲಿ.-ಶಿವಾನಂದ ಖಾಸಗಿ ಬಸ್ ಚಾಲಕ