More

    ಬಾಯ್ದೆರೆದು ಕಾದಿವೆ ಮರಣ ಗುಂಡಿಗಳು

    -ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ

    ಮಳೆಗಾಲ ಆರಂಭವಾಗುತ್ತಲೇ ಜಿಲ್ಲೆಯಲ್ಲಿ ಅತಿವೃಷ್ಟಿ ಜಾಗೃತಿಗೆ ಪ್ರಾತ್ಯಕ್ಷಿಕೆ ನಡೆಸಲಾಗುತ್ತಿದೆ. ಆದರೆ ಮಳೆಗಾಲದಲ್ಲಿ ಅತಿ ಹೆಚ್ಚು ಜೀವ ಬಲಿ ಪಡೆದ ಇಂಗುಗುಂಡಿ, ಮದಗ, ಶಿಲೆ, ಕಲ್ಲುಕ್ವಾರಿಗಳು ಬಟಾಬಯಲಲ್ಲಿದ್ದು, ಇವುಗಳು ಮರಣ ಗುಂಡಿಗಳಾಗಿರುವುದನ್ನು ಉಪೇಕ್ಷಿಸಿದಂತಿದೆ.

    ಕಂದಾವರ ಬಳಿ ಮದಗಕ್ಕೆ ಈಜಲು ಹೋದ ಉಪನ್ಯಾಸಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿ ಬಲಿಯಾಗಿರುವುದು ಅಪಾಯದ ಕರೆಗಂಟೆ. ಆಲೂರು, ನಾಡಾ, ಸೆಳ್ಕೋಡು, ಕಾನ್ಕಿ, ಶಿರೂರು, ಆರೆಶಿರೂರು, ಬೈಂದೂರು ಗಂಗನಾಡು, ಹೊಸೂರು (ಶಿಲೆಕಲ್ಲು ಕೆಂಪುಕಲ್ಲು ಕ್ವಾರಿ ಹೊಂಡ) ಆಜ್ರಿ, ಕಮಲಶಿಲೆ, ಹಳ್ಳಿಹೊಳೆ, ಹೊಸಂಗಡಿ ಮುಂತಾದ ಪ್ರದೇಶದಲ್ಲಿ ಇಂತಹ ನೂರಾರು ಕಲ್ಲುಕ್ವಾರಿ ಹೊಂಡ ಜೀವಬಲಿಗೆ ಕಾದು ಕುಳಿತಿವೆ.

    ಆಯಾ ಗ್ರಾಪಂ ತೆಕ್ಕೆಗೆ ಬರುವ ಕೊಳವೆ ಬಾವಿ, ಮದಗ, ಶಿಲೆ ಹಾಗೂ ಕೆಂಪುಕಲ್ಲು ಕ್ವಾರಿ ಹೊಂಡ, ಆವರಣ ರಹಿತ ಬಾವಿಗಳನ್ನು ಮುಚ್ಚಬೇಕು. ಅಥವಾ ಹೊಂಡಗಳ ಸುತ್ತ ತಡೆಬೇಲಿ ನಿರ್ಮಿಸಬೇಕು ಎಂದು ಗ್ರಾಪಂ ಕಾಯಿದೆ ಹೇಳುತ್ತದೆ. ಗ್ರಾಪಂ, ಜಿಪಂ, ಜಿಲ್ಲಾಡಳಿತ ಇದನ್ನು ಪಾಲನೆ ಮಾಡದೆ ಇಂತಹ ಹೊಂಡಗಳು ಇನ್ನೂ ಜೀವಂತ ಇವೆ.

