ಮೂಲಸೌಕರ್ಯ ಕಲ್ಪಿಸಲು ಆದ್ಯತೆ

2KMD-1
ಭುಜುವಳ್ಳಿ ಗ್ರಾಮದಲ್ಲಿ ಸುಮಾರು 90 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕದಲೂರು ಉದಯ್ ಭೂಮಿಪೂಜೆ ನೆರವೇರಿಸಿದರು.
Published on

ಕೆ.ಎಂ.ದೊಡ್ಡಿ: ಮದ್ದೂರು ಕ್ಷೇತ್ರವನ್ನು ಒಂದು ಮಾದರಿ ಕ್ಷೇತ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಕ್ಷೇತ್ರದ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ರಸ್ತೆ, ಚರಂಡಿ ನಿರ್ಮಾಣಗಳಂತಹ ಮೂಲ ಸೌಕರ್ಯಗಳನ್ನು ಸಮಪರ್ಕವಾಗಿ ಕಲ್ಪಿಸಿ ಅಭಿವೃದ್ಧಿಗೊಳಿಸುವುದಾಗಿ ಶಾಸಕ ಕದಲೂರು ಉದಯ್ ತಿಳಿಸಿದರು.

ಸಮೀಪದ ಕಾಡುಕೊತ್ತನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಕಾಡುಕೊತ್ತನಹಳ್ಳಿ, ಕಪರೆಕೊಪ್ಪಲು, ಭುಜುವಳ್ಳಿ ಗ್ರಾಮದಲ್ಲಿ ಸುಮಾರು 90 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ನಾನು ಶಾಸಕನಾಗಿ ಆಯ್ಕೆಯಾಗುವ ಮೊದಲು ಕ್ಷೇತ್ರದ ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಾಡುಕೊತ್ತನಹಳ್ಳಿ, ಕಪರೆಕೊಪ್ಪಲು, ಭುಜುವಳ್ಳಿ ಗ್ರಾಮಗಳಲ್ಲಿ ಸೂಕ್ತವಾದ ರಸ್ತೆ ಮತ್ತು ಚರಂಡಿಗಳಿಲ್ಲದೆ ಅಭಿವೃದ್ಧಿಯಲ್ಲಿ ಹಿಂದುಳಿದಿದ್ದನ್ನು ನಾನು ಕಂಡಿದ್ದು ಕ್ಷೇತ್ರದ ಜನತೆಯ ಆಶೀರ್ವಾದದಿಂದ ನಾನು ಶಾಸಕನಾಗಿ ಆಯ್ಕೆಯಾದ ಮೇಲೆ ನನ್ನ ಮೇಲೆ ಸರ್ಕಾರದಿಂದ ಸುಮಾರು 1500 ಕೋಟಿ ರೂ. ಅನುದಾನವನ್ನು ತಂದು ಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದ್ದೇನೆ ಎಂದರು.

ಕಪರೆಕೊಪ್ಪಲು ಹಾಗೂ ಭುಜುವಳ್ಳಿ ಗ್ರಾಮಗಳು ನಮ್ಮ ತಾಲೂಕಿನ ಕೊನೆಯ ಗ್ರಾಮಗಳಾಗಿದ್ದು, ಅಭಿವೃದ್ಧಿಯನ್ನು ಕಾಣದೆ ಹಿಂದುಳಿದಿವೆ. ಈ ಎರಡೂ ಗ್ರಾಮಗಳ ರಸ್ತೆ ಮತ್ತು ಚರಂಡಿಗಳು ತೀರಾ ಹದಗೆಟ್ಟಿದ್ದು ಗ್ರಾಮಸ್ಥರು ಮನವಿ ಮೇರೆಗೆ ಪ್ರಾಥಮಿಕ ಹಂತವಾಗಿ ಸುಮಾರು ಕಪರೆಕೊಪ್ಪಲು ಗ್ರಾಮಕ್ಕೆ 25 ಲಕ್ಷ ರೂ., ಭುಜವಳ್ಳಿಯಲ್ಲಿ 20 ಲಕ್ಷ ರೂ. ಮೊತ್ತದಲ್ಲಿ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದು, ಮುಂದಿನ ಹಂತದಲ್ಲಿ ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಈ ಎರಡು ಗ್ರಾಮಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.

