More

    ಕುಂಟುತ್ತಾ ಸಾಗುತ್ತಿದೆ ಮುಡಿಪು-ಮೂಳೂರು ರಸ್ತೆ ಕಾಮಗಾರಿ

    ಅನ್ಸಾರ್ ಇನೋಳಿ ಉಳ್ಳಾಲ

    ಮುಡಿಪು-ಮೂಳೂರು ಸಂಪರ್ಕದ ಒಂದೂವರೆ ಕಿ.ಮೀ. ರಸ್ತೆ ಕಾಮಗಾರಿ ಆರಂಭಗೊಂಡು ಆರು ವರ್ಷ ದಾಟಿದ್ದು, ಮುನ್ನೂರು ಮೀ. ರಸ್ತೆ ಕಾಮಗಾರಿಯೂ ಪೂರ್ಣಗೊಂಡಿಲ್ಲ. ಅಪಘಾತಗಳ ತಾಣವಾಗಿರುವ ಈ ರಸ್ತೆ ಬಗ್ಗೆ ರೋಸಿ ಹೋಗಿರುವ ಜನರು ಈ ಬಾರಿ ರಸ್ತೆಯನ್ನೇ ಮುಚ್ಚಲು ಸಿದ್ಧರಾಗಿದ್ದಾರೆ. ಕೆಎಐಡಿಬಿಯಿಂದ ಕಾಮಗಾರಿ ನಡೆಯಬೇಕಿದ್ದ ಕಾಮಗಾರಿ ಮಳೆಗಾಲದಲ್ಲಂತೂ ಕೆಸರಿನಿಂದಾಗಿ ವಾಹನಗಳು ಸಂಚರಿಸುವುದೇ ಕಷ್ಟ ಆಗಿರುವುದರಿಂದ ಕಿ.ಮೀ.ಗಟ್ಟಲೆ ಸುತ್ತು ಬಳಸಿ ಹೋಗಬೇಕು.

    ಹೊಸ ರಸ್ತೆ ಅಭಿವೃದ್ಧಿ

    ಮೆಲ್ಕಾರ್- ಕಲ್ಲಡ್ಕ – ಮಂಚಿ – ಬಿ.ಸಿ.ರೋಡು ರಸ್ತೆ, ಮಾರ್ನಬೈಲ್- ವಿಟ್ಲ ಮುಂತಾದ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ ಇಲ್ಲಿನ ಹಳೇ ರಸ್ತೆ ಏರಿಳಿತ, ಅಪಾಯಕಾರಿ ತಿರುವು, ಆಳ ಕಮರಿ ಹೊಂದಿತ್ತು. ಕೈಗಾರಿಕಾ ವಲಯ ಪ್ರದೇಶಕ್ಕೂ ಇದೇ ರಸ್ತೆಯಲ್ಲಿ ಸಾಗಬೇಕಿತ್ತು. ಹಾಗಾಗಿ ಈ ಕ್ಷೇತ್ರ ಉಳ್ಳಾಲ(ಮಂಗಳೂರು) ವ್ಯಾಪ್ತಿಗೆ ಬಂದ ಬಳಿಕ ಶಾಸಕ ಖಾದರ್ ರಸ್ತೆ ಅಭಿವೃದಿಗೆ ಕೆಎಐಡಿಬಿ ಅಧಿಕಾರಿಗಳಿಗೆ ಸೂಚಿಸಿದರು. ಜಮೀನು ಮತ್ತು ಮನೆಗಳಿಗೆ ಸೂಕ್ತ ಪರಿಹಾರ ಒದಗಿಸಲು ಅಧಿಕಾರಿಗಳು ಮೀನಾಮೇಷ ಎಣಿಸಿ ಕೊನೆಗೆ ಶುರುವಾದರೂ ಗುತ್ತಿಗೆದಾರ, ಅಧಿಕಾರಿಗಳ ಬೇಜವಾಬ್ದಾರಿಯಿಂದ ಕಾಮಗಾರಿ ಕುಂಟುತ್ತಾ ಅವೈಜ್ಞಾನಿಕವಾಗಿ ನಡೆಯಿತು. ಹಾಕಲಾದ ಕಾಂಕ್ರೀಟ್ ಕೆಲವೇ ದಿನಗಳಲ್ಲಿ ಅಲ್ಲಲ್ಲಿ ಒಡೆದು ಕಳಪೆ ಎನ್ನಲು ಸಾಕ್ಷಿ ನೀಡಿತು. ಡಿವೈಡರ್ ಬಹುತೇಕ ಕಡೆಗಳಲ್ಲಿ ಒಡೆದು ಹೋಯಿತು.

