

ಬೆಂಗಳೂರು: ಸಾವಿರಾರು ಸಾರಿಗೆ ನೌಕರರಿಗೆ ಆಸರೆಯಾಗಿರುವ ಜಯನಗರದ ಕೆಎಸ್‌ಆರ್‌ಟಿಸಿ ಆಸ್ಪತ್ರೆಯನ್ನು ಖಾಸಗೀಕರಣ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಆಸ್ಪತ್ರೆಯನ್ನು ಖಾಸಗಿ ಆಸ್ಪತ್ರೆಗೆ 30 ವರ್ಷಕ್ಕೆ ಗುತ್ತಿಗೆ ನೀಡಲು ಸಂಸದರೊಬ್ಬರು ಒತ್ತಡ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ವಾಸವಿ ಸಮಾಜದ ಡಯಾಲಿಸ್ ಸಂಸ್ಥೆಗೆ ಕೆಎಸ್‌ಆರ್‌ಟಿಸಿ ಆಸ್ಪತ್ರೆ ಗುತ್ತಿಗೆಗೆ ನೀಡಲು ಯೋಜನೆ ರೂಪಿಸಲಾಗುತ್ತಿದ್ದು, ಈಗಾಗಲೇ ಈ ಸಂಬಂಧ ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವರ ಮೇಲೆ ಒತ್ತಡವನ್ನು ಸಂಸದರು ಹಾಕುತ್ತಿದ್ದಾರೆ ಎನ್ನಲಾಗಿದೆ.
ಕೆಎಸ್‌ಆರ್‌ಟಿಸಿ ನೌಕರರಿಗಾಗಿ ಇರುವ ಏಕೈಕ ಜಯನಗರದ ಆಸ್ಪತ್ರೆಯನ್ನು ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡಬಾರದು, ಒಂದು ವೇಳೆ ಮಾಡಿದರೆ ಸಂಸದರ ಕಚೇರಿ ಮುಂದೆ ಉಗ್ರ ಹೋರಾಟ ಮಾಡಲಾಗುವುದೆಂದು ಕೆಎಸ್‌ಆರ್‌ಟಿಸಿ ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಸದರು ತಮ್ಮ ಕ್ಷೇತ್ರದ ಮತದಾರರನ್ನು ಓಲೈಕೆ ಮಾಡಲು ಹೀಗೆ ಮಾಡುತ್ತಿದ್ದಾರೆ. ಆದರೆ ಈ ಆಸ್ಪತ್ರೆ ನಂಬಿ ಸಾವಿರಾರು ನೌಕರರಿದ್ದಾರೆ. ಇದನ್ನು ಖಾಸಗಿಯವರಿಗೆ ಕೊಟ್ಟರೆ ನೌಕರರು ಎಲ್ಲಿಗೆ ಹೋಗಬೇಕು. ಇದರ ಹಿಂದೆ ಸಂಸದರ ಸ್ವಹಿತಾಸಕ್ತಿ ಇದೆ ಎಂದು ನೌಕರರ ಯೂನಿಯನ್ ಮುಖಂಡ ಅನಂತ್ ಸುಬ್ಬಾರಾವ್ ಕಿಡಿಕಾರಿದ್ದಾರೆ.