

ಚಾಮರಾಜನಗರ: ಸಾಮಾನ್ಯವಾಗಿ ಕರ್ನಾಟಕದ ಮುಖ್ಯಮಂತ್ರಿಗಳು ಹೋಗಲು ಹಿಂಜರಿಯುವ ಚಾಮರಾಜನಗರಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಇಂದು ಆಗಮಿಸಿದ್ದಲ್ಲದೆ, ಕನ್ನಡದಲ್ಲೇ ತಮ್ಮ ಭಾಷಣವನ್ನು ಆರಂಭಿಸಿ, ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಚಾಮರಾಜನಗರದಲ್ಲಿನ ಚಾಮರಾಜನಗರ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಸಿಮ್ಸ್) ಉದ್ಘಾಟನೆ ಮಾಡಿದ ರಾಷ್ಟ್ರಪತಿ ರಾಮನಾಥ ಕೋವಿಂದ, ಕನ್ನಡದಲ್ಲೇ ಮಾತು ಆರಂಭಿಸಿದರು. ನನಗೆ ಕರ್ನಾಟಕಕ್ಕೆ ಬರುವುದು ತುಂಬಾ ಇಷ್ಟ ಎಂದ ಅವರು, ನವರಾತ್ರಿ ಹಬ್ಬದಂದೇ ಸಿಮ್ಸ್ ಉದ್ಘಾಟನೆ ಆಗುತ್ತಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು.
ಚಾಮರಾಜನಗರದಲ್ಲಿ ಮೆಡಿಕಲ್ ಕಾಲೇಜ್ ಆರಂಭವಾಗಿರುವುದು ಖುಷಿಯ ವಿಚಾರ. ಕರೊನಾ ಸಂದರ್ಭದಲ್ಲಿ ವೈದ್ಯರು, ವೈದ್ಯಕೀಯ ಸಿಬ್ಬಂದಿ ಕರೊನಾ ವಾರಿಯರ್ಸ್ ಆಗಿ ಅತ್ಯುತ್ತಮ ಕೆಲಸ ಮಾಡಿದ್ದಾರೆ. ನಮ್ಮ ದೇಶದ ಹೆಮ್ಮೆಯನ್ನು ಹೆಚ್ಚಿಸಿದ್ದಾರೆ. ದೇಶದ ಅಭಿವೃದ್ಧಿಯಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳು ಭದ್ರ ಬುನಾದಿ ಎಂದ ಅವರು ದೇಶದ ಪ್ರತಿ ಮೂಲೆಗೂ ಆರೋಗ್ಯ ಸೇವೆ ವಿಸ್ತರಿಸುವುದು ಅತ್ಯಂತ ಅಗತ್ಯ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ರಾಜ್ಯಪಾಲ ಥಾವರ್ಚಂದ್ ಗೆಹ್ಲೋತ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರು, ಶಾಸಕರು ಸೇರಿ ಹಲವಾರು ಗಣ್ಯರು ಉಪಸ್ಥಿತರಿದ್ದರು.