

ಕೋಟ: ಅಧರ್ಮದ ದಾರಿ ಬಿಟ್ಟು ಧರ್ಮದ ತಳಹದಿ ಗಟ್ಟಿಗೊಳಿಸಿ, ಸನಾತನ ಹಿಂದು ಜೀವನಾಚರಣೆಗೆ ಹೆಚ್ಚಿನ ಆದ್ಯತೆ ನೀಡಿ ಎಂದು ಶೃಂಗೇರಿ ಪೀಠಾಧೀಶ ವಿಧುಶೇಖರಭಾರತೀ ಶ್ರೀಗಳು ಹೇಳಿದರು.
ಸಾಲಿಗ್ರಾಮದ ಸಮೀಪ ಗುಂಡ್ಮಿ ವೈದಿಕ ಆಶ್ರಮದಲ್ಲಿ ಬುಧವಾರ ಹಮ್ಮಿಕೊಂಡ ಸಮಗ್ರ ರುದ್ರೈಕಾದಶಿನೀ ಹೋಮದ ಪೂರ್ಣಾಹುತಿಯ ವೇಳೇ ಆಶೀರ್ವಚನ ನೀಡಿ, ಪ್ರಸ್ತುತ ನಮ್ಮ ನಡೆ ನುಡಿಗಳು ಧರ್ಮಾಚರಣೆಗಳು ದಿಕ್ಕು ಬದಲಾಯಿಸುತ್ತಿದೆ. ಸನಾತನ ಪರಂಪರೆ ಉಳಿಸಿ ಬೆಳೆಸಲು ಹಿಂದು ಧರ್ಮದ ಆಚರಣೆಗೆ ಆದ್ಯತೆ ಹೆಚ್ಚು ನೀಡಬೇಕು. ಮಕ್ಕಳನ್ನು ಸಂಸ್ಕಾರವಂತರಾಗಿಸಬೇಕು ಎಂದರು.
ಧಾರ್ಮಿಕ ವಿಧಿವಿಧಾನ ಕಾರ್ಯದಲ್ಲಿ ವೈದಿಕ ಆಶ್ರಮದ ಮುಖ್ಯಸ್ಥ ಪಂಡಿತ್ ಸತ್ಯನಾರಾಯಣ ಉಪಾಧ್ಯಾಯ ಪ್ರಸ್ತಾವನೆಗೈದರು. ಶಿಕ್ಷಕ ಶ್ರೀಧರ ಶಾಸ್ತ್ರಿ ಗುಂಡ್ಮಿ ಕಾರ್ಯಕ್ರಮ ನಿರೂಪಿಸಿದರು.