ಕಾಡುಕೊತ್ತನಹಳ್ಳಿ ಗ್ರಾಮದಲ್ಲಿ ರಸ್ತೆ ಮತ್ತು ಚರಂಡಿಗಳು ದುರಸ್ತಿಯಾಗಿದ್ದು ಕೆಲವು ದಿನಗಳ ಹಿಂದೆ ಪರಿಶಿಷ್ಟ ಜಾತಿ ಕಾಲನಿಯಲ್ಲಿ ಎಸ್‌ಸಿಪಿ ಯೋಜನೆಯಡಿ ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಚರಂಡಿ ಕಾಮಗಾರಿ ಚಾಲನೆ ನೀಡಿದ್ದೆ. ಕಾಮಗಾರಿ ಈಗಾಗಲೇ ಅರ್ಧಭಾಗದಷ್ಟು ಮುಗಿದಿದ್ದು ಶೀಘ್ರದಲ್ಲೇ ಪೂರ್ಣಗೊಳ್ಳುವುದು. ಹಾಗೆಯೇ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ನಾಲಾಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಕೆಲಸ ಪ್ರಗತಿಯಲ್ಲಿದೆ. ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದ್ದು, ರೈತರ ಕಲ್ಯಾಣಕ್ಕಾಗಿ ಸಹಕಾರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹಾಗೆಯೇ ಗ್ರಾಮದ ಮೊದಲನೇ ವಾರ್ಡ್‌ನಲ್ಲಿ ರಸ್ತೆ ಮತ್ತು ಚರಂಡಿಗಳು ಅಭಿವೃದ್ಧಿಯನ್ನೇ ಕಾಣದೇ ಹಿಂದುಳಿದಿದ್ದು ಗ್ರಾಮಸ್ಥರಿಗೆ ತುಂಬ ತೊಂದರೆಯಾಗುತ್ತಿದ್ದು, ಈ ನಿಟ್ಟಿನಲ್ಲಿ ಸುಮಾರು 45 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ನಿಗದಿತ ವೇಳೆಯಲ್ಲಿ ಕಾಮಗಾರಿಯನ್ನು ಉತ್ತಮ ಗುಣಮಟ್ಟದಲ್ಲಿ ಪೂರ್ಣಗೊಳಿಸಿ ಸಾರ್ವಜನಿಕರ ಸೇವೆಗೆ ಅರ್ಪಿಸಲಾಗುವುದು ಎಂದು ತಿಳಿಸಿದರು.

ಭಾರತಿನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣೂರು ರಾಜೀವ್, ಮನ್ಮುಲ್ ನಿರ್ದೇಶಕ ಹರೀಶ್ ಬಾಬು, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂದರ್ಶ್, ಗ್ರಾ.ಪಂ.ಅಧ್ಯಕ್ಷ ಜಯರಾಜು, ಉಪಾಧ್ಯಕ್ಷ ಲೋಕೇಶ್, ಮಾಜಿ ಅಧ್ಯಕ್ಷ ವೀರಭದ್ರ ಚಿಕ್ಕರಾಜಯ್ಯ, ಸೊಸೈಟಿ ಅಧ್ಯಕ್ಷ ಮರಿಸಿದ್ದಯ್ಯ, ಮುಖಂಡರಾದ ಚಿದಂಬರ ಮೂರ್ತಿ, ರಾಜು, ಚಿಕ್ಕಲಿಂಗಯ್ಯ ಮಾದೇಗೌಡ, ಪೂಜಾರಿ ಮಹೇಶ್, ಭೂಮಿ ಸಿದ್ದಯ್ಯ, ದಯಾನಂದ, ಈ. ರುದ್ರಯ್ಯ, ಈ.ರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net