ಕೋಟ್ಯಾನ್ ಅಮಾನತು ವಾಪಸ್ ಗೆ ಆಗ್ರಹ

Published on

ಮೂಲ್ಕಿ: ಶಾಸಕ ಉಮಾನಾಥ ಕೋಟ್ಯಾನ್ ಅವರನ್ನು ವಿಧಾನಸಭೆಯಿಂದ ಅಮಾನತು ಮಾಡಿರುವ ಸ್ಪೀಕರ್ ಯು.ಟಿ.ಖಾದರ್ ನಡೆ ದುರುದ್ದೇಶದಿಂದ ಕೂಡಿದೆ ಎಂದು ಮೂಲ್ಕಿ- ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಮಂಡಲಾಧ್ಯಕ್ಷ ದಿನೇಶ್ ಪುತ್ರನ್ ಆರೋಪಿಸಿದ್ದಾರೆ.

ಕಾಂಗ್ರೆಸ್ ಮುಸ್ಲಿಂ ಗುತ್ತಿಗೆದಾರರಿಗೆ ಶೇ.4 ಮೀಸಲಾತಿ ನೀಡಿರುವುದು ಅಸಂವಿಧಾನಿಕ ನಡೆ. ಬಿಲ್ ಪಾಸ್ ಮಾಡಲು ಅವಕಾಶ ನೀಡಲ್ಲ ಎಂಬ ಕಾರಣಕ್ಕೆ ಬಿಜೆಪಿ ಶಾಸಕರನ್ನು ಅಮಾನತು ಮಾಡಲಾಗಿದೆ. ಕೂಡಲೇ ಅಮಾನತು ಹಿಂಪಡೆಯಬೇಕು. ಇಲ್ಲದಿದ್ದರೆ ಕ್ಷೇತ್ರಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಮೂಲ್ಕಿಯಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸುನೀಲ್ ಆಳ್ವ ಮಾತನಾಡಿ, ಸ್ಪೀಕರ್ ಹುದ್ದೆ ಸಾಂವಿಧಾನಿಕವಾಗಿದ್ದು, ಪಕ್ಷಪಾತ ನೀತಿ ಸರಿಯಲ್ಲ. ಕೂಡಲೇ ಶಾಸಕರ ಅಮಾನತು ಹಿಂಪಡೆಯಬೇಕು. ಇಲ್ಲದಿದ್ದರೆ ಕ್ಷೇತ್ರಾದ್ಯಂತ ಮತದಾರರ ಜಾಗೃತಿ ಜತೆಗೆ ನ್ಯಾಯಕ್ಕಾಗಿ ಜನಾಂದೋಲನ ನಡೆಸಲಾಗುವುದು ಎಂದರು. ಮಂಗಳೂರು ಹಾಗೂ ಮೂಡುಬಿದಿರೆಯ ಮುಡಾ ಕಚೇರಿಯಲ್ಲಿ ಅವ್ಯವಸ್ಥೆಯಿಂದ ಜನಸಾಮಾನ್ಯರಿಗೆ ತೊಂದರೆಯಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಈಶ್ವರ ಕಟೀಲ್, ರಂಜಿತ್ ಪೂಜಾರಿ ತೋಡಾರ್, ಹರಿಪ್ರಸಾದ್ ಶೆಟ್ಟಿ, ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸತೀಶ್ ಅಂಚನ್, ಸದಸ್ಯರಾದ ಶೈಲೇಶ್ ಕುಮಾರ್, ಸುಭಾಷ್ ಶೆಟ್ಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net