    ಕುಂಟುತ್ತಿರುವ ಕಾಮಗಾರಿಯಿಂದ ಬೇಸತ್ತ ಸಾರ್ವಜನಿಕರು, ವಾಹನ ಚಾಲಕ, ಮಾಲೀಕರು ಹಲವು ಬಾರಿ ಪ್ರತಿಭಟನೆ ನಡೆಸಿದ್ದಾರೆ. ಈಗ ಸ್ಥಳೀಯರಾದ ರಾಧಾಕೃಷ್ಣ ರೈ ಉಮಿಯ, ಶಿವಪ್ರಸಾದ್ ಆಳ್ವ, ಶೀನ ಶೆಟ್ಟಿ, ಕೃಷ್ಣ ಮೂಲ್ಯ, ಸುಲತಾ, ಅಶ್ರಫ್ ಎಂ, ಅಬ್ದುಲ್ಲಾ, ಪ್ರಶಾಂತ್, ಎಂ.ಐ.ಖಾದರ್, ಕಮರುದ್ದೀನ್.ಬಿ ಇನ್ನಿತರರು ಸಭೆ ನಡೆಸಿದ್ದು ಈ ರಸ್ತೆಯನ್ನೇ ಮುಚ್ಚುವ ತೀರ್ಮಾನ ಕೈಗೊಂಡಿದ್ದಾರೆ.

    ಇನ್ನೊಂದು ನಿಷ್ಪ್ರಯೋಜಕ ಕಾಮಗಾರಿ

    ಮುಡಿಪುವಿನಿನಿಂದ ಮೂಳೂರಿಗೆ ಬರೇ ಒಂದೂವರೆ ಕಿ.ಮೀ. ಅಂತರವಿದೆ. ಮೂಳೂರಿನ ಮುಖ್ಯರಸ್ತೆ ಪಕ್ಕ ನೂರಾರು ಎಕರೆ ಪ್ರದೇಶ ಕೈಗಾರಿಕಾ ವಲಯ ಎಂದು ಘೋಷಿಸಲಾಗಿದ್ದು ಇಲ್ಲಿಗೆ ಕೆಲವು ವರ್ಷಗಳ ಹಿಂದೆಯೇ ಚತುಷ್ಪಥ ರಸ್ತೆ ನಿರ್ಮಿಸಲಾಗಿದೆ. ಆದರೆ ಕೈಗಾರಿಕೆಗಳು ಬರದ ಕಾರಣ ನಿಷ್ಪ್ರಯೋಜಕಗೊಂಡಿದ್ದು ರಸ್ತೆ ಪಡ್ಡೆ ಹುಡುಗರ ಪಾಲಿಗೆ ಗಾಂಜಾ, ವೀಲಿಂಗ್ ತಾಣವಾಗಿ ಮಾರ್ಪಟ್ಟಿದೆ. ರಜಾದಿನಗಳಲ್ಲಿ ಮಧ್ಯ ರಾತ್ರಿಯೂ ಯುವಕರು ಇಲ್ಲಿರುತ್ತಾರೆ ಎನ್ನುತ್ತಾರೆ ಸ್ಥಳೀಯರು.

    ಕಾಮಗಾರಿ ಶೀಘ್ರ ಮುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ ಹಿಂದಿನ ಸರ್ಕಾರ ಗುತ್ತಿಗೆದಾರರನ್ನು ಹಿಡಿತದಲ್ಲಿಟ್ಟುಕೊಳ್ಳದೆ ನಿರ್ಲಕ್ಷೃ ತೋರಿತ್ತು. ಈಗ ಸರ್ಕಾರ ಬದಲಾಗಿದ್ದು ಅಧಿಕಾರಿಗಳೊಂದಿಗೆ ಸಭೆ ನಡೆಸಿ ತಕ್ಷಣ ಕಾಮಗಾರಿ ಮುಗಿಸುವಂತೆ ಸೂಚನೆ ನೀಡಿದ್ದೇನೆ.
    -ಯು.ಟಿ.ಖಾದರ್ ಸ್ಪೀಕರ್

    ರಸ್ತೆ ಕಾಮಗಾರಿ ಆರು ವರ್ಷಗಳಿಂದ ಪೂರ್ಣಗೊಂಡಿಲ್ಲ. ಪ್ರತಿದಿನ ಅಪಘಾತ ನಡೆಯುತ್ತಲೇ ಇದೆ. ನಮಗೆ ರಸ್ತೆ ವಿಸ್ತರಣೆ ಬೇಡ. ಹಿಂದಿನ ರಸ್ತೆ ಸರಿಪಡಿಸಿ ಕೊಟ್ಟರೆ ಸಾಕು. ಕೆಎಐಡಿಬಿ ರಸ್ತೆ ಮುಚ್ಚಿ ಪ್ರತಿಭಟಿಸಲು ಸಾರ್ವಜನಿಕರು ಸಿದ್ಧರಾಗಿದ್ದೇವೆ.
    -ರಾಧಾಕೃಷ್ಣ ರೈ ಹೋರಾಟಗಾರ

    ರಸ್ತೆ ಕೆಲಸದಿಂದ ಹಿಂದೆ ಇದ್ದ ಚರಂಡಿ ಮುಚ್ಚಿ ಹೋಗಿದೆ. ಮಳೆಗಾಲದಲ್ಲಿ ಕೆಸರು ನೀರು ಮನೆಯೊಳಗೆ ಬರುತ್ತಿದೆ. ಬೇಸಿಗೆಯಲ್ಲಿ ಪಕ್ಕದ ಬಾವಿ ನೀರು ಬಳಸುತ್ತಿದ್ದೆವು. ಆದರೆ ಈಗ ಧೂಳು ತುಂಬಿ ಬಾವಿ ನಿಷ್ಪ್ರಯೋಜಕ ಆಗಿದೆ.
    -ಸುಲತಾ ಸ್ಥಳೀಯ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts