

ಸೋಮವಾರಪೇಟೆ: ಸಿಆ್ಯಂಡ್‌ಡಿ ಭೂಮಿ ಮಂಜೂರಿಗೆ ಆಗ್ರಹಿಸಿ ರೈತಹೋರಾಟ ಸಮಿತಿ ಹೋರಾಟಕ್ಕೆ ವಿವಿಧ ಗ್ರಾಮಗಳ ಅಧ್ಯಕ್ಷರು ಬೆಂಬಲ ಸೂಚಿಸಿದರು.
ರೈತ ಹೋರಾಟ ಸಮಿತಿ ವತಿಯಿಂದ ಸೋಮವಾರ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷರುಗಳ ಸಭೆಯಲ್ಲಿ ಹೋರಾಟದ ರೂಪುರೇಷಗಳ ಬಗ್ಗೆ ಚರ್ಚೆ ನಡೆಯಿತು.
ಕಳೆದ 5 ದಶಕಗಳಿಂದ ಸಿ ಆ್ಯಂಡ್ ಡಿ ಭೂಮಿಯಲ್ಲಿ ರೈತರು ಕೃಷಿ ಮಾಡಿಕೊಂಡು ಬರುತ್ತಿದ್ದಾರೆ. ಸಿ ಆ್ಯಂಡ್ ಡಿ ಭೂಮಿಯನ್ನು ಕೃಷಿಗೆ ಯೋಗ್ಯವಲ್ಲದ ಭೂಮಿ ಎಂದು ಕಂದಾಯ ಇಲಾಖೆಯ ಬೇಜವಾಬ್ದಾರಿಯಿಂದ ದಾಖಲಿಸಲಾಗಿದೆ ಎಂದು ಹೋರಾಟ ಸಮಿತಿ ಅಧ್ಯಕ್ಷ ಚಕ್ರವರ್ತಿ ಸುರೇಶ್ ಸಭೆಯಲ್ಲಿ ಹೇಳಿದರು.
ಸಿಆ್ಯಂಡ್‌ಡಿ ಭೂಮಿ ಎಲ್ಲಿದೆ ಎಂಬುದೇ ಕಂದಾಯ ಇಲಾಖೆಗೆ ಗೊತ್ತಿಲ್ಲ. ಈಗ ಶಾಂತಳ್ಳಿ, ಬೆಟ್ಟದಳ್ಳಿ, ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೇರಿದಂತೆ ತಾಲೂಕಿನ ಕೆಲ ಕಡೆ 25ಸಾವಿರ ಎಕರೆ ಸಿಆ್ಯಂಡ್‌ಡಿ ಭೂಮಿ ಇದ್ದು, ಅದನ್ನು ಅರಣ್ಯ ಇಲಾಖೆಗೆ ನೀಡಬೇಕೆಂದು ಸುಪ್ರಿಕೋರ್ಟ್ ಅದೇಶದಂತೆ ಸರ್ಕಾರ ತೆರವಿಗೆ ಮುಂದಾಗಿದೆ. ಕೃಷಿ ಭೂಮಿ ತೆರವು ಆದರೆ, ರೈತರು ಬೀದಿಗೆ ಬರಬೇಕಾಗುತ್ತದೆ. ಹೋರಾಟದ ಮೂಲಕವೇ ನಮ್ಮ ಭೂಮಿಯ ಹಕ್ಕುನ್ನು ಪಡೆಯಬೇಕು. ಜಿಲ್ಲೆಯ ಹಾಗು ಮಲೆನಾಡು ವಿಭಾಗದ ಶಾಸಕರು ಒಗ್ಗಟ್ಟಿನಿಂದ ಅಧಿವೇಶನದಲ್ಲಿ ಚರ್ಚೆ ಮಾಡಿ, ರೈತರ ಭೂಮಿಯನ್ನು ಉಳಿಸಿಕೊಡಬೇಕು ಎಂದು ಹೇಳಿದರು.
ಸಭೆಯ ಸ್ಥಳಕ್ಕೆ ಬಂದ ಶಾಸಕ ಡಾ.ಮಂತರ್‌ಗೌಡ, ರೈತರ ಬೇಡಿಕೆಯನ್ನು ಆಲಿಸಿದರು. ರೈತರಿಗೆ ನ್ಯಾಯ ಒದಗಿಸಿಕೊಡುವ ಪ್ರಾಮಾಣಿಕ ಪ್ರಯತ್ನ ನಡೆಯುತ್ತಿದೆ. ಈಗಾಗಲೇ ಕಂದಾಯ ಹಾಗು ಅರಣ್ಯ ಸಚಿವರೊಂದಿಗೆ ಅನೇಕ ಸುತ್ತಿನ ಮಾತುಕತೆ ನಡೆದಿದೆ. ರೈತರ ಸಂಕಷ್ಟವನ್ನು ಪರಿಹರಿಸುವ ಭರವಸೆಯನ್ನು ಸಚಿವರು ನೀಡಿದ್ದಾರೆ. ಸಿಆ್ಯಂಡ್‌ಡಿ ಭೂಮಿ ಸಮಸ್ಯೆ, ಅರಣ್ಯ ಮತ್ತು ಕಂದಾಯ ಇಲಾಖೆಯ ಜಂಟಿ ಸರ್ವೆ, ಸೆಕ್ಷನ್ 4 ಸರ್ವೆಯ ಬಗ್ಗೆ ಅಧಿವೇಶನದಲ್ಲಿ ಮಾತನಾಡುತ್ತೇನೆ ಎಂದು ಭರವಸೆ ನೀಡಿದರು.
ಸಭೆಯಲ್ಲಿ ರೈತ ಸಂಘದ ಅಧ್ಯಕ್ಷ ಕೆ.ಎಂ.ದಿನೇಶ್, ಸಂಚಾಲಕ ಕೆ.ಎಂ.ಲೋಕೇಶ್, ಬಿ.ಜೆ.ದೀಪಕ್, ಬಗ್ಗನ ಅನಿಲ್ ಕುಮಾರ್ ಪ್ರಮುಖರಾದ ನಂದಕುಮಾರ್, ಬಿ.ಎಂ.ಸುರೇಶ್ ಇದ್ದರು.