

ಧಾರವಾಡ: ಇಲ್ಲೊಬ್ಬ ಕೈದಿಯನ್ನು ಒಂದು ಜೈಲಿನಿಂದ ಇನ್ನೊಂದು ಜೈಲಿಗೆ ಸ್ಥಳಾಂತರಿಸಿದರೂ ಆತನ ಕಾಟ ತಾಳಲಾಗದೆ ಪೊಲೀಸರು ಮಾನಸಿಕ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆತ ಅಲ್ಲಿಯೂ ತನ್ನ ಉಪಟಳ ಮುಂದುವರಿಸಿದ್ದು, ಗಾಜು ನುಂಗಿದ್ದಾಗಿ ಹೇಳಿ ರಂಪಾಟ ನಡೆಸಿದ್ದಾನೆ.
ತುಮಕೂರು ಮೂಲದ ಚಂದ್ರಶೇಖರ ಎಂಬಾತ ಕಳ್ಳತನ ಪ್ರಕರಣದಲ್ಲಿ ಬಂಧಿತನಾಗಿದ್ದು, ಈತನನ್ನು ಇತ್ತೀಚೆಗೆ ಧಾರವಾಡದ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿತ್ತು. ಗುರುವಾರ ರಾತ್ರಿ ಜೈಲಿನಲ್ಲಿ ಜಗಳವಾಡಿದ್ದರಿಂದ ಈತನನ್ನು ಮಾನಸಿಕ ಚಿಕಿತ್ಸೆಗಾಗಿ ನಗರದ ಡಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಡಿಮ್ಹಾನ್ಸ್ನಲ್ಲಿ ಕಿಟಕಿಯ ಗಾಜು ನುಂಗಿರುವುದಾಗಿ ಹೇಳಿ, ಆತಂಕ ಸೃಷ್ಟಿಸಿದ್ದ. ಈತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ಗೆ ದಾಖಲಿಸಲಾಗಿದೆ ಎಂದು ಜೈಲು ಅಧೀಕ್ಷಕ ಎಂ.ಎ. ಮರಿಗೌಡ ತಿಳಿಸಿದ್ದಾರೆ.
ವಿಚಾರಣಾಧೀನ ಕೈದಿಯಾಗಿರುವ ಚಂದ್ರಶೇಖರ ತುಮಕೂರು ಜೈಲಿನಲ್ಲೂ ಇದೇ ರೀತಿಯ ರಂಪಾಟ ಮಾಡುತ್ತಿದ್ದ. ಜೈಲು ಸಿಬ್ಬಂದಿಯ ಮೇಲೆ ಹಲ್ಲೆ, ಸಹ ಕೈದಿಗಳೊಂದಿಗೆ ಜಗಳವಾಡುವುದು ಸಾಮಾನ್ಯವಾಗಿತ್ತು. ಹೀಗಾಗಿ ಆತನನ್ನು ಇತ್ತೀಚೆಗೆ ಧಾರವಾಡ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿತ್ತು.