    ಜೀವಹಾನಿ ಪ್ರಕರಣ

    2013ರಲ್ಲಿ ರಾಜ್ಯದಲ್ಲಿ ಕೊಳವೆ ಬಾವಿಗಳಿಗೆ ಮಕ್ಕಳು ಬಿದ್ದ ಪ್ರಕರಣ ಹಾಗೂ ಅಪಾಯಕಾರಿ ಹೊಂಡಗಳಿಗೆ ಬಿದ್ದು ಹಲವಾರು ಜೀವಹಾನಿಯಾದ ಪ್ರಕರಣಗಳು ದಾಖಲಾಗಿದ್ದವು. ಉಡುಪಿ ಜಿಲ್ಲೆಯಲ್ಲಿ ಅತಿ ಹೆಚ್ಚು ಜನರನ್ನು ನೀರು ಹೊಂಡ ಬಲಿ ಪಡೆದಿತ್ತು. ಅಂದು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಅಪಾಯಕಾರಿ ಹೊಂಡ ಮುಚ್ಚಬೇಕು ಅಥವಾ ತಡೆಬೇಲಿ ನಿರ್ಮಿಸಬೇಕು ಎಂದು ಆದೇಶ ಮಾಡಿದ್ದರು. ಸರ್ಕಾರವೂ ಅಪಾಯಕಾರಿ ಹೊಂಡ ಮುಚ್ಚುವಂತೆ ಸೂಚಿಸಿತ್ತು. ಕಲ್ಲುಕ್ವಾರಿಗಳು ಯಾರಿಗೆ ಸೇರಿತ್ತೋ ಅವರಿಂದಲೇ ಮುಚ್ಚಿಸಬೇಕು. ಅವರು ಮುಚ್ಚದಿದ್ದರೆ ಗ್ರಾಪಂ ಮುಚ್ಚಿಸಿ ಅವರಿಂದ ಖರ್ಚು ವಸೂಲು ಮಾಡಬೇಕು ಎಂದು ಸೂಚಿಸಲಾಗಿತ್ತು. ಅರಣ್ಯ ಇಲಾಖೆಗೆ ಸೇರಿದ ಮದಗ, ಇಂಗುಗುಂಡಿ ಸುತ್ತ ರಕ್ಷಾ ಕವಚ ನಿರ್ಮಿಸಿದರೆ, ಕಲ್ಲುಕ್ವಾರಿ ಮಾಲೀಕರು ಅಲ್ಲೊಂದು ಇಲ್ಲೊಂದು ತಂತಿಬೇಲಿ ಹಾಕಿದ್ದು ಬಿಟ್ಟರೆ ಮತ್ತೆಲ್ಲವುಗಳು ಹಾಗೇ ಇವೆ.

    ಅಪಾಯಕಾರಿ ಕ್ವಾರಿ ಹೊಂಡಗಳು ಹೆಚ್ಚು ಇರುವುದು ಆಲೂರಲ್ಲಿ. ಹೊಂಡ ಮುಚ್ಚುವುದು ಹಾಗಿರಲಿ ಅಕ್ರಮ ಕಲ್ಲು ಕ್ವಾರಿ ಮೇಲೆ ಕ್ರಮ ತೆಗೆದುಕೊಳ್ಳಲೂ ಜಿಲ್ಲಾಡಳಿತ ವಿಫಲವಾಗಿವೆ. ಕಳೆದ ವರ್ಷ ಆಲೂರಲ್ಲಿ ಓರ್ವ ಕಾರ್ಮಿಕ ಕಲ್ಲುಕ್ವಾರಿಗೆ ಬಿದ್ದು ಸತ್ತರೂ ಕ್ವಾರಿ ಮಾಲಕರೊಬ್ಬರು ಸತ್ಯ ಮರೆಮಾಚಿದ್ದರು. ಅಪಾಯಕಾರಿ ಕಲ್ಲುಕ್ವಾರಿ ಹೊಂಡ ಮುಚ್ಚಲಾಗದಷ್ಟು ದುರ್ಬಲವಾಗಿರುವ ಜಿಲ್ಲಾಡಳಿತ ಅಕ್ರಮ ತಡೆಯಬಹುದೆ ಎಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ.

    ಪ್ರಾಣ ಕಳೆದುಕೊಂಡವರು ಹಲವರು

    ಉಡುಪಿ ಜಿಲ್ಲೆಯಲ್ಲಿ ಕಳೆದ ಐದು ವರ್ಷದಲ್ಲಿ 25 ಜನ ಜೀವ ಕಳೆದುಕೊಂಡಿದ್ದಾರೆ. 2018ರಲ್ಲಿ 4, 2019ರಲ್ಲಿ 8, 2010ರಲ್ಲಿ 7, 2021ರಲ್ಲಿ 4, 2022ರಲ್ಲಿ 2, 2023ರಲ್ಲಿ 2 ಬಲಿಯಾಗಿದ್ದು, 2013ರಲ್ಲಿ ಉಡುಪಿ ಜಿಲ್ಲೆಯಲ್ಲಿ 23 ಜನ ಪ್ರಾಣಕಳೆದುಕೊಂಡಿದ್ದರು.

    2013ರಲ್ಲಿ ರಾಜ್ಯ ಹಾಗೂ ಉಡುಪಿ ಜಿಲ್ಲೆಯಲ್ಲಿ ನೀರುಹೊಂಡಗಳಿಗೆ ಬಿದ್ದು ಪ್ರಾಣಹಾನಿ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಲ್ಲುಕ್ವಾರಿ, ಮದಗ, ಇಂಗುಗುಂಡಿ ಸುತ್ತ್ತ ಸಂರಕ್ಷಣಾ ವಿಧಾನ ಅಳವಡಿಸುವಂತೆ ಆದೇಶ ಮಾಡಲಾಗಿತ್ತು. ಜಿಲ್ಲಾಡಳಿತ ಈ ಆದೇಶವನ್ನು ಇಚ್ಛಾಶಕ್ತಿಯಿಂದ ಪಾಲಿಸಿದ್ದರೆ ಇಬ್ಬರ ಪ್ರಾಣ ಹೋಗುತ್ತಿರಲಿಲ್ಲ. ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತು ಅಪಾಯಕಾರಿ ಹೊಂಡಗಳ ಬಗ್ಗೆ ಕ್ರಮ ಕೈಗೊಂಡು ಸಂಭನೀಯ ದುರಂತ ತಪ್ಪಿಸಬೇಕು.
    -ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ

    ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಮಳೆಗಾಲದ ಸಿದ್ಧತಾ ಸಭೆ ನಡೆದಿದ್ದು, ಅಪಾಯಕಾರಿ ನೀರು ಹೊಂಡ, ಕಲ್ಲುಕ್ವಾರಿ ಬಗ್ಗೆ ಚರ್ಚೆಯಾಗಿದೆ. ಜಿಲ್ಲಾಧಿಕಾರಿ ಕಲ್ಲುಕ್ವಾರಿ ಹೊಂಡ ಸುತ್ತ ಸುರಕ್ಷಾ ಕ್ರಮ ತೆಗೆದುಕೊಳ್ಳುವಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಸೂಚಿಸಿದ್ದಾರೆ. ಜಿಪಂ ಎಲ್ಲ ಗ್ರಾಪಂಗಳಿಗೆ ಅಪಾಯಕಾರಿ ನೀರು ಹೊಂಡ ಕಲ್ಲುಕ್ವಾರಿ ಸುತ್ತ ಅಪಾಯ ಆಗದಂತೆ ಬಂದೋಬಸ್ತ್ ಕ್ರಮಕ್ಕೆ ಸೂಚಿಸಿದೆ. ಗ್ರಾಪಂಗಳು ಅಕ್ರಮ ಗಣಿ ಮಾಲೀಕರಿಂದ ಹಣ ವಸೂಲು ಮಾಡುವಂತೆ ಆದೇಶಿಸಲಾಗಿದೆ.
    -ಪ್ರಸನ್ನ ಹೆಚ್., ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಪಂ ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts