

* ಜೂ.19ಕ್ಕೆ ಚುನಾವಣೆ ನಿಗದಿ
* ಆಕಾಂಕ್ಷಿಗಳಲ್ಲಿ ಪೈಪೋಟಿ
ಗಂಗಾಧರ್ ಬೈರಾಪಟ್ಟಣ ರಾಮನಗರ
ಬೆಂಗಳೂರು ಹಾಲು ಒಕ್ಕೂಟದ (ಬಮುಲ್)ನ ಅಧ್ಯಕ್ಷ ಸ್ಥಾನದ ಚುನಾವಣೆ ಜೂ.19ಕ್ಕೆ ನಿಗದಿಯಾಗಿದ್ದು ಮಾಜಿ ಸಂಸದ ಡಿ.ಕೆ.ಸುರೇಶ್ ಸುತ್ತ ಎಲ್ಲರ ಚಿತ್ತ ನೆಟ್ಟಿದೆ. ಕಳೆದ ಮೇ 25ರಂದು ನಡೆದ ಬಮುಲ್ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಬಹುಮತಗಳಿಸಿದ್ದು, ಕಳೆದ ಹಲವು ದಿನಗಳಿಂದಲೂ ಅಧ್ಯಕ್ಷ ಸ್ಥಾನದ ಆಯ್ಕೆ ಬಗ್ಗೆ ಚರ್ಚೆಗಳು ನಡೆದಿದ್ದವು. ಆದರೆ, ಇದೀಗ ಡಿ.ಕೆ.ಸುರೇಶ್ ಬಮುಲ್ ಅಧ್ಯಕ್ಷ ಸ್ಥಾನ ಅಲಂಕರಿಸಬೇಕೆನ್ನುವ ಒತ್ತಡ ಎಲ್ಲರಿಂದಲೂ ಬಂದಿದ್ದು, ಈ ನಿಟ್ಟಿನಲ್ಲಿ ಚರ್ಚೆಗಳು ಆರಂಭಗೊಂಡಿವೆ.
ಈ ಬಾರಿ ಗೆಲುವು ಸಾಧಿಸಿದವರಲ್ಲಿ ಹಲವು ಮಂದಿ ಒಂದಕ್ಕಿಂತ ಹೆಚ್ಚು ಬಾರಿ ನಿರ್ದೇಶಕರಾಗಿ ಆಯ್ಕೆಯಾದವರು. ಚನ್ನಪಟ್ಟಣದ ಲಿಂಗೇಶ್ ಕುಮಾರ್ 4ನೇ ಬಾರಿಗೆ ನಿರ್ದೇಶಕರಾಗಿ ಆಯ್ಕೆಯಾಗಿದ್ದರೆ. ಪಿ.ನಾಗರಾಜು ಅವರು ದಾಖಲೆ ಗೆಲುವು ಹೊಂದಿದ್ದಾರೆ. ಇನ್ನು ಕೆಇಬಿ ರಾಜಣ್ಣ, ಹರೀಶ್ ಕುಮಾರ್ ಎರಡು ಬಾರಿಗೆ ನಿರ್ದೇಶಕರಾಗಿದ್ದಾರೆ. ಇವರೆಲ್ಲರೂ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿರುವವರೇ. ಮತ್ತೊಂದೆಡೆ ಮೊದಲ ಬಾರಿಗೆ ಬಮುಲ್ ನಿರ್ದೇಶಕರಾಗಿರುವ ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಸಹೋದರ ಎಚ್.ಎನ್.ಅಶೋಕ್ ಸಹಕಾರ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿರುವ ಕಾರಣ ಅಧ್ಯಕ್ಷ ಸ್ಥಾನದ ಆಸೆ ಇವರಲ್ಲಿ ಮೊಳೆತಿದೆ.
ಇದರ ಜತೆಗೆ ಆನೇಕಲ್‌ನ ಆರ್.ಕೆ ರಮೇಶ್, ಮಾಜಿ ಸಂಸದ ಡಿ.ಕೆ.ಸುರೇಶ್ ಅವರೊಂದಿಗೆ ಉತ್ತಮ ಒಡನಾಟ ಹೊಂದಿರುವ ಕಾರಣ ಇವರೂ ಈ ಬಾರಿ ಅಧ್ಯಕ್ಷ ರಾಗುವ ಆಸೆ ಹೊಂದಿದ್ದಾರೆ. ಮತ್ತೊಂದೆಡೆ ಹೊಸಕೋಟೆಯಿಂದ ಆಯ್ಕೆಯಾಗಿರುವ ಬಿ.ವಿ. ಸತೀಶ್‌ಗೌಡ ಅವರನ್ನು ಬಮುಲ್ ಅಧ್ಯಕ್ಷ ಗಾಧಿ ಮೇಲೆ ಕೂರಿಸಬೇಕು ಎನ್ನುವ ಹಂಬಲದೊಂದಿಗೆ ಶಾಸಕ ಶರತ್ ಬಚ್ಚೇಗೌಡ ಬ್ಯಾಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳ ದಂಡೇ ಹುಟ್ಟಿಕೊಂಡಿದೆ.
ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವ ಜತೆಗೆ, ಆಕಾಂಕ್ಷಿಗಳ ಹಿಂದೆ ನಿಂತಿರುವ ನಾಯಕರ ದಂಡು ರಾಜಕೀಯ ಚಿತ್ರಣವನ್ನೇ ಬದಲಾವಣೆ ಮಾಡುವ ಸಾಧ್ಯತೆ ಇರುವ ಕಾರಣ, ಯಾರನ್ನು ಅಧ್ಯಕ್ಷನ್ನಾಗಿ ಮಾಡಿದರೂ ಮತ್ತೊಬ್ಬರು ಮುನಿಸಿಕೊಳ್ಳಬಹುದು ಅಥವಾ ರಾಜಕೀಯ ಮೇಲಾಟಕ್ಕೆ ಕಾರಣವಾಗಬಹುದು ಎನ್ನುವ ಹಿನ್ನೆಲೆಯಲ್ಲಿ ಡಿ.ಕೆ. ಸುರೇಶ್ ಅವರನ್ನೇ ಬಮುಲ್ ಅಧ್ಯಕ್ಷರನ್ನಾಗಿ ಮಾಡಬೇಕೆನ್ನುವ ಬೇಡಿಕೆ ಪಕ್ಷದಲ್ಲಿ ಹೆಚ್ಚಿದೆ.
ಡಿ.ಕೆ.ಸುರೇಶ್ ಕೆಎಂಎಫ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟೇ ಬಮುಲ್‌ನ ನಿರ್ದೇಶಕರಾಗಿದ್ದಾರೆ. ಅವರ ಬಮುಲ್ ಅಧ್ಯಕ್ಷರಾಗಲು ಒಪ್ಪುವುದಿಲ್ಲ ಎಂದು ಹೇಳಲಾಗುತ್ತಿದೆ. ಆದರೆ, ಕೆಎಂಎಫ್ ಅಧ್ಯಕ್ಷ ಗಾದಿ ಅಲಂಕರಿಸಲು ಇನ್ನೂ ಮೂರ್ನಾಲ್ಕು ತಿಂಗಳ ಅವಕಾಶ ಇರುವ ಕಾರಣ ಅಲ್ಲಿಯವರೆಗಾದರೂ ಅವರು ಅಧ್ಯಕ್ಷರಾಗಲಿ ಎನ್ನುವ ಒತ್ತಡ ಹಾಕಲಾಗುತ್ತಿದೆ. ಈ ನಿಟ್ಟಿನಲ್ಲಿ ಅವರ
ಮನವೊಲಿಸುವ ಕೆಲಸವೂ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಒಂದು ವೇಳೆ ಡಿ.ಕೆ.ಸುರೇಶ್ ಬಮುಲ್ ಅಧ್ಯ್ಯಕ್ಷರಾಗಲು ಒಪ್ಪಿದರೆ ಸದ್ಯಕ್ಕೆ ಎದುರಾಗಬಹುದಾದ ಸಮಸ್ಯೆಯಿಂದ ತಪ್ಪಿಸಿಕೊಳ್ಳಬಹುದು. ನಂತರ ಅಧಿಕಾರ ಹಂಚಿಕೆ ಸೂತ್ರದ ಮೂಲಕ ಎಲ್ಲರನ್ನೂ ಸಮಾಧಾನಪಡಿಸಿ ಪರಿಸ್ಥಿತಿ ತಿಳಿಗೊಳಿಸಬಹುದು ಎನ್ನುವ ಲೆಕ್ಕಾಚಾರವೂ ಇದೆ ಎನ್ನಲಾಗುತ್ತಿದೆ.
ಪ್ರತಿ ಒಕ್ಕೂಟದಿಂದ ಕೆಎಂಎಫ್ ಗೆ ಓರ್ವ ನಿರ್ದೇಶಕನನ್ನು ನಾಮ ನಿರ್ದೇಶನ ಮಾಡಬೇಕು. ಈ ಬಾರಿ ಬೆಂಗಳೂರು ಸಹಕಾರ ಹಾಲು ಒಕ್ಕೂಟದಿಂದ ಮಾಜಿ ಸಂಸದ ಕನಕಪುರ ಕ್ಷೇತ್ರದ ಬಮುಲ್ ನಿರ್ದೇಶಕ ಡಿ.ಕೆ.ಸುರೇಶ್ ಅವರ ನಾಮ ನಿರ್ದೇಶನ ಬಹುತೇಕ ಖಚಿತವಾಗಿದೆ. ಡಿ.ಕೆ.ಸುರೇಶ್ ಕೆಎಂಎಫ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ಒಕ್ಕೂಟದಿಂದ ನಾಮ ನಿರ್ದೇಶನ ಅವಶ್ಯವಾಗಿದೆ. ಆದರೆ, ರಾಜ್ಯದ ಇನ್ನೂ ಕೆಲವು ಒಕ್ಕೂಟಗಳ ನಿರ್ದೇಶಕ ಸ್ಥಾನದ ಚುನಾವಣೆ ಮತ್ತು ಅ‘್ಯಕ್ಷರ ಆಯ್ಕೆ ಬಾಕಿ ಇರುವ ಕಾರಣ ಇನ್ನೂ ಮೂರ್ನಾಲ್ಕು ತಿಂಗಳು ಕಾಯಬೇಕಾದ ಅನಿವಾರ್ಯತೆ ಇದೆ.