ಕೋವಿಡ್ ತಡೆಗೆ ಸಿದ್ಧತೆ ಕೈಗೊಳ್ಳಿ

1-hvr-07
Published on

ಹಾವೇರಿ: ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಹೆಚ್ಚಾಗಬಹುದಾದ ಕರೊನಾ ಪ್ರಕರಣಗಳನ್ನು ಗಮನದಲ್ಲಿರಿಸಿಕೊಂಡು ವೈದ್ಯಕೀಯ ಸೌಲಭ್ಯ, ಮೂಲ ಸೌಕರ್ಯ ಹಾಗೂ ಮಾನವ ಸಂಪನ್ಮೂಲಗಳನ್ನು ಹೆಚ್ಚಿಸುವ ಕುರಿತು ಯೋಜಿತ ವ್ಯವಸ್ಥೆ ಮಾಡಿಕೊಳ್ಳಿ ಎಂದು ಜಿಲ್ಲಾಡಳಿತಕ್ಕೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್ ಜೈನ್ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋವಿಡ್ ಕುರಿತು ಬುಧವಾರ ಆಯೋಜಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕರೊನಾ ಪ್ರಕರಣಗಳು ಹೆಚ್ಚಾದಂತೆ ಹೆಚ್ಚುವರಿ ಸೌಲಭ್ಯಗಳು ಅವಶ್ಯವಾಗಿವೆ. ಈ ಹಿನ್ನೆಲೆಯಲ್ಲಿ ಚುನಾವಣಾ ಸಂದರ್ಭದ ಮಾದರಿಯಲ್ಲಿ ಪೂರ್ವ ತಯಾರಿ ಮಾಡಿಕೊಳ್ಳಬೇಕು. ಸೌಲಭ್ಯ ಮತ್ತು ಸಿಬ್ಬಂದಿ ಕಾಯ್ದಿರಿಸಿಕೊಳ್ಳಬೇಕು. ಕರೊನಾ ನಿಯಂತ್ರಣದಲ್ಲಿ್ಲ ಕ್ಷೇತ್ರಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು, ದಾದಿಯರು, ಪೊಲೀಸರು, ಸರ್ಕಾರಿ ಅಧಿಕಾರಿ, ನೌಕರರಿಗೆ ಕರೊನಾ ಹರಡುತ್ತಿರುವುದು ಅತ್ಯಂತ ಕಳವಳಕಾರಿ ವಿಷಯ. ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ ಕರೊನಾ ಸೋಂಕಿತ ಆಶಾ ಕಾರ್ಯಕರ್ತೆಯರ ಪ್ರಾಥಮಿಕ, ದ್ವಿತೀಯ ಸಂರ್ಪತರು, ಕಂಟೇನ್ಮೆಂಟ್ ಜೋನ್​ಗಳಲ್ಲಿ ಕಾರ್ಯನಿರ್ವಹಿಸಿದ ಸಂದರ್ಭದಲ್ಲಿ ಯಾವ ಯಾವ ವ್ಯಕ್ತಿಗಳನ್ನು ಸಂರ್ಪಸಿದ್ದಾರೆ ಎಂಬುದನ್ನು ಪತ್ತೆ ಹಚ್ಚಬೇಕು. ಇದೇ ಮಾದರಿಯಲ್ಲಿ ಸೋಂಕಿತ ದಾದಿಯರು ಇತರ ನೌಕರರೂ ಕಳೆದ ಎಂಟ್ಹತ್ತು ದಿನಗಳಲ್ಲಿ ಅವರ ಒಡನಾಟದ ವಿವರವನ್ನು ಪತ್ತೆ ಹಚ್ಚಿ ತಪಾಸಣೆ ಕೈಗೊಳ್ಳಬೇಕು. ಪ್ರತಿ ಇಲಾಖೆಯ ಅಧಿಕಾರಿಗಳು ತಮ್ಮ ಅಧೀನ ಅಧಿಕಾರಿ ಸಿಬ್ಬಂದಿಯ ತಪಾಸಣೆಗೆ ಕ್ರಮಕೈಗೊಳ್ಳಬೇಕು ಎಂದರು.

ಕ್ವಾರಂಟೈನ್ ಸೆಂಟರ್​ನಲ್ಲಿರುವವರಿಗೆ ಹಾಗೂ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾದವರಿಗೆ ಆಹಾರ ಇತರ ಸೌಕರ್ಯ ಒದಗಿಸುವ ಜವಾಬ್ದಾರಿಯನ್ನು ವೈದ್ಯರಿಗೆ ನೀಡಬೇಡಿ. ಆರೋಗ್ಯ ಇಲಾಖೆ ಹೊರತುಪಡಿಸಿ ಸಮಾಜ ಕಲ್ಯಾಣ, ಆಹಾರ ಇಲಾಖೆ ಸೇರಿ ಇತರ ಇಲಾಖೆ ಅಧಿಕಾರಿಗಳನ್ನು ಕರ್ತವ್ಯಕ್ಕೆ ನಿಯೋಜಿಸಬೇಖು. ಆಹಾರದ ಗುಣಮಟ್ಟ ಮೂಲ ಸೌಕರ್ಯಗಳನ್ನು ಪರಿಶೀಲಿಸಿ ನಿತ್ಯ ಜಿಲ್ಲಾಡಳಿತಕ್ಕೆ ವರದಿ ನೀಡಲು ವ್ಯವಸ್ಥೆ ಮಾಡಬೇಕು. ಚುನಾವಣೆ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಸಿಬ್ಬಂದಿ ಕಾಯ್ದಿರಿಸಿಕೊಳ್ಳುವಂತೆ ಈಗಲೂ ವಾಹನ ಚಾಲಕರು, ಇತರ ಸಿಬ್ಬಂದಿಯನ್ನು ಹೆಚ್ಚುವರಿ ನಿಯೋಜನೆ ಮಾಡಿ ಎಂದರು.

ಜಿಲ್ಲಾಧಿಕಾರಿ ಕೃಷ್ಣ ಬಾಜಪೈ, ಎಡಿಸಿ ಎಂ. ಯೋಗೇಶ್ವರ ಮಾತನಾಡಿ, ಕೋವಿಡ್ ಪ್ರಕರಣಗಳ ವಿವರ ಹಾಗೂ ಪರೀಕ್ಷಾ ವರದಿಗಳು, ವೆಂಟಿಲೇಟರ್, ಆಸ್ಪತ್ರೆಯಲ್ಲಿ ಕೈಗೊಳ್ಳಲಾದ ಸಿದ್ಧತೆಗಳು, ಮುಂಜಾಗ್ರತಾ ಕ್ರಮವಾಗಿ ಪ್ರಕರಣಗಳು ಹೆಚ್ಚಾದರೆ ಹೆಚ್ಚುವರಿ ಸಿದ್ಧತೆಗಳ ಕುರಿತು ಮಾಹಿತಿ ನೀಡಿದರು.

ಸಭೆಯಲ್ಲಿ ಎಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ, ಎಸಿ ಅನ್ನಪೂರ್ಣ ಮುದಕಮ್ಮನವರ, ಡಿಎಚ್​ಒ ಡಾ. ರಾಜೇಂದ್ರ ದೊಡ್ಡಮನಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ನಾಗರಾಜ ನಾಯಕ, ಡಾ. ಪಿ.ಆರ್. ಹಾವನೂರ, ಸಮಾಜಕಲ್ಯಾಣ ಅಧಿಕಾರಿ ಚೈತ್ರಾ, ಡಾ. ಜಗದೀಶ ಪಾಟೀಲ, ಡಾ. ಸಂತೋಷ, ಡಾ. ವಿಶ್ವನಾಥ ಇತರರಿದ್ದರು.

ಜಿಲ್ಲೆಯಲ್ಲಿ 33 ಕ್ವಾರಂಟೈನ್ ಸೆಂಟರ್​ಗಳಿದ್ದು, 1,356 ಅಂತರ್ ರಾಜ್ಯ ಪ್ರಯಾಣಿಕರು, 1,275 ಅಂತರ ಜಿಲ್ಲಾ ಪ್ರಯಾಣಿಕರು, 386 ಪ್ರಾಥಮಿಕ ಹಾಗೂ 45 ದ್ವಿತೀಯ ಸಂರ್ಪತರು ಸೇರಿ 3,059 ಜನ ದಾಖಲಾಗಿದ್ದು, ಇದರಲ್ಲಿ 2,742 ಜನ ಬಿಡುಗಡೆಯಾಗಿದ್ದಾರೆ.| ಕೃಷ್ಣ ಬಾಜಪೈ, ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net