

ಗಂಗಾವತಿ: ರೈತ ಉತ್ಪಾದಕ ಸಂಘಗಳು ಗುಣಮಟ್ಟದ ಬೀಜೋತ್ಪಾದನೆಯತ್ತ ಗಮನಹರಿಸಬೇಕು ಎಂದು ರಾಷ್ಟ್ರೀಯ ಬೀಜ ನಿಗಮದ ಬಳ್ಳಾರಿ ವಲಯ ವ್ಯವಸ್ಥಾಪಕ ವಿನೋದಕುಮಾರ ಹೇಳಿದರು.
ನಗರದ ಕೆವಿಕೆ ಸಭಾಂಗಣದಲ್ಲಿ ಕಷಿ ವಿಜ್ಞಾನ ಕೇಂದ್ರ ಮತ್ತು ರಾಷ್ಟ್ರೀಯ ಬೀಜ ನಿಗಮದಿಂದ ರೈತ ಉತ್ಪಾದಕರ ಸಂಸ್ಥೆ, ಪ್ರಗತಿಪರ ರೈತರು ಮತ್ತು ಪರಿಕರ ಮಾರಾಟಗಾರರಿಗೆ ಮಂಗಳವಾರ ಆಯೋಜಿಸಿದ್ದ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
ರೈತರು ಬೀಜೋತ್ಪಾದನೆಯಲ್ಲಿ ತೊಡಗಿಸಿಕೊಳ್ಳುವುದಕ್ಕಾಗಿ ನಿಗಮದಿಂದ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅನುಕೂಲತೆ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಕೃಷಿಗೆ ಪೂರಕವಾದ ಬೀಜೋತ್ಪಾದನೆಯತ್ತ ರೈತರು ಗಮನಹರಿಸುವಂತೆ ಸಲಹೆ ನೀಡಿದರು.
ರಾಷ್ಟ್ರೀಯ ಬೀಜ ನಿಗಮದ ಪರಿಚಯ, ಗುಣಮಟ್ಟದ ಬೀಜ, ಬೀಜೋತ್ಪಾದನೆ ಹಂತ, ರೈತ ಉತ್ಪಾದಕ ಸಂಘಗಳ ಮೂಲಕ ಬೀಜೋತ್ಪಾದನೆ ಪ್ರಯೋಜನ ಕುರಿತು ಮಾಹಿತಿ ನೀಡಿದರು. ಬೀಜೋತ್ಪಾದನೆಯ ರೈತ ಉತ್ಪಾದಕ ಸಂಘಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಬೇವಿನ ಬೆಳೆ ಮಹತ್ವ ಮತ್ತು ಬೇಸಾಯ ಕ್ರಮ ಕುರಿತು ವಿಷಯ ತಜ್ಞ ಡಾ.ಕೀರಪ್ಪ ಅರಂಭಾವಿ, ಬೀಜೋತ್ಪಾದನೆ ಕುರಿತು ಕೆವಿಕೆ ತಜ್ಞೆ ಜೆ.ರಾಧಾ ಉಪನ್ಯಾಸ ನೀಡಿದರು.
ವಿವಿಧ ವಿಷಯಗಳ ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಬಿ.ಕಾರಂತ, ಹಿಮಾಂಶು ರೈ, ಜೆ.ಕೆ.ಸೈನಿ, ಡಾ.ರಂಜಿತ್‌ಸಿಂಗ್ ರಜಪೂತ್, ಪ್ರಿಯಾಶರ್ಮಾ, ಡಾ.ಆರ್. ಜ್ಯೋತಿ, ಕೆವಿಕೆ ಪ್ರಭಾರ ಮುಖ್ಯಸ್ಥೆ ಡಾ.ಕವಿತಾ ಉಳ್ಳಿಕಾಶಿ, ಎನ್‌ಎಸ್‌ಸಿ ಬೆಂಗಳೂರು ವಲಯ ವ್ಯವಸ್ಥಾಪಕ ಮೊಹಮ್ಮದ್‌ರಾಜ್, ಸಹಾಯಕ ಮುಖ್ಯ ವ್ಯವಸ್ಥಾಪಕ ಅರವಿಂದ್ ಕುಮಾರ, ಕೃಷಿ ಅಧಿಕಾರಿ ಪ್ರಕಾಶ ರಾಥೋಡ್ ಇದ್ದರು. ಕೊಪ್ಪಳ, ವಿಜಯನಗರ, ಬಳ್ಳಾರಿ ಜಿಲ್ಲೆಯ 110ಕ್ಕೂ ರೈತರು ಭಾಗವಹಿಸಿದ್ದರು.