ಮಳೆಗಾಲದ ವಿಪತ್ತು ಎದುರಿಸಲು ಸನ್ನದ್ಧರಾಗಿ

1-hvr-05
Published on

ಹಾವೇರಿ: ಮುಂಗಾರು ಮಳೆಗಾಲದಲ್ಲಿ ಎದುರಾಗಬಹುದಾದ ಪ್ರವಾಹ ಸೇರಿದಂತೆ ವಿಪತ್ತುಗಳನ್ನು ಎದುರಿಸಲು ತಾಲೂಕುವಾರು ವಿಪತ್ತು ಯೋಜನೆಗಳೊಂದಿಗೆ ಸನ್ನದ್ಧರಾಗುವಂತೆ ತಹಸೀಲ್ದಾರ್​ಗಳಿಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಿಂದ ವಿಪತ್ತು ನಿರ್ವಹಣೆ ಸಿದ್ಧತೆ ಕುರಿತು ಮಂಗಳವಾರ ಎಲ್ಲ ತಹಸೀಲ್ದಾರ್​ಗಳೊಂದಿಗೆ ಏರ್ಪಡಿಸಿದ್ದ ವಿಡಿಯೋ ಸಂವಾದದಲ್ಲಿ ಮಾತನಾಡಿದ ಅವರು, ಬುಧವಾರ ಸಂಜೆಯೊಳಗೆ ತಾಲೂಕಾವಾರು ವಿಪತ್ತು ನಿರ್ವಹಣೆಯ ಕಂಟ್ರೋಲ್ ರೂಮ್ಳನ್ನು ಆರಂಭಿಸಬೇಕು. ಸಾರ್ವಜನಿಕ ಸಂಪರ್ಕಕ್ಕಾಗಿ ಹೆಲ್ಪ್​ಲೈನ್ ನಂಬರ್​ಗಳನ್ನು ಮಾಹಿತಿಗಾಗಿ ಪ್ರಕಟಿಸಬೇಕು ಎಂದರು.

ಜಿಲ್ಲೆಯಲ್ಲಿ 141 ಗ್ರಾಮಗಳು ತಗ್ಗು ಪ್ರದೇಶಗಳಲ್ಲಿದ್ದು, ಪ್ರವಾಹದಿಂದ ಮುಳುಗಡೆ ಸಮಸ್ಯೆ ಎದುರಿಸಲಿವೆ. ಮತ್ತೊಮ್ಮೆ ಪರಿಶೀಲನೆ ನಡೆಸಿ ವಿಪತ್ತಿಗೆ ತುತ್ತಾಗಬಹುದಾದ ಗ್ರಾಮಗಳ ಪಟ್ಟಿಯನ್ನು ತಾಲೂಕುವಾರು ಸಂಗ್ರಹಿಸಿ ಮಾಹಿತಿ ಇಟ್ಟುಕೊಳ್ಳಬೇಕು. ಅತಿಮಳೆ, ಪ್ರವಾಹದಂತ ಸಂದರ್ಭದಲ್ಲಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ ಜನ ಮತ್ತು ಜಾನುವಾರುಗಳ ರಕ್ಷಣೆಗೆ ವ್ಯವಸ್ಥಿತ ಯೋಜನೆಗಳನ್ನು ರೂಪಿಸಬೇಕು ಎಂದರು.

ಸಂಕಷ್ಟಕ್ಕೆ ತುತ್ತಾಗುವ ಮುಂಚಿತವಾಗಿಯೇ ಪರ್ಯಾಯವಾಗಿ ಕಾಳಜಿ ಕೇಂದ್ರಗಳನ್ನು ಗುರುತಿಸಿ ಮೂಲ ಸೌಕರ್ಯಗಳೊಂದಿಗೆ ಸಿದ್ಧಮಾಡಿಕೊಳ್ಳಬೇಕು. ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು. ಈ ಕುರಿತು ಆಯಾ ಗ್ರಾಮಗಳ ಜನತೆಗೆ ಮುಂಜಾಗ್ರತೆಯಾಗಿ ಮಾಹಿತಿ ನೀಡಿದರೆ ಸ್ಥಳಾಂತರಗೊಳ್ಳಲು ಮಾನಸಿಕವಾಗಿ ಸಿದ್ಧರಾಗಿರುತ್ತಾರೆ ಎಂದು ಸಲಹೆ ನೀಡಿದರು.

ಜನ- ಜಾನುವಾರುಗಳ ಜೀವಹಾನಿ ಸಂಭವಿಸಿದ 24 ತಾಸಿನಲ್ಲಿ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿ ಪರಿಹಾರ ಪಾವತಿಗೆ ತಹಸೀಲ್ದಾರ್ ಹಂತದಲ್ಲೇ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ವಿಳಂಬವಾಗಬಾರದು. ಬೆಳೆಹಾನಿ, ಮನೆಹಾನಿಗಳನ್ನು ಈಗಾಗಲೇ ಎನ್​ಡಿಆರ್​ಎಫ್ ಹಾಗೂ ಎಸ್​ಡಿಆರ್​ಎಫ್ ನಿಯಮಾವಳಿಯಂತೆ ಗುರುತಿಸಬೇಕು. ಶಿಥಿಲಾವ್ಯವಸ್ಥೆಯಲ್ಲಿರುವ ಸರ್ಕಾರಿ ಶಾಲೆ, ಕಾಲೇಜ್, ಕಚೇರಿ ಕಟ್ಟಡಗಳು, ಸೇತುವೆಗಳು, ರಸ್ತೆಗಳು, ಕರೆ ದಂಡೆಗಳ ಮಾಹಿತಿ ಸಂಗ್ರಹಿಸಬೇಕು. ಅಪಾಯದ ಸೂಚನೆ ಕಂಡು ಬಂದರೆ ತೆರವುಗೊಳಿಸಲು ಕ್ರಮವಹಿಸಬೇಕು ಂದರು.

ರಸ್ತೆ ಮತ್ತು ಸೇತುವೆ ಶಿಥಿಲಗೊಂಡಿದ್ದರೆ ತಾತ್ಕಾಲಿಕವಾಗಿ ಸಂಚಾರ ಮಾರ್ಗವನ್ನು ಬದಲಿಸಬೇಕು. ಗಾಳಿ- ಮಳೆಗೆ ರಸ್ತೆಯಲ್ಲಿ ಮರಬಿದ್ದರೆ ಅರಣ್ಯಇಲಾಖೆ ಸಹಯೋಗದೊಂದಿಗೆ ಸ್ಥಳೀಯ ಆಡಳಿತಗಳು ವಿಲೇವಾರಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಚರಂಡಿ, ರಾಜಕಾಲುವೆಗಳ ಸ್ವಚ್ಛತೆಗೆ ಕ್ರಮ ವಹಿಸಬೇಕು. ಶಿಥಿಲವಾದ ವಿದ್ಯುತ್ ಕಂಬ, ಸಡಿಲವಾದ ವಿದ್ಯುತ್ ತಂತಿಗಳು ದುರಸ್ಥಿಗೊಳಿಸಲು, ಬದಲಾಯಿಸುವುದರ ಮೂಲಕ ಅವಘಡಗಳನ್ನು ತಪ್ಪಿಸಲು ಕ್ರಮವಹಿಸಬೇಕು ಎಂದರು.

ಮಳೆಗಾಲದಲ್ಲಿ ಕಲುಷಿತ ನೀರಿನಿಂದ ಸಾಂಕ್ರಾಮಿಕ ರೋಗಗಳು ಹರಡುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನೀರು ಸರಬರಾಜಿನ ಟ್ಯಾಂಕ್​ಗಳನ್ನು ಸ್ವಚ್ಛಗೊಳಿಸಬೇಕು. ನೀರಿನ ಗುಣಮಟ್ಟ ಪರೀಕ್ಷೆ ಮಾಡಬೇಕು. ಶಿಥಿಲಗೊಂಡ ನೀರಿನ ಟ್ಯಾಂಕ್​ಗಳನ್ನು ತೆರವುಗೊಳಿಸಬೇಕು. ನಗರ ಆಡಳಿತ ಸಂಸ್ಥೆಗಳು ಹಾಗೂ ಗ್ರಾಮೀಣ ಆಡಳಿತ ಸಂಸ್ಥೆಗಳು ಈ ಕುರಿತಂತೆ ಆದ್ಯ ಗಮನಹರಿಸಬೇಕು. ಪ್ರವಾಹದಂತಹ ಅವಘಡ ಸಂದರ್ಭದಲ್ಲಿ ರಕ್ಷಣಾ ಕಾರ್ಯಕ್ಕೆ ಅಗತ್ಯವಾದ ಬೋಟ್​ಗಳ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ, ಜಿಲ್ಲಾ ಅರಣ್ಯಾಧಿಕಾರಿ ಎನ್.ಎ. ಕ್ರಾಂತಿ, ಎಎಸ್​ಪಿ ವಿಜಯಕುಮಾರ ಸಂತೋಷ, ಉಪವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ, ಜಂಟಿ ಕೃಷಿ ನಿರ್ದೇಶಕ ಬಿ. ಮಂಜುನಾಥ, ತಹಸೀಲ್ದಾರ್ ಗಿರೀಶ ಸ್ವಾದಿ, ಡಿಡಿಪಿಐ ಅಂದಾನೆಪ್ಪ ವಡಗೇರಿ, ಪಶು ಸಂಗೋಪನೆ ಇಲಾಖೆ ಉಪನಿರ್ದೇಶಕ ರಾಜೀವ ಕೂಲೇರ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಸೋಮಶೇಖರ ಅಂಗಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net