ಬೆಲೆ ಕೇಳಿಯೇ ಬೆವರಿದ ಗ್ರಾಹಕರು

FotoJet (3)
Published on

ಗ್ರಾಹಕರ ಜೇಬು ಸುಡುತ್ತಿರುವ ಎಳನೀರು ಪೂರೈಕೆ ಕಡಿಮೆ, ಬೆಲೆ ದುಬಾರಿ

ಚಿಂತಾಮಣಿ: ಭೂಮಿ ಮೇಲೆ ಕಲಬೆರಕೆರಹಿತ ನೈಸರ್ಗಿಕ ಪಾನೀಯ ಬಂದರೆ ಎಳನೀರು ಮಾತ್ರ. ಆದರೆ, ಈ ವರ್ಷ ಫೆಬ್ರವರಿ ತಿಂಗಳಲ್ಲೇ ಸೂರ್ಯ ತನ್ನ ಪ್ರಖರತೆ ತೋರುತ್ತಿದ್ದು, ಜನರ ನೆತ್ತಿ ಸುಡುತ್ತಿದೆ. ಬಿಸಿಲಿನ ತಾಪದಿಂದ ಬಳಲಿದ ಜನ ತಂಪುಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಆದರೆ, ಎಳನೀರಿನ ಬೆಲೆ ಕೇಳಿಯೇ ಜನರು ಬೆವರುತ್ತಿದ್ದಾರೆ.

ಹೌದು... 20ರಿಂದ 30 ರೂ. ಇದ್ದ ಎಳನೀರಿನ ಬೆಲೆ ಒಂದೇ ಬಾರಿ 40ರಿಂದ 50 ರೂ.ವರೆಗೆ ಏರಿಕೆ ಕಂಡಿದೆ. ಆರೋಗ್ಯಕ್ಕೆ ಒಳ್ಳೆಯದೆಂದು ಬೆಲೆ ಹೆಚ್ಚಾದರೂ ಜನ ಎಳನೀರು ಸೇವಿಸುತ್ತಿದ್ದಾರೆ. ಕಳೆದ ವರ್ಷ ಇದೇ ಸಮಯದಲ್ಲಿ 20ರಿಂದ 25 ರೂ.ಗೆ ಮಾರಾಟವಾಗುತ್ತಿತ್ತು. ಈ ಬಾರಿ ದುಬಾರಿಯಾಗಿದೆ. ಗಾತ್ರಕ್ಕೆ ತಕ್ಕಂತೆ ಮೂರು ವಿಭಾಗ ಮಾಡುತ್ತಾರೆ. ಚಿಕ್ಕದಕ್ಕೆ 30 ರೂ., ಮಧ್ಯಮ ಗಾತ್ರಕ್ಕೆ 40 ರೂ., ದೊಡ್ಡದಕ್ಕೆ 50ರಿಂದ 60 ರೂ.ವರೆಗೆ ಮಾರಾಟ ಮಾಡಲಾಗುತ್ತಿದೆ. ಬೇಸಿಗೆ ಆರಂಭದಲ್ಲಿಯೇ ಹೀಗಾದರೆ ಇನ್ನು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬೆಲೆ ಇನ್ನೆಷ್ಟು ಏರಿಕೆಯಾಗುತ್ತದೆಯೋ ಎನ್ನುವುದು ಜನರ ಚಿಂತೆಗೆ ಕಾರಣವಾಗಿದೆ.

ಈ ವರ್ಷ ಎಳನೀರು ಇಳುವರಿ ಕೂಡ ಕಡಿಮೆ ಆಗಿರುವುದರಿಂದ ಪೂರೈಕೆಯೂ ಕಡಿಮೆ ಇದೆ. ಪ್ರತಿವರ್ಷ ಮಂಡ್ಯ, ಮದ್ದೂರು, ಚಿತ್ರದುರ್ಗದಿಂದ ಈ ಭಾಗಕ್ಕೆ ಎಳನೀರು ಪೂರೈಕೆ ಆಗುತ್ತಿತ್ತು. ಆದರೆ ಈ ಬಾರಿ ಆ ಭಾಗದಲ್ಲಿಯೂ ಇಳುವರಿ ಕಡಿಮೆಯಾಗಿದ್ದು, ಪೂರೈಕೆಯಾಗುತ್ತಿಲ್ಲ. ಇದೇ ಕಾರಣದಿಂದಲೇ ಬೆಲೆ ಏರಿಕೆಯಾಗಿದೆ ಎನ್ನುತ್ತಾರೆ ಕೈವಾರದ ಎಳನೀರು ವ್ಯಾಪಾರಿ ರಂಗಣ್ಣ.

