ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರಾಯ್ಕೆ ಇಂದು

02 svr 01
Published on

ಸವಣೂರ: ಸ್ಥಳೀಯ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗಾಗಿ ನ. 3ರಂದು ಚುನಾವಣೆ ಜರುಗಲಿದೆ ಎಂದು ಚುನಾವಣಾಧಿಕಾರಿ, ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ ತಿಳಿಸಿದ್ದಾರೆ.

ಪುರಸಭೆಯಲ್ಲಿ ಕಾಂಗ್ರೆಸ್​ನ 15, ಬಿಜೆಪಿಯ 8, ಜೆಡಿಎಸ್​ನ ಇಬ್ಬರು ಹಾಗೂ ಪಕ್ಷೇತರ ಇಬ್ಬರು ಸದಸ್ಯ ಬಲ ಹೊಂದಿದ್ದಾರೆ. ಅಧ್ಯಕ್ಷ ಸ್ಥಾನ ಬ ವರ್ಗದ ಮಹಿಳೆ ಹಾಗೂ ಉಪಾಧ್ಯಕ್ಷ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ.

ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಸದಸ್ಯರಲ್ಲಿ ಬ ವರ್ಗದ ಮಹಿಳೆ ಇಲ್ಲದಿರುವುದು ಕಾಂಗ್ರೆಸ್​ಗೆ ಹಿನ್ನಡೆಯಾದಂತಾಗಿದೆ. ಮೀಸಲಾತಿ ಘೊಷಣೆಗೊಂಡ ಸಂದರ್ಭದಲ್ಲಿ 24ನೇ ವಾರ್ಡ್​ನ ಪಕ್ಷೇತರ ಸದಸ್ಯೆ(ಬಿಜೆಪಿ ಬಂಡಾಯ) ಲೀಲಾವತಿ ಗಾಣಗೇರ ಅವರನ್ನು ಅಧ್ಯಕ್ಷ ಸ್ಥಾನದಲ್ಲಿ ಕೂರಿಸಬೇಕೆಂದು ಕಾಂಗ್ರೆಸ್ ಪ್ರಯತ್ನ ನಡೆಸಿತ್ತು. ಆದರೆ, ಲೀಲಾವತಿ ಅವರು ಹೆಚ್ಚು ಜಮೀನು ಹೊಂದಿರುವುದರಿಂದ ಬ ವರ್ಗದ ಜಾತಿ ಪ್ರಮಾಣ ಪತ್ರ ದೊರೆಯದಿರುವುದು ನಿರಾಸೆ ಮೂಡಿಸಿದೆ. ಬಿಜೆಪಿ ಬೆಂಬಲಿತ ಏಕೈಕ ಬ ವರ್ಗದ ಸದಸ್ಯೆ ಶೈಲಾ ಎಚ್. ಮುದಿಗೌಡ್ರ ಅವರು ಅಧ್ಯಕ್ಷರಾಗಿ ಆಯ್ಕೆಗೊಳ್ಳುವುದು ಖಚಿತವಾದಂತಾಗಿದೆ.

ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದರಿಂದ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರಲ್ಲಿ ಪೈಪೋಟಿ ಹೆಚ್ಚಿದೆ. ಕಾಂಗ್ರೆಸ್​ನ ಅಲ್ಲಾವುದೀನ್ ಮನಿಯಾರ್ ತಂಡ ಬಿಜೆಪಿಗೆ ಬೆಂಬಲ ನೀಡುತ್ತಿರುವ ಹಿನ್ನೆಲೆಯಲ್ಲಿ ಮನಿಯಾರ್ ಅವರನ್ನೇ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಗೊಳಿಸಲು ಬಿಜೆಪಿ ಚಿಂತನೆ ನಡೆಸಿದೆ.

ಆದರೆ, ಇದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಸ್ವಕ್ಷೇತ್ರವಾಗಿರುವುದರಿಂದ ಕಾಂಗ್ರೆಸ್ ಸದಸ್ಯರ ಮನವೊಲಿಸುವ ಮೂಲಕ ಬಿಜೆಪಿ ಹಿರಿಯ ಸದಸ್ಯ ಹಾಗೂ ಸಾಧರ ಸಮಾಜದ ತಾಲೂಕಾಧ್ಯಕ್ಷ ಸದಾನಂದ ಕೆಮ್ಮಣಕೇರಿ ಅಥವಾ ಮಹೇಶ ಮುದಗಲ್ಲ ಅವರನ್ನು ಉಪಾಧ್ಯಕ್ಷರನ್ನಾಗಿ ಮಾಡುವುದು ನಿಶ್ಚಿತವಾಗಿದೆ ಎಂದು ಬಿಜೆಪಿ ಹಿರಿಯ ಮುಖಂಡರ ಹೇಳಿಕೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net