ಹೆಸರಿಗಷ್ಟೇ ಪ್ರತಿಷ್ಠಿತ ವಾರ್ಡ್. ಇಲ್ಲಿ ಮೂಲಸೌಕರ್ಯ ಕೊರತೆ ಬಿಟ್ಟೂ ಬಿಡದೆ ಕಾಡುತ್ತಿದೆ. ಪಟ್ಟಣಕ್ಕೆ ಕೂಗಳತೆ ದೂರದಲ್ಲಿದ್ದರೂ ರಸ್ತೆ, ಚರಂಡಿ ವ್ಯವಸ್ಥೆ ಇಲ್ಲದೆ ಜನರು ಸಮಸ್ಯೆ ಎದುರಿಸುತ್ತಿದ್ದಾರೆ.
ಹೌದು... ಬಿಡದಿ ಪುರಸಭೆಯ 16ನೇ ವಾರ್ಡ್ ನಿವಾಸಿಗಳು ಸಾಕಷ್ಟು ವರ್ಷಗಳಿಂದ ಅಭಿವೃದ್ಧಿಗಾಗಿ ಪರಿತಪಿಸುತ್ತಿದ್ದಾರೆ. ವಾರ್ಡ್‌ನ ಮೇಗೆಕೆರೆ ರಸ್ತೆ ಇಂದಿಗೂ ಮಣ್ಣಿನ ರಸ್ತೆಯಿಂದ ಕೂಡಿದೆ. ಪ್ರತಿದಿನ ರಸ್ತೆ ಅಕ್ಕಪಕ್ಕದ ಮನೆಗಳಿಗೆ ಮಣ್ಣಿನ ಧೂಳು ಹರಡುತ್ತಿದ್ದು, ಜತೆಗೆ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ನೀರು ಸರಾಗವಾಗಿ ಹರಿಯದೆ ಗಬ್ಬೆದ್ದು ನಾರುತ್ತಿದೆ.
ವಾರ್ಡ್ ನಿವಾಸಿಗಳು ಪ್ರತಿನಿತ್ಯ ಬಳಸುವ ನೀರು ಹರಿಯಲು ಚರಂಡಿ ವ್ಯವಸ್ಥೆಯಿಲ್ಲದೆ ರಸ್ತೆಗೆ ಹರಿಯುತ್ತಿದೆ. ಇದರಿಂದ ಹೊರಬರುವ ದುರ್ವಾಸನೆ ಜನರಿಗೆ ಸಾಮಾನ್ಯ ಎನ್ನುವಂತಾಗಿದೆ. ರಸ್ತೆಯ ಇಳಿಜಾರು ಹಾಗೂ ಗುಂಡಿಗಳಲ್ಲಿ ತ್ಯಾಜ್ಯ ನೀರು ಸಂಗ್ರಹವಾಗುತ್ತಿದೆ. ಇದರ ನಡುವೆಯೇ ವಾಹನ ಸವಾರರು, ಪಾದಚಾರಿಗಳು ಓಡಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಈ ಹಿಂದೆ ಈ ವಾರ್ಡ್ ಬಿಡದಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿತ್ತು. ಪಟ್ಟಣ ಪಂಚಾಯಿತಿಯಿಂದ ಪುರಸಭೆಯಾಗಿ ಮೇಲ್ದರ್ಜೆಗೇರಿದ ನಂತರ ಬಾನಂದೂರು ಗ್ರಾಮವನ್ನು ಎರಡು ವಾರ್ಡ್‌ಗಳನ್ನಾಗಿ ವಿಂಗಡಣೆ ಮಾಡಲಾಗಿತ್ತು. ಅದರಲ್ಲಿ16ನೇ ವಾರ್ಡ್‌ನಲ್ಲಿನ ಒಂದು ರಸ್ತೆಯಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದಂತಾಗಿದೆ. ಈ ಹಿಂದೆ ಇದ್ದ ಚರಂಡಿಗಳು ಹೂಳು ತುಂಬಿ ಮುಚ್ಚಿ ಹೋಗಿವೆ. ಹಾಗಾಗಿ ಚರಂಡಿ ನೀರು ಹರಿಯಲು ಸಾಧ್ಯವಾಗದೆ ರಸ್ತೆಗೆ ಹರಿಯುತ್ತಿದೆ.
ವಾರ್ಡ್ ನಂ.16ರಲ್ಲಿ ಸುಮಾರು 25ಕ್ಕೂ ಹೆಚ್ಚು ಮನೆಗಳಿದ್ದು, ಇಲ್ಲಿನ ನಿವಾಸಿಗಳು ಪ್ರತಿವರ್ಷ ನಿಗದಿಯಂತೆ ಪುರಸಭೆಗೆ ಎಲ್ಲ ರೀತಿಯ ತೆರಿಗೆ ಕಟ್ಟುತ್ತಿದ್ದಾರೆ. ಆದರೆ, ಜನರಿಂದ ತೆರಿಗೆ ಕಟ್ಟಿಸಿಕೊಳ್ಳುವ ಪುರಸಭೆ ತನ್ನ ಕ್ರಿಯಾಯೋಜನೆಯಲ್ಲಿ ವಾರ್ಡ್ ಅಭಿವೃದ್ಧಿಗೆ ಅನುದಾನ ಮೀಸಲಿಡುತ್ತಿಲ್ಲ ಎನ್ನುವುದು ಇಲ್ಲಿನ ಜನರ ಅಳಲಾಗಿದೆ.
ಇದೇ ರಸ್ತೆಯಲ್ಲಿ ಸ್ವಲ್ಪ ದೂರ ಡಾಂಬರೀಕರಣ ಮಾಡಲಾಗಿದೆ. ಉಳಿದ ಕಡೆ ಮಣ್ಣಿನ ರಸ್ತೆ ಉಳಿದಿದೆ. ಮಳೆ ಬಂದರೆ ಈ ರಸ್ತೆ ಕೆಸರುಮಯವಾಗಿ ಓಡಾಡಲು ಹರಸಾಹಸ ಪಡಬೇಕಾಗಿದೆ. ಜತೆಗೆ ಪ್ರತಿನಿತ್ಯ ಈ ರಸ್ತೆಗೆ ಹರಿಯುವ ಚರಂಡಿ ನೀರು ರಸ್ತೆಯ ಗುಂಡಿಗಳಲ್ಲಿ ಶೇಖರಣೆಯಾಗುತ್ತಿದೆ. ಸಂಪೂರ್ಣ ರಸ್ತೆಯನ್ನು ಡಾಂಬರೀಕರಣ ಮಾಡಿ ಸಮಸ್ಯೆಗೆ ಮುಕ್ತಿ ನೀಡುವಂತೆ ವಾರ್ಡ್ ನಿವಾಸಿಗಳು ಆಗ್ರಹಿಸಿದ್ದಾರೆ.
ಈ ರಸ್ತೆಯಲ್ಲಿ ಸಂಗ್ರಹವಾಗುವ ತ್ಯಾಜ್ಯ ನೀರು ಸೊಳ್ಳೆಗಳನ್ನು ಉತ್ಪಾದಿಸುವ ತಾಣವಾಗಿದೆ. ಇಲ್ಲಿ ನಿವಾಸಿಗಳು ಅನಾರೋಗ್ಯ ಭೀತಿಯಲ್ಲಿ ಬದುಕುವಂತಾಗಿದೆ. ಈಗಾಗಲೇ ಹಲವರು ರೋಗ ಬಾಧೆಗೆ ತುತ್ತಾಗಿದ್ದಾರೆ.
ಮೇಗೆಕೆರೆ ರಸ್ತೆ ಬಿಡದಿ ಪುರಸಭೆ ವ್ಯಾಪ್ತಿಗೆ ಸೇರಿದ್ದರೂ ಅಭಿವೃದ್ಧಿ ಕಂಡಿಲ್ಲ. ಪ್ರತಿನಿತ್ಯ ಚರಂಡಿ ನೀರು ಮನೆಗಳ ಎದುರು ಸಂಗ್ರಹವಾಗಿ ದುರ್ವಾಸನೆ ಬೀರುತ್ತಿದೆ. ವಾರ್ಡ್ ನಿವಾಸಿಗಳು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪುರಸಭೆ ಅಧಿಕಾರಿಗಳು ಆದಷ್ಟು ಬೇಗ ಇತ್ತ ಗಮನ ಕೊಟ್ಟು ಸಮಸ್ಯೆ ಬಗೆಹರಿಸಲಿ.
ಭರತ್, ಸ್ಥಳೀಯ
16ನೇ ವಾರ್ಡ್ ಮೇಗೆಕೆರೆ ರಸ್ತೆಯಲ್ಲಿ ಚರಂಡಿ ವ್ಯವಸ್ಥೆ ಇಲ್ಲ. ತ್ಯಾಜ್ಯ ನೀರು ರಸ್ತೆಗೆ ಹರಿಯುತ್ತಿದೆ. ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿಗಳ ಗಮನಕ್ಕೆ ತರಲಾಗಿದೆ. ನಗರೋತ್ಥಾನ ನಿಧಿಯಲ್ಲಿ ಅಭಿವೃದ್ಧಿ ಮಾಡುವಂತೆ ಮನವಿ ಮಾಡಲಾಗಿದೆ.
ಮಹಿಮಾ ಕುಮಾರ್, 16ನೇ ವಾರ್ಡ್ ಸದಸ್ಯೆ