ತಾಪಮಾನದ ಏರಿಕೆಯಿಂದಾಗಿ ಎಳನೀರು ಕುಡಿಯುವವರ ಸಂಖ್ಯೆ ಹೆಚ್ಚಿದೆ. ಆದರೆ, ಮರಗಳಿಗೆ ಕಾಯಿಲೆ ಬಂದು ಇಳುವರಿ ಕಡಿಮೆಯಾದರೆ, ಬಯಲು ಸೀಮೆಯಲ್ಲಿದ್ದ ತೆಂಗಿನ ಕಾಯಿಗಳಲ್ಲಿ ನೀರಿಲ್ಲದೆ ಇರುವುದರಿಂದ ಬಹುತೇಕ ರೈತರು ಕಟಾವು ಮಾಡಿದ್ದಾರೆ. ಆದ್ದರಿಂದ ಎಳನೀರಿಗೆ ಕೊರತೆಯಾಗಿ ಬೆಲೆ ಏರಿಕೆಯಾಗಿದೆ.

ರೈತರಿಗೆ ಲಾಭವಿಲ್ಲ

ಚಿಕ್ಕವರಿಂದ ವೃದ್ಧರವರೆಗೂ ಎಲ್ಲರೂ ಇಷ್ಟಪಡುವ ಪಾನೀಯ ಎಂದರೆ ಎಳನೀರು. ಅದರಲ್ಲೂ ರೋಗಿಗಳು ಹೆಚ್ಚಾಗಿ ಎಳನೀರು ಸೇವಿಸುತ್ತಾರೆ. ಮಾರುಕಟ್ಟೆಯಲ್ಲಿ ಎಳನೀರು ಬೆಲೆ ಹೆಚ್ಚಾಗಿದ್ದರೂ ರೈತರಿಗೆ ಒಂದು ಎಳನೀರಿಗೆ ಸಿಗೋದು 20 ರೂ. ಮಾತ್ರ. ಬೆಲೆ ಏರಿಸಿ ವ್ಯಾಪಾರಿಗಳು ಮತ್ತು ದಲ್ಲಾಳಿಗಳು ಲಾಭ ಮಾಡಿಕೊಳ್ಳುತ್ತಿದ್ದಾರೆ ಎನ್ನುವುದು ಬೆಳೆಗಾರರ ಆರೋಪವಾಗಿದೆ.

ಎಳನೀರಿನ ಲಾಭಗಳೇನು?

ಎಳನೀರಿನಲ್ಲಿ ಪೊಟ್ಯಾಷಿಯಂ, ಮೆಗ್ನಿಷಿಯಂ ಮತ್ತು ಕ್ಯಾಲ್ಸಿಯಂ ಹೇರಳವಾಗಿದೆ. ರಕ್ತದೊತ್ತಡ ಸುಧಾರಿಸಿ, ಸ್ನಾಯುಸೆಳೆತ ಕಡಿಮೆ ಮಾಡುತ್ತದೆ. ಜತೆಗೆ ಫೈಬರ್ ಅಂಶವಿರುವುದರಿಂದ ಜೀರ್ಣಕ್ರಿಯೆ ಹೆಚ್ಚಿಸಿ ಮಲಬದ್ಧತೆ ತಡೆಯಲು ಸಹಾಯ ಮಾಡುತ್ತದೆ. ಎಳನೀರು ಕಡಿಮೆ ಕ್ಯಾಲರಿ ಹೊಂದಿದ್ದು, ಹಸಿವು ಮತ್ತು ತೂಕ ಕಡಿಮೆ ಮಾಡಲು ಸಹಕಾರಿಯಾಗಿದೆ ಎನ್ನುತ್ತಾರೆ ತಜ್ಞರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net