ಪಾರದರ್ಶಕ ಚುನಾವಣೆಗೆ ಸಿದ್ಧತೆ

Untitled design (3)
Published on

ಯಾವುದೇ ಲೋಪಗಳಿಗೆ ಅವಕಾಶ ನೀಡದಂತೆ ಪಾರದರ್ಶಕ ಚುನಾವಣೆ ನಡೆಸುವ ನಿಟ್ಟಿನಲ್ಲಿ ನಿಷ್ಪಕ್ಷಪಾತದಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅಧಿಕಾರಿಗಳಿಗೆ ಸಲಹೆ ನೀಡಿದರು.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಲೋಕಸಭಾ ಚುನಾವಣಾ ಪೂರ್ವ ಸಂಬಂಧ ನೇಮಿಸಿರುವ ಸೆಕ್ಟರ್ ಮತ್ತು ಪೊಲೀಸ್ ಅಧಿಕಾರಿಗಳಿಗೆ ಶನಿವಾರ ಆಯೋಜಿಸಿದ್ದ 2ನೇ ಹಂತದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಚುನಾವಣೆ ನೀತಿ ಸಂಹಿತೆ ಜಾರಿಯ ಅವಧಿಯಲ್ಲಿ ಚುನಾವಣಾ ಆಯೋಗವು ಅಪೇಕ್ಷಿಸುವ ನಿಖರ ಮಾಹಿತಿ, ನಿಯಮಿತವಾಗಿ ಆಯಾ ಭಾಗದ ವರದಿಗಳನ್ನು ನೀಡಬೇಕು. ನಿಗದಿತ ಸಮಯಕ್ಕೆ ಮುಂಚಿತವಾಗಿ ಕರ್ತವ್ಯಕ್ಕೆ ಹಾಜರಾಗಬೇಕು. ಪಾಳಿ ಮೇಲೆ ಕರ್ತವ್ಯ ನಿರ್ವಹಿಸುವವರು ಇನ್ನೊಬ್ಬ ಅಧಿಕಾರಿ ಇಲ್ಲವೇ ಸಿಬ್ಬಂದಿ ಬರುವವರೆಗೂ ಕೆಲಸ ಬಿಟ್ಟು ಹೋಗುವಂತಿಲ್ಲ ಎಂದು ತಿಳಿಸಿದರು.

ಯಾವುದೇ ಕ್ಷಣದಲ್ಲಿ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಘೊಷಣೆಯಾಗಬಹುದು. ಚುನಾವಣಾ ಅಭ್ಯರ್ಥಿಗಳು ಕೈಗೊಳ್ಳುವ ಚುನಾವಣೆಗೆ ಸಂಬಂಧಪಟ್ಟ ವೆಚ್ಚಗಳು, ಚಟುವಟಿಕೆಯ ಮೇಲೆ ನಿಗಾವಹಿಸಬೇಕು. ಅಕ್ರಮ, ಲೋಪದ ವ್ಯವಹಾರಗಳು ಕಂಡು ಬಂದ ತಕ್ಷಣ ಚುನಾವಣಾ ಆಯೋಗದ ನಿರ್ದೇಶನಗಳಂತೆ ಕ್ರಮ ಕೈಗೊಳ್ಳಬೇಕು. ಮೇಲಧಿಕಾರಿಗಳಿಗೆ ಕಾಲ ಕಾಲಕ್ಕೆ ವರದಿ ಸಲ್ಲಿಸಬೇಕು ಎಂದರು.

ಸುಗಮ ಮತ್ತು ಪಾರದರ್ಶನ ಚುನಾವಣಾ ದೃಷ್ಟಿಯಿಂದ ಪ್ರತಿಯೊಂದು ಹಂತದ ಸಿಬ್ಬಂದಿಗೆ ತರಬೇತಿ, ಕಾರ್ಯಾಗಾರದ ಮೂಲಕ ಅರಿವು ಮೂಡಿಸಲಾಗುತ್ತದೆ. ಇದೇ ವೇಳೆ ಗೊಂದಲ, ಸಮಸ್ಯೆಗಳನ್ನು ಬಗೆಹರಿಸಿಕೊಂಡು ನಿಯಮಾನುಸಾರ ಕರ್ತವ್ಯ ನಿರ್ವಹಿಸಬೇಕು ಎಂದರು.

