'ಸ್ವತಂತ್ರ ಭಾರತದ ಇಂದಿನ ಸ್ಥಿತಿ-ಗತಿ' ಉಪನ್ಯಾಸ; ಆಧುನಿಕನ ತಂತ್ರಜ್ಞಾನದಿಂದ ಬದುಕಿನ ಮೌಲ್ಯ ಕುಂಠಿತ

Seminar
Published on

ಬೆಂಗಳೂರು: ಆಧುಕಿನ ತಂತ್ರಜ್ಞಾನ ಹೆಚ್ಚಾಗುತ್ತಿದ್ದಂತೆ ಬದುಕಿನ ಮೌಲ್ಯ ಕುಂಠಿತವಾಗುತ್ತಾ ಸಾಗಿತು. ಬದುಕಿನ ದಾರಿ ಬದಲಾಗುತ್ತಿರುವ ಹೊತ್ತಿನಲ್ಲಿ ಪ್ರತಿಯೊಬ್ಬರೂ ಮೌಲ್ಯಯುತ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು ಎಂದು ಮಲ್ಲೇಶ್ವರಂ ಎಂ.ಎಲ್​.ಎ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ. ಗಣಪತಿ ಹೆಗಡೆ ಅಭಿಪ್ರಾಯಪಟ್ಟರು.

ಕರ್ನಾಟಕ ಸವೋರ್ದಯ ಮಂಡಲ ನಗರ ಜಿಲ್ಲಾ ಟಕ ಹಾಗೂ ಶೇಷಾದ್ರಿಪುರಂ ಶಿಕ್ಷಣ ದತ್ತಿ ಇದರ ವತಿಯಿಂದ ಶೇಷಾದ್ರಿಪುರಂ ಪ್ರೌಢಶಾಲಾ ಸಂಭಾಗಣದಲ್ಲಿ ಆಯೋಜಿಸಿದ್ದ 76ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ 'ಸ್ವತಂತ್ರ ಭಾರತದ ಇಂದಿನ ಸ್ಥಿತಿ-ಗತಿ' ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಮ್ಮ ವರ್ತಮಾನ ಮೊಬೈಲ್​ನಲ್ಲಿ ಕಳೆದು ಹೋಗುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಹಿಂದೆ ಎಲ್ಲರೂ ಬೆಳಗ್ಗೆ ಎದ್ದ ಕೂಡಲೆ ದೇವರಿಗೆ, ತಂದೆ-ತಾಯಿಗೆ ನಮಸ್ಕರಿಸುತ್ತಿದ್ದರು. ಈ ಪದ್ಧತಿ ಪ್ರಸ್ತುತ ಮಾಯವಾಗುತ್ತಿದ್ದು, ಮೊಬೈಲ್​ಗೆ ನಮಸ್ಕರಿಸುತ್ತಿದ್ದೇವೆ. ಈ ರೀತಿಯ ದಾಸ್ಯಕ್ಕೆ ಒಳಗಾದವರನ್ನು ಸ್ವತಂತ್ರರು ಎಂದು ಕರೆಯಲು ಸಾಧ್ಯವಿಲ್ಲ. ತಂತ್ರಜ್ಞಾನದ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಂತೆ ಭಾವನೆಗಳು ಸತ್ತು ಹೋಗಲು ಪ್ರಾರಂಭಿಸಿವೆ ಎಂದರು.

ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳೇ ಕಳೆದಿವೆ. ಆದರೆ ಒಳ್ಳೆಯದು ಯಾವುದು, ಕೆಟ್ಟದ್ದು ಯಾವುದು ಎಂಬುದನ್ನು ಅರ್ಥೈಸಿಕೊಂಡು ಸ್ವೀಕಾರ ಮಾಡುವ ಶಕ್ತಿ ಸ್ವಾತಂತ್ರ್ಯ ಇನ್ನೂ ಸಿಕ್ಕಿಲ್ಲ. ಹೆತ್ತವರು ಕೊಟ್ಟ ಸಂಸ್ಕಾರ, ಗುರು ಹಿರಿಯರಿಂದ ಬಂದ ಜ್ಞಾನ, ಪ್ರಾಚಿನರು ಕೊಟ್ಟ ಜೀವನದ ಸಂದೇಶ ನಮ್ಮಲ್ಲಿದೆ. ಅದಕ್ಕೆ ಜೀವ ಕೊಡುವ ಕೆಲಸ ಆಗಬೇಕು. ಸ್ವೇಚ್ಛಾಚಾರದ ಸ್ವಾತಂತ್ರ್ಯದ ಬದಲು ಬದುಕಿಗೆ ಬೇಕಾದ ಮೌಲ್ಯಗಳನ್ನು ಬೆಳೆಸಿಕೊಳ್ಳುವ ಸ್ವಾತಂತ್ರ್ಯವನ್ನು ಗಳಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ನಿನ್ನನ್ನು ನೀನು ಅವಲೋಕನ ಮಾಡಿಕೊಳ್ಳದೇ ಹೋದರೆ ಬದುಕಿನ ಅರ್ಥ ಇರುವುದಿಲ್ಲ ಎಂದು ಗಾಂಧೀಜಿ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಜೀವನದಲ್ಲಿ ಹೇಗೆ ಉತ್ತುಂಗ ಸ್ಥಾನ ತಲುಪಬೇಕು ಎಂಬುದರ ಬಗ್ಗೆ ಚಿಂತನೆ ಅಗತ್ಯ. ಒಳ್ಳೆಯ ವಿಚಾರಗಳನ್ನು ಸ್ವೀಕಾರ ಮಾಡಲು ತುಡಿತ ಇರಬೇಕು ಎಂದು ತಿಳಿಸಿದರು.

ಪಾಶ್ಚಿಮಾತ್ಯ ಶಿಕ್ಷಣ, ಸಂಸತಿಯ ಸೆಳೆತದಲ್ಲಿ ಹೊರಳಾಡುತ್ತಿದ್ದೇವೆ. ಇದರಿಂದ ಹೊರಬರುವುದೇ ನಿಜವಾದ ಸ್ವಾತಂತ್ರ್ಯ. ಮಹಾತ್ಮರು ಎನಿಸಿಕೊಂಡ ಗಾಂಧೀಜಿ ಅಣಕು ಮಾಡುವ ಬದಲು ಅನುಸರಿಸಬೇಕು ಎಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ನಾಡೋಜ ಡಾ.ವೂಡೇ ಪಿ.ಕೃಷ್ಣ ಹೇಳಿದರು.

ಈ ಸಂದರ್ಭದಲ್ಲಿ ಕರ್ನಾಟಕ ಸವೋರ್ದಯ ಮಂಡಲದ ಅಧ್ಯಕ್ಷ ಡಾ.ಎಚ್​.ಎಸ್​. ಸುರೇಶ್​, ಕಾರ್ಯದರ್ಶಿ ಡಾ.ಯ.ಚಿ. ದೊಡ್ಡಯ್ಯ, ಕರ್ನಾಟಕ ಸವೋರ್ದಯ ಮಂಡಲದ ನಗರಾಧ್ಯಕ್ಷ ಡಾ. ಗುರುರಾಜ ಪೋಶೆಟ್ಟಿಹಳ್ಳಿ, ಶೇಷಾದ್ರಿಪುರಂ ಪ್ರೌಢಶಾಲಾ ಪ್ರಾಂಶುಪಾಲ ಎಂ.ಕೆ. ಚೌವ್ಹಾಣ್​ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net