

ನಂಜನಗೂಡು: ಮಠಮಾನ್ಯಗಳು ಸಂಸ್ಕೃತಿ ಹಾಗೂ ಸಂಸ್ಕಾರ ಬೆಳೆಸುತ್ತಿವೆ ಎಂದು ಮೈಸೂರಿನ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಬಿ. ರಂಗೇಗೌಡ ಹೇಳಿದರು.
ಸುತ್ತೂರು ಮಠದಲ್ಲಿ ಗುರುವಾರ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಶ್ರಾವಣ ಮಾಸದ ಪ್ರವಚನ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹನ್ನೆರಡನೇ ಶತಮಾನದಲ್ಲಿಯೇ ಬಸವಣ್ಣನವರು ಅಸ್ಪಶ್ಯತೆಯನ್ನು ಹೋಗಲಾಡಿಸಲು ಕ್ರಾಂತಿಯನ್ನೇ ಮಾಡಿದರು. ಧಾರ್ಮಿಕ, ಆಧ್ಯಾತ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸುಧಾರಣೆ ತರುವಲ್ಲಿ ಮಹತ್ವದ ಪಾತ್ರ ವಹಿಸಿದರು. ಆಧುನಿಕತೆಯ ಸೋಗಿನಲ್ಲಿ ಮೊಬೈಲ್ ಗೀಳಿನಿಂದ ಭಜನೆ, ಪ್ರವಚನ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಕಡಿಮೆಯಾಗುತ್ತಿದ್ದು, ಸುತ್ತೂರು ಮಠವು ಸೇರಿದಂತೆ ನಾಡಿನ ಅನೇಕ ಮಠಮಾನ್ಯಗಳು ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದರ ಮೂಲಕ ನಿರಂತರವಾಗಿ ಸಮಾಜದ ಉನ್ನತಿಗಾಗಿ ಶ್ರಮಿಸುತ್ತಿವೆ ಎಂದು ಹೇಳಿದರು.
ಮೈಸೂರಿನ ಉಪವಿಭಾಗಾಧಿಕಾರಿ ಆಶಪ್ಪ ಮಾತನಾಡಿ, ಇಂದಿನ ದಿನಗಳಲ್ಲಿ ಮಾನವೀಯ ಮೌಲ್ಯಗಳು ಕಣ್ಮರೆಯಾಗುತ್ತಿದ್ದು, ಶಿಕ್ಷಣದ ಜತೆಗೆ ಸಂಸ್ಕಾರವೂ ಅವಶ್ಯಕವಾಗಿರುತ್ತದೆ. ಈ ನಿಟ್ಟಿನಲ್ಲಿ ಸಮಾಜದಲ್ಲಿ ಮೌಲ್ಯಗಳನ್ನು ಮಠಗಳು ನಿರಂತರವಾಗಿ ನೀಡುತ್ತಿವೆ. ಧಾರ್ಮಿಕ ಆಚರಣೆಗಳ ಮೂಲಕ ಜನರಲ್ಲಿ ಪರಸ್ಪರ ಸಹಕಾರ, ಸಹಬಾಳ್ವೆ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂದರು.
ಸಾನ್ನಿಧ್ಯ ವಹಿಸಿದ್ದ ಮುಡುಕುತೊರೆಯ ಕಲ್ಮಠದ ಶ್ರೀ ನಂದಿಕೇಶ್ವರ ಸ್ವಾಮೀಜಿ ಮಾತನಾಡಿ, ಮಾಸಗಳಲ್ಲಿ ಶ್ರೇಷ್ಠವಾದದು ಶ್ರಾವಣಮಾಸ, ಪ್ರಾಚೀನ ಕಾಲದಲ್ಲಿ ಶಿಷ್ಯರು ತಾವು ಹಿಂದೆ ಕಲಿತ ವಿದ್ಯೆಯನ್ನು ಶ್ರಾವಣ ಮಾಸದಲ್ಲಿ ಗುರುವಿಗೆ ಒಪ್ಪಿಸುತ್ತಿದ್ದರು. ಹೊಸ ವೇದ ಪಾಠಗಳನ್ನು ಕಲಿಯುತ್ತಿದ್ದರು. ಪ್ರವಚನಗಳನ್ನು ಕೇಳುವುದರಿಂದ ಮಾನವನು ಲೌಖಿಕ ಜಂಜಾಟದಿಂದ ಪಾರಾಗಬಹುದು ಎಂದರು.
ಲಕ್ಕಣ್ಣ ದಂಡೇಶ ವಿರಚಿತ ಶಿವತತ್ವ ಚಿಂತಾಮಣಿ ಕೃತಿಯ ಪ್ರವಚನವನ್ನು ಜೆಎಸ್‌ಎಸ್ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಪ್ರೊ.ಎಚ್.ಬಿ.ದೇವಣ್ಣ ನಡೆಸಿಕೊಟ್ಟರು. ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಡಿ.ಎಸ್.ಸಿದ್ಧಲಿಂಗಸ್ವಾಮಿ ಕಾವ್ಯವಾಚನ ಮಾಡಿದರು.
ಕಾರ್ಯಕ್ರಮದಲ್ಲಿ ಗುರುಕುಲದ ಸಾಧಕರು, ಜೆಎಸ್‌ಎಸ್ ಸಂಸ್ಥೆಗಳ ಅಧಿಕಾರಿ ವರ್ಗದವರು ಹಾಗೂ ಗ್ರಾಮಸ್ಥರು, ಭಕ್ತರು ಇದ್ದರು.