ಆಸ್ತಿ ನೋಂದಣಿಗೆ ಅಗತ್ಯ ದಾಖಲೆ ಸಿದ್ಧಪಡಿಸಿಕೊಳ್ಳಿ

FotoJet
Published on

 ಪುರಸಭಾ ಅಧ್ಯಕ್ಷ ಹರಿಪ್ರಸಾದ್ ಸಲಹೆ | ಮನೆ ಬಾಗಿಲಲ್ಲಿ ಇ-ಖಾತೆ ವಿತರಣೆ

ಬಿಡದಿ : ಆಸ್ತಿ ನೋಂದಣಿ ಮಾಡಿಕೊಳ್ಳಲು ಇಚ್ಛಿಸುವವರು ಎಲ್ಲ ದಾಖಲೆಗಳು, ಈವರೆಗಿನ ಋುಣಭಾರ ಪ್ರಮಾಣಪತ್ರಗಳನ್ನು ಸಿದ್ಧಪಡಿಸಿಕೊಳ್ಳಿ. ಇ- ಖಾತೆ ಮಾಡಿಕೊಡಲು ನಿಮ್ಮ ಮನೆ ಬಾಗಿಲಿಗೆ ಬರುತ್ತಿದ್ದೇವೆ ಎಂದು ಪುರಸಭಾ ಅಧ್ಯಕ್ಷ ಹರಿಪ್ರಸಾದ್ ತಿಳಿಸಿದರು.

ಪುರಸಭಾ ಯಿಂದ 1,2,3,4ನೇ ವಾರ್ಡ್ ಸೇರಿ ಜನತಾ ಕಾಲನಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಇ-ಆಸ್ತಿ ಖಾತಾ ಅಂದೋಲನ ಕಾರ್ಯಕ್ರಮದಲ್ಲಿ ಇ- ಸ್ವತ್ತು ವಿತರಣೆ ಮಾಡಿ ಮಾತನಾಡಿ, ಪುರಸಭಾ ವ್ಯಾಪ್ತಿಯ ಜನರು ಇ-ಖಾತೆ ಮಾಡಿಸಲು ಪುರಸಭೆಗೆ ಬರುವುದು ಬೇಡ. ನಾವೇ ನಿಮ್ಮ ಮನೆ ಬಳಿ ಬಂದು ಇ-ಸ್ವತ್ತು ವಿತರಣೆ ಮಾಡುವ ಕೆಲಸ ಮಾಡುತ್ತಿದ್ದೇವೆ. ಕೆಲವರು ಅಗತ್ಯ ಬಿದ್ದಾಗ ಇ-ಖಾತೆಗೆ ಅರ್ಜಿ ಸಲ್ಲಿಸಿದ್ದು, ಸಮಯಕ್ಕೆ ಸರಿಯಾಗಿ ಇ-ಖಾತೆ ಸಿಗದಿದ್ದರೆ ಕಚೇರಿಗೆ ಬಂದು ಅಲೆದಾಡುವುದನ್ನು ತಪ್ಪಿಸುವ ಉದ್ದೇಶದಿಂದ ಆಂದೋಲನ ಹಮ್ಮಿಕೊಂಡಿದ್ದೇವೆ. ಸಾರ್ವಜನಿಕರು ಆಂದೋಲನ ಸದುಪಯೋಗ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಪುರಸಭಾ ಮುಖ್ಯಾಧಿಕಾರಿ ಕೆ.ಜಿ.ರಮೇಶ್ ಮಾತನಾಡಿ, ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ಸಾರ್ವಜನಿಕರು ಪುರಸಭಾ ಕಚೇರಿಗೆ ಅಲೆದಾಡುವುದನ್ನು ನಿಲ್ಲಿಸಲು ಇ-ಖಾತಾ ಆಂದೋಲನ ಹಮ್ಮಿಕೊಂಡಿದ್ದೇವೆ. ಮೊದಲ ಪ್ರಯತ್ನದಲ್ಲೇ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಉಳಿದ ವಾರ್ಡ್‌ಗಳಲ್ಲೂ ಇ-ಖಾತಾ ಆಂದೋಲನ ನಡೆಸುತ್ತೇವೆ. ನಗರ ವಾಸಿಗಳು ತಮ್ಮ ಸ್ವತ್ತುಗಳಿಗೆ ಅಗತ್ಯ ದಾಖಲೆ ಒದಗಿಸಿ, ಬಾಕಿ ಉಳಿಸಿಕೊಂಡಿರುವ ತೆರಿಗೆ ಕಟ್ಟಿ ಸ್ಥಳದಲ್ಲೇ ಇ-ಖಾತೆ ಪಡೆದುಕೊಳ್ಳಬಹುದಾಗಿದೆ ಎಂದರು.

23 ವಾರ್ಡ್‌ಗಳಲ್ಲೂ ಇ-ಖಾತೆ ಮಾಡಿಕೊಡುವ ಬಗ್ಗೆ ವ್ಯಾಪಕ ಪ್ರಚಾರ ಮಾಡಲಾಗಿದೆ. ಇನ್ನೂ ಒಂದು ತಿಂಗಳು ಈ ಆಂದೋಲನ ನಡೆಯಲಿದೆ. ಇ-ಖಾತೆ ಆಂದೋಲನದಿಂದ ಸಾರ್ವಜನಿಕರಿಗೂ ಅನುಕೂಲವಾಗಿ, ಪುರಸಭೆಗೂ ಉಳಿಕೆ ಇರುವ ತೆರಿಗೆ ಹಣ ಬರುತ್ತದೆ. ಇದರಿಂದ ಪುರಸಭೆಯ ಆದಾಯ ಹೆಚ್ಚಾಗುತ್ತದೆ ಎಂದು ತಿಳಿಸಿದರು.

ಪುರಸಭಾ ಉಪಾಧ್ಯಕ್ಷೆ ಮಂಜುಳಾ ಗೋವಿಂದಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಲೋಹೀತ್ ಕುಮಾರ್, ಪುರಸಭಾ ಸದಸ್ಯರಾದ ಕುಮಾರ್, ರಮೇಶ್, ಮನು ಸಿ.ಆರ್ ಸೇರಿ ಅಧಿಕಾರಿ ವರ್ಗದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net