ಡಿಪಿಆರ್ ತಯಾರಿಸಲು ಸಿದ್ಧತೆ

26 KWR1-1
Published on

ಸುಭಾಸ ಧೂಪದಹೊಂಡ ಕಾರವಾರ

ರಾಜ್ಯ ಸರ್ಕಾರದ ಸೂಚನೆಯಂತೆ ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆಯು (ಎನ್​ಡಬ್ಲ್ಯುಡಿಎ) ಬೇಡ್ತಿ ಹಾಗೂ ಅದರ ಉಪ ನದಿಗಳ ನೀರನ್ನು ಉತ್ತರ ಕರ್ನಾಟಕಕ್ಕೆ ಕೊಂಡೊಯ್ಯುವ ವಿಸõತ ಯೋಜನೆ ರೂಪಿಸಲು ತಯಾರಿ ನಡೆಸಿದೆ.

ಬೇಡ್ತಿ- ವರದಾ ನದಿ ಜೋಡಣೆಗೆ ವಿಸõತ ಯೋಜನಾ ವರದಿ (ಡಿಪಿಆರ್) ತಯಾರಿಸಿಕೊಡುವಂತೆ ಎನ್​ಡಬ್ಲ್ಯುಡಿಎಗೆ ತಿಳಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬಜೆಟ್ ಮಂಡನೆ ಸಂದರ್ಭದಲ್ಲಿ ತಿಳಿಸಿದ್ದರು. ಅಲ್ಲದೆ, ಈ ಸಂಬಂಧ ಸರ್ಕಾರ ಎನ್​ಡಬ್ಲ್ಯುಡಿಎಗೆ ಪತ್ರವನ್ನೂ ಬರೆದಿದೆ. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಮಾಹಿತಿ ಕಲೆ ಹಾಕಿರುವ ಸಂಸ್ಥೆ, ಯೋಜನಾ ಪ್ರದೇಶದ ಕಾಡು, ನೀರು, ಮಳೆ ಮುಂತಾದ ಮಾಹಿತಿ ಸಂಗ್ರಹ ಕಾರ್ಯದಲ್ಲಿ ತೊಡಗಿದೆ. ಇಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ ಶೀಘ್ರದಲ್ಲಿ ಸ್ಥಳ ಭೇಟಿ ಹಾಗೂ ಸರ್ವೆ ಕಾರ್ಯ ನಡೆಸಲಾಗುವುದು ಎಂದು ಬೆಂಗಳೂರಿನಲ್ಲಿರುವ ಎನ್​ಡಬ್ಲ್ಯುಡಿಎ ಇಂಜಿನಿಯರ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ವರ್ಷದಿಂದ ಪತ್ರ ವ್ಯವಹಾರ: ಹಾವೇರಿ, ಗದಗ ಹಾಗೂ ಕೊಪ್ಪಳ ಜಿಲ್ಲೆಯ ಕೆಲ ಭಾಗಗಳಿಗೆ ಕುಡಿಯುವ ನೀರು ಪೂರೈಕೆಗೆ, ಕೃಷಿ ನೀರಾವರಿಗೆ, ಕೆರೆಗಳನ್ನು ತುಂಬಿಸುವ ಸಂಬಂಧ ಈ ಭಾಗದ ಜನಪ್ರತಿನಿಧಿಗಳು ಹಾಗೂ ಕೆಲ ಸಂಘಟನೆಗಳ ಮುಖಂಡರು ಬೇಡ್ತಿ- ವರದಾ ನದಿ ಜೋಡಣೆಯ ಬೇಡಿಕೆ ಇಟ್ಟಿದ್ದರು. ಇದನ್ನು ಆಧರಿಸಿ ಸರ್ಕಾರ ಎನ್​ಡಬ್ಲ್ಯುಡಿಎ ಜತೆಗೆ 1 ವರ್ಷದಿಂದ ಪತ್ರ ವ್ಯವಹಾರ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ. 18 ವರ್ಷಗಳ ಹಿಂದೆಯೇ ಎನ್​ಡಬ್ಲ್ಯುಡಿಎ ಈ ಹಿಂದೆ ಬೇಡ್ತಿ- ವರದಾ ನದಿ ಜೋಡಣೆ ಯೋಜನೆ ಸಂಬಂಧ ಕಾರ್ಯಸಾಧ್ಯತಾ ವರದಿ, ನಕ್ಷೆಯನ್ನು ಸಿದ್ಧ ಮಾಡಿತ್ತು. ಇದನ್ನು ಅವಲೋಕಿಸಿ, ಕೆಲ ಬದಲಾವಣೆ ಮಾಡಿ ವಿಸõತ ಯೋಜನೆ ವರದಿ (ಡಿಪಿಆರ್) ಸಿದ್ಧ ಮಾಡುವಂತೆ ಎನ್​ಡಬ್ಲ್ಯುಡಿಎಗೆ ಸರ್ಕಾರ ಸೂಚಿಸಿದೆ.

2016 ರಲ್ಲಿ ಕೇಂದ್ರಕ್ಕೆ ಅರ್ಜಿ: ಬೇಡ್ತಿ- ವರದಾ ನದಿ ಜೋಡಣೆ ವಿಚಾರವಾಗಿ ಕರ್ನಾಟಕ ಸರ್ಕಾರ ಆಗಾಗ ಪ್ರಯತ್ನ ಮಾಡುತ್ತಲೇ ಇದೆ. 2016ರಲ್ಲಿ ಧಾರವಾಡದ ಕರ್ನಾಟಕ ನೀರಾವರಿ ನಿಗಮವು ಯೋಜನೆಯ ಸಂಬಂಧ ಕಾರ್ಯಸಾಧ್ಯತಾ (ಫ್ರೀ ಪಿಸಿಬಿಲಿಟಿ) ವರದಿಯೊಂದನ್ನು ಸಿದ್ಧ ಮಾಡಿತ್ತು. ಪರಿಸರ ಅಧ್ಯಯನ ನಡೆಸಲು ನಿಯಮಾವಳಿಗಳನ್ನು (ಟಿಒಆರ್) ನೀಡುವಂತೆ ಕೇಂದ್ರ ಅರಣ್ಯ ಮಂತ್ರಾಲಯಕ್ಕೆ ಅರ್ಜಿಯನ್ನೂ ಸಲ್ಲಿಸಿತ್ತು. ಆದರೆ, ವಿಸõತ ಯೋಜನಾ ವರದಿಯೊಡನೆ ಅರ್ಜಿ ಸಲ್ಲಿಸಿ ಎಂದು ಕೇಂದ್ರ ಪರಿಸರ ಮಂತ್ರಾಲಯ ಹೇಳಿದ್ದರಿಂದ ಈ ಪ್ರಕ್ರಿಯೆ ಅಲ್ಲಿಗೇ ನಿಂತಿತ್ತು ಎನ್ನುತ್ತಾರೆ ನೀರಾವರಿ ನಿಗಮದ ಅಧಿಕಾರಿಗಳು.

ಬೇಡ್ತಿ- ವರದಾ ನದಿ ತಿರುವು ಯೋಜನೆ ಸಂಬಂಧ ವಿಸõತ ಯೋಜನಾ ವರದಿ ಸಿದ್ಧ ಮಾಡಲು ಸರ್ಕಾರ ಬಜೆಟ್​ನಲ್ಲಿ ಘೊಷಿಸಿದೆ. ಈ ಸಂಬಂಧ ನಮ್ಮ ಸಂಸ್ಥೆಗೆ ಪತ್ರವೂ ಬಂದಿದೆ. ಯೋಜನಾ ವರದಿ ಸಿದ್ಧ ಮಾಡಲು ಎಷ್ಟು ಹಣ ಮೀಸಲಿಡಲಾಗಿದೆ ಎಂಬ ಸ್ಪಷ್ಟತೆ ಇನ್ನೂ ದೊರಕಿಲ್ಲ. ಡಿಪಿಆರ್ ತಯಾರಿಸಲು ಮುಂದೆ ಸ್ಥಳ ಪರಿಶೀಲನೆ, ಸರ್ವೆ ಕಾರ್ಯ ನಡೆಸಬೇಕಾಗುತ್ತದೆ. | ಚನ್ನಯ್ಯ , ಎನ್​ಡಬ್ಲ್ಯುಡಿಎ ಇಂಜಿನಿಯರ್ ಬೆಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net