ಮಾದಕವಸ್ತು, ಮರಳು ಮಾಫಿಯಾ ತಡೆ : ಪೊಲೀಸರಿಗೆ ರವಾಡ ಚಂದ್ರಶೇಖರ್ ಕಟ್ಟುನಿಟ್ಟಿನ ಸೂಚನೆ

New Project (13)
Published on

ಕಾಸರಗೋಡು: ಜಿಲ್ಲೆಯಲ್ಲಿ ಮಾದಕವಸ್ತು ಹಾಗೂ ಮರಳು ಮಾಫಿಯಾ ವಿರುದ್ಧ ಕಾರ್ಯಚರಣೆ ಚುರುಕುಗೊಳಿಸುವಂತೆ ಕೇರಳ ರಾಜ್ಯ ಪೊಲೀಸ್ ಮಹಾನಿರ್ದೇಶಕ ರವಾಡ ಚಂದ್ರಶೇಖರ್ ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿ ನೇಮಕಗೊಂಡ ಬಳಿಕ ಇದೇ ಮೊದಲ ಬಾರಿಗೆ ಕಾಸರಗೋಡಿಗೆ ಆಗಮಿಸಿರುವ ಇವರು, ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಮುಂದೆ ತ್ರಿಸ್ತರ ಪಂಚಾಯಿತಿ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸರು ಸನ್ನದ್ಧರಾಗುವಂತೆ ಸೂಚಿಸಿದರು. ಮರಳು ಮಾಫಿಯಾಗಳ ಜತೆ ಶಾಮೀಲಾದ ಪೊಲೀಸರ ಅಮಾನತುಗೊಳಿಸಿದ ಕ್ರಮವೂ ಸಭೆಯಲ್ಲಿ ಚರ್ಚೆಯಾಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿ.ವಿಜಯಭರತ್ ರೆಡ್ಡಿ ಅವರು ಜಿಲ್ಲಾ ಪೊಲೀಸ್ ಇಲಾಖೆಗೆ ತುರ್ತು ಬೇಡಿಕೆಗಳ ಬಗ್ಗೆ ಡಿಜಿಪಿಗೆ ಮನವರಿಗೆ ಮಾಡಿದರು. ಕುಂಬಳೆ ಹಾಗೂ ಮಂಜೇಶ್ವರ ಪೊಲೀಸ್ ಠಾಣೆಯನ್ನು ವಿಭಜಿಸಿ ಬಾಯಿಕಟ್ಟೆ ಕೇಂದ್ರೀಕರಿಸಿ ಪೈವಳಿಕೆ ಪೊಲೀಸ್ ಠಾಣೆ ಆರಂಭಿಸುವ ಬಗ್ಗೆಯೂ ಚರ್ಚಿಸಲಾಯಿತು. ಬಾಯಿಕಟ್ಟೆಯಲ್ಲಿ ಕಂದಾಯ ಇಲಾಖೆ ಈಗಾಗಲೇ 50 ಸೆಂಟ್ಸ್ ಜಾಗ ಪೊಲೀಸ್ ಇಲಾಖೆಗೆ ಹಸ್ತಾಂತರಿಸಿ 2 ವರ್ಷ ಕಳೆದಿದ್ದು, ಠಾಣೆ ನಿರ್ಮಾಣಕ್ಕಿರುವ ಅನಿಶ್ಚಿತಾವಸ್ಥೆ ಪರಿಹರಿಸಬೇಕು. ಪ್ರಸಕ್ತ ಜಿಲ್ಲೆಯಲ್ಲಿ 1,500 ಮಂದಿ ಪೊಲೀಸರಿದ್ದು, ಇದು ಹಲವು ವರ್ಷಗಳ ಹಿಂದಿನ ಜನಸಂಖ್ಯೆಗೆ ಅನುಗುಣವಾಗಿ ಮಂಜೂರಾಗಿ ಲಭಿಸಿದ ಸಂಖ್ಯೆ. ಪೊಲೀಸ್ ಬಲ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದು ತಿಳಿಸಿದರು.

ಉತ್ತರ ವಲಯ ಐಜಿ ಶ್ರೀರಾಜ್‌ಪಾಲ್ ಮೀನಾ ಐಪಿಎಸ್, ಕಣ್ಣೂರು ರೇಂಜ್ ಡಿಐಜಿ ಯತೀಶ್ ಚಂದ್ರ ಜಿ.ಎಚ್. ಐಪಿಎಸ್, ಹೆಚ್ಚುವರಿ ಎಸ್ಪಿ ದೇವದಾಸನ್ ಸಿ.ಎಂ., ಜಿಲ್ಲೆಯ ಡಿವೈಎಸ್‌ಪಿಗಳು, ಎಸ್‌ಐಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net