ಜಿಲ್ಲಾಡಳಿತ ಸಭೆಗಳಿಗೆ ಅಧಿಕಾರಿಗಳ ಡೋಂಟ್​ ಕೇರ್​ !!

ADC_Meeting
Published on

ತುಮಕೂರು: ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಜಿಲ್ಲಾಡಳಿತ ಸಭೆಗಳಿಗೆ ಡೋಂಟ್​ ಕೇರ್​ ಎನ್ನಲಾರಂಭಿಸಿದ್ದಾರೆ, ಮೇಲಾಧಿಕಾರಿಗಳಿಗೆ ಕೆಳಹಂತದ ಅಧಿಕಾರಿಗಳ ಮೇಲಿನ ಹಿಡಿತ ಕೈತಪ್ಪಿದ್ದು ಜಿಲ್ಲಾಧಿಕಾರಿ ಕಚೇರಿಗಳಲ್ಲಿ ನಡೆಯುವ ಸಭೆಗಳಿಗೂ ಗೈರಾಗುತ್ತಿರುವುದು ಆಡಳಿತ ವ್ಯವಸ್ಥೆಯ ಮೇಲೆ ಆತಂಕ ಮೂಡಿಸಿದೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸಂಜೆ ಅಪರ ಜಿಲ್ಲಾಧಿಕಾರಿ ಡಾ.ಎನ್​.ತಿಪ್ಪೇಸ್ವಾಮಿ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮದ ತ್ರೆೃಮಾಸಿಕ ಪ್ರಗತಿ ಪರಿಶೀಲನಾ ಸಭೆಗೂ ಸಾಕಷ್ಟು ಇಲಾಖೆಗಳ ಅಧಿಕಾರಿಗಳು ಗೈರಾಗಿದ್ದರು. ಇದರಿಂದ ಕೆಂಡಾಮಂಡಲರಾದ ತಿಪ್ಪೇಸ್ವಾಮಿ ನೋಟಿಸ್​ ನೀಡಲು ಸೂಚಿಸಿದರು.

ಸಭೆಯಲ್ಲಿ ಹಾಜರಿದ್ದ ಶಾಲಾ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಲೀಡ್​ ಬ್ಯಾಂಕ್​, ಜಿಲ್ಲಾ ಪಂಚಾಯತ್​ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಅಲ್ಪಸಂಖ್ಯಾತರ ಸಮುದಾಯದ ಫಲಾನುಭವಿಗಳಿಗೆ ನೀಡಿರುವ ಸೌಲಭ್ಯಗಳ ವಿವರ ನೀಡಿದರು.

ಜಿಲ್ಲೆಯಲ್ಲಿರುವ ಉರ್ದು ಮಾಧ್ಯಮ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿದೆ, ವಿದ್ಯಾರ್ಥಿಗಳ ಸಂಖ್ಯೆ ಪ್ರಮಾಣವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳುವುದರೊಂದಿಗೆ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಿಯಾ ಯೋಜನೆ ತಯಾರಿಸಬೇಕು ಎಂದು ಅಧಿಕಾರಿಗಳಿಗೆ ಎಡಿಸಿ ಸೂಚಿಸಿದರು.

ಜಿಲ್ಲೆಯಲ್ಲಿರುವ ಅಲ್ಪಸಂಖ್ಯಾತ ಸಮುದಾಯದ ಅನುದಾನಿತ, ಅನುದಾನರಹಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ, ವಿದ್ಯಾರ್ಥಿವೇತನಕ್ಕಾಗಿ ನವೀಕರಣ ಹಾಗೂ ಹೊಸದಾಗಿ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳ ಮಾಹಿತಿ ಪಡೆದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅನುಷ್ಠಾನ ಮಾಡುವ ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಡಿ ಸೌಲಭ್ಯ ಪಡೆಯುತ್ತಿರುವ ಅಲ್ಪಸಂಖ್ಯಾತ ಫಲಾನುಭವಿಗಳ ಮಾಹಿತಿ ಪಡೆದರು. ಅಲ್ಪಸಂಖ್ಯಾತರು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿರುವ ಅಂಗನವಾಡಿಗೆ ದಾಖಲಾದ ಮಕ್ಕಳ ಸಂಖ್ಯೆ ಮತ್ತು ಅಂಗನವಾಡಿ ಕಟ್ಟಡಗಳ ಮೂಲಸೌಕರ್ಯದ ಕುರಿತು ಮಾಹಿತಿ ನೀಡಲು ಸೂಚಿಸಿದರು.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಶಬ್ಬೀರ್​ ಅಹಮದ್​ ಸಭೆಗೆ ಪ್ರಗತಿ ವಿವರದ ಮಾಹಿತಿ ನೀಡಿ, ಜೈನ ಸಮುದಾಯದ ವಸತಿ ಶಾಲೆಗೆ ಭೋಜನಾವೆಚ್ಚ ನೀಡಲು ಬೇಡಿಕೆ ಬಂದಿದೆ. ಕ್ರೆೃಸ್ತ ಸಮುದಾಯಕ್ಕೆ ಮೀಸಲಿಟ್ಟಿರುವ ಸ್ಮಶಾನ ಭೂಮಿಯ ಆವರಣ ಗೋಡೆ ನಿಮಾರ್ಣಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದ್ದು, ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿರುವುದರಿಂದ ಆವರಣ ಗೋಡೆ ನಿಮಾರ್ಣಕ್ಕೆ ವಿಳಂಬವಾಗಿದೆ. ಪ್ರಕರಣ ಇತ್ಯರ್ಥವಾದ ಕೂಡಲೇ ಆವರಣ ಗೋಡೆ ನಿಮಾರ್ಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಲ್ಲೆಯಲ್ಲಿ 2024&-25ನೇ ಸಾಲಿನ ವಿದ್ಯಾರ್ಥಿ ವೇತನಕ್ಕಾಗಿ 4257 ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಹೊಸದಾಗಿ ಹಾಗೂ 21910 ವಿದ್ಯಾರ್ಥಿಗಳು ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ವಿವರಣೆ ನೀಡಿದರು. ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಅರಿವು ಸಾಲ ಯೋಜನೆಯಡಿ 34, ಶ್ರಮಶಕ್ತಿ ಯೋಜನೆಯಡಿ 11, ವಿದೇಶಿ ವ್ಯಾಸಂಗಕ್ಕಾಗಿ 1, ವೃತ್ತಿ ಪ್ರೋತ್ಸಾಹ ಯೋಜನೆಯಡಿ 11, ಟ್ಯಾಕ್ಸಿ ಸೌಲಭ್ಯಕ್ಕಾಗಿ 4 ಫಲಾನುಭವಿಗಳಿಗೆ ಸಾಲ ಸೌಲಭ್ಯ ನೀಡಲಾಗಿದೆ ಎಂದು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ತಿಳಿಸಿದರು.

ಕೊಳಗೇರಿ ಅಭಿವೃದ್ಧಿ ಮಂಡಳಿ ಇಲಾಖೆ ಬಡತನ ರೇಖೆಗಿಂತ ಕೆಳಗಿರುವ 198 ಅಲ್ಪಸಂಖ್ಯಾತರ ಕುಟುಂಬಗಳಿಗೆ ಮನೆಗಳನ್ನು ನೀಡಲಾಗಿದ್ದು, ಹಕ್ಕು ಪತ್ರಗಳನ್ನು ಹಸ್ತಾಂತರಿಸಲು ಕ್ರಮ ಕೈಗೊಳ್ಳಲಾಗುವುದು.

ಸಭೆಯಲ್ಲಿ ಪ್ರಧಾನಮಂತ್ರಿ ಹೊಸ 15 ಅಂಶಗಳ ಕಾರ್ಯಕ್ರಮದ ನಾಮ ನಿರ್ದೇಶಿತ ಸದಸ್ಯ ಮಹಮದ್​ ಕಲಿಮ್​ ಉಲ್ಲಾ, ಜೆಪಿನ್​ ಜಾಯ್​, ಜೆ.ಪಿ.ಉಮೇಶ್​ ಕುಮಾರ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net