ಜಿ.ಪಂ.ಮುಖ್ಯ ನಿರ್ವಹಣಾಧಿಕಾರಿ ಪ್ರಕಾಶ ಜಿ.ಟಿ.ನಿಟ್ಟಾಲಿ ಮಾತನಾಡಿ, ಚುನಾವಣಾ ನೀತಿ ಸಂಹಿತೆಯನ್ನು ಯಾರೇ ಉಲ್ಲಂಘಿಸಿದರೂ ಮೊದಲು ಕಾನೂನು ಕ್ರಮ ತೆಗೆದುಕೊಳ್ಳಬೇಕು. ನಿಯೋಜಿತ ಜವಾಬ್ದಾರಿ ನಿರ್ವಹಣೆಯಲ್ಲಿ ಲೋಪವೆಸಗಬಾರದು. ಇಲ್ಲದಿದ್ದಲ್ಲಿ ಸಂಬಂಧಪಟ್ಟವರು

ಶಿಸ್ತುಕ್ರಮವನ್ನು ಎದುರಿಸಬೇಕಾಗುತ್ತದೆ. ಇದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಡಿ.ಎಲ.ನಾಗೇಶ್ ಮಾತನಾಡಿ, ಚೆಕ್​ಪೋಸ್ಟ್​ಗಳಲ್ಲಿ ಅಕ್ರಮವಾಗಿ ಸಾಗಿಸುವ ಉಡುಗೊರೆಯ ವಸ್ತುಗಳು, ಮದ್ಯ, ಮಾದಕ ವಸ್ತುಗಳು, ಹಣ ಸಿಕ್ಕಿದಲ್ಲಿ ಮೊದಲು ಸಾಕ್ಷ್ಯಕ್ಕಾಗಿ ವಿಡಿಯೋ ಮಾಡಿಸಬೇಕು. ಚುನಾವಣಾ ಸಂದರ್ಭದಲ್ಲಿ ಸಂಭವಿಸುವ ಜಗಳ, ಗಲಾಟೆಯ ತಡೆಯಲು ಸಿದ್ಧರಿರಬೇಕು ಎಂದರು.

ಅಪರ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ ಮಾತನಾಡಿ, ಅಭ್ಯರ್ಥಿಗಳ ಚುನಾವಣಾ ವೆಚ್ಚಗಳಿಗೊ ನಿರ್ದಿಷ್ಟ ಮಿತಿ ಇರುತ್ತದೆ. ಇದಕ್ಕಿಂತಲೂ ಹೆಚ್ಚಾಗಬಾರದು. ಈ ನಿಟ್ಟಿನಲ್ಲಿ ವೆಚ್ಚಗಳು ಮಿತಿಯೊಳಗೆ ಇವೆಯೇ? ಇಲ್ಲವೇ ಎನ್ನುವುದನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದರು.

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಜಿಲ್ಲೆಯ ಬಹುತೇಕ ಅಧಿಕಾರಿಗಳು ಮತ್ತು ಸಿಬ್ಬಂದಿ ಸಣ್ಣ ಕರ್ತವ್ಯ ಲೋಪಗಳಿಗೂ ಅವಕಾಶ ನೀಡದೇ ಅಚ್ಚುಕಟ್ಟಾಗಿ ಕರ್ತವ್ಯವನ್ನು ನಿರ್ವಹಿಸಿದ್ದಾರೆ. ಹಾಗೆಯೇ ಲೋಕಸಭಾ ಚುನಾವಣೆಯಲ್ಲೂ ಉತ್ತಮ ಕಾರ್ಯ ನಿರ್ವಹಣೆಯ ಮೂಲಕ ಮೆಚ್ಚುಗೆಗೆ ಪಾತ್ರರಾಗಬೇಕು ಎಂದರು. ಉಪ ವಿಭಾಗಾಧಿಕಾರಿ ಡಿ.ಎಚ್.ಅಶ್ವಿನ್, ಜಿಲ್ಲಾ ಚುನಾವಣಾ ವೆಚ್ಚ ಅಧಿಕಾರಿ ಎನ್.ಹರೀಶ್, ಜಿಲ್ಲಾ ಉದ್ಯೋಗಾಧಿಕಾರಿ ಎಂ.ಪ್ರಸಾದ್ ಮತ್ತಿತರರು ಇದ್ದರು.

ನೀತಿ ಸಂಹಿತೆ ಮಾರ್ಗದರ್ಶನ

ಚುನಾವಣಾ ಆಯೋಗದ ರಾಜ್ಯ ಮಟ್ಟದ ಸಂಪನ್ಮೂಲ ಅಧಿಕಾರಿ ಶಂಕರ್​ರೆಡ್ಡಿ ಚುನಾವಣಾ ಸಿಬ್ಬಂದಿ ಕರ್ತವ್ಯ ನಿರ್ವಹಣೆಯ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು. ಚುನಾವಣಾ ವೆಚ್ಚದ ಮೇಲೆ ನಿಗಾವಹಿಸುವ ಒಅಒಅ, ಗಿಗಿಖಿ, ಗಿಖಖಿ, ಖಖಖಿ, ಈಖಖಿ ತಂಡದ ಅಧಿಕಾರಿಗಳು ಮತ್ತು ಸಹಾಯಕ ಚುನಾವಣಾ ವೆಚ್ಚದ ಅಧಿಕಾರಿಗಳ ಜವಾಬ್ದಾರಿ, ಸಾಮಾನ್ಯ ಚುನಾವಣಾ ಕರ್ತವ್ಯ ಲೋಪಗಳು, ಪೊಲೀಸ್ ಬಂದೋಬಸ್ತ್ ಸೇರಿ ಹಲವು ವಿಚಾರಗಳ ಬಗ್ಗೆ ಮಾಹಿತಿ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net