

ವಿಜಯವಾಣಿ ಸುದ್ದಿಜಾಲ ಕಡಬ
ರಾಜ್ಯದಲ್ಲಿ ಹೊಸದಾಗಿ ರಚನೆಯಾಗಿರುವ ಪಟ್ಟಣ ಪಂಚಾಯಿತಿಗಳಿಗೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ವಾರ್ಡ್‌ಗಳಿಗೆ ಉಪಚುನಾವಣೆ ನಡೆಸಲು ಆದೇಶಿಸಿದ್ದು, ಈ ಹಿನ್ನೆಲೆಯಲ್ಲಿ ಕಡಬ ಪಟ್ಟಣ ಪಂಚಾಯಿತಿಗೂ ಚುನಾವಣೆ ನಡೆಯಲಿದೆ. ಇಲ್ಲಿನ 13 ವಾರ್ಡ್‌ಗಳಲ್ಲಿ ರಾಜಕೀಯ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ.
ಕಡಬ ಕೋಡಿಂಬಾಳ ಗ್ರಾಮಗಳನ್ನೊಳಗೊಂಡ ಕಡಬ ಪಟ್ಟಣ ಪಂಚಾಯಿತಿ ಕಳೆದ ಐದು ವರ್ಷಗಳಿಂದ ಜನಪ್ರತಿನಿಧಿಗಳ ಆಡಳಿತವಿರಲಿಲ್ಲ. ಚುನಾವಣೆ ಘೋಷಣೆಯಾಗುತ್ತಿದ್ದಂತೆ ರಾಜಕೀಯ ಪ್ರಮುಖರು ಪಟ್ಟಣ ಪಂಚಾಯಿತಿಯತ್ತ ಗಮನಹರಿಸುತ್ತಿದ್ದಾರೆ. ರಾಜಕೀಯ ಪಕ್ಷಗಳ ಕಾರ್ಯಕರ್ತರಲ್ಲಿ ಇದೀಗ ನವ ಚೈತನ್ಯ ಮೂಡಿದೆ.
ವಾರ್ಡ್‌ವಾರು ಮೀಸಲಾತಿ ಸವಾಲು!: ಕಾಂಗ್ರೆಸ್ ಪಕ್ಷದಲ್ಲಿ ಆಕಾಂಕ್ಷಿಗಳ ಸಂಖ್ಯೆ ಏರುತ್ತಿದ್ದರೂ ವಾರ್ಡ್‌ವಾರು ಮೀಸಲಾತಿಗಳು ಸವಾಲೊಡ್ಡುತ್ತಿವೆ. ಈ ಹಿಂದಿನ ಗ್ರಾಪಂ ಆಡಳಿತಾವಧಿಯ ಚುನಾವಣೆಗಳಲ್ಲಿ ಮತ ಚಲಾವಣೆಯ ಅಂಕಿ ಅಂಶಗಳನ್ನು ಗಮನಿಸಿದಾಗ ಕಾಂಗ್ರೆಸ್ ಮತದಾರರು ಅಧಿಕ ಇರುವಲ್ಲಿ ಬಂದಿರುವ ಮೀಸಲಾತಿಗಳನ್ನು ಗಮನಿಸಿದಾಗ ಚುನಾವಣೆಗೆ ಸ್ಪರ್ಧಿಸಬೇಕೆನ್ನುವ ಉತ್ಸಾಹಿ, ಸದಾ ಜನರೊಂದಿಗೆ ಇರುತ್ತಿದ್ದ ಕೆಲವು ಆಕಾಂಕ್ಷಿಗಳು ಸಹಜವಾಗಿಯೇ ನಿರುತ್ಸಾಹಗೊಂಡಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಟಿಕೆಟ್ ಗಿಟ್ಟಿಕೊಳ್ಳಲು ಪ್ರಯತ್ನ
ಬಿಜೆಪಿಯಲ್ಲಿ ಪ್ರಮುಖವಾಗಿ ಪಕ್ಷದ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದವರು ತಮಗೆ ಟಿಕೆಟ್ ಸಿಗಬೇಕೆನ್ನುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದಾರೆ. ಹಲವಾರು ಹಿರಿಯ ಬಿಜೆಪಿ ಮುಖಂಡರು ಟಿಕೆಟ್ ನೀಡಬೇಕು ಎನ್ನುವ ಬೇಡಿಕೆ ಇಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಇದೀಗ ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿಯಂತೆ ಕಡಬ ಪಟ್ಟಣ ಪಂಚಾಯಿತಿಯಲ್ಲಿಯೂ ಕಾರ್ಯರೂಪಕ್ಕೆ ಬರುವ ಸಾಧ್ಯತೆಯಿದೆ ಎನ್ನಲಾಗಿದೆ. 13 ಸೀಟುಗಳಲ್ಲಿ ಸ್ವಲ್ಪ ಸೀಟ್‌ಗಳನ್ನು ತಮಗೆ ಬಿಟ್ಟುಕೊಡುವಂತೆ ಜೆಡಿಎಸ್ ಪ್ರಮುಖರು ಬಿಜೆಪಿ ಪಕ್ಷದ ನಾಯಕರೊಂದಿಗೆ ಕೇಳಿದ್ದಾರೆ ಎಂದು ತಿಳಿದುಬಂದಿದೆ.
ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ತ್ರಾಸ
ಪಟ್ಟಣ ಪಂಚಾಯಿತಿಯ 13 ಸ್ಥಾನಗಳಲ್ಲಿ ಹಿಂದುಳಿದ ವರ್ಗ ಮಹಿಳೆ 1 ಸ್ಥಾನ, ಪರಿಶಿಷ್ಟ ಜಾತಿ ಮಹಿಳೆ 1 ಸ್ಥಾನ, ಹಿಂದುಳಿದ ವರ್ಗ ಎ 2 ಸ್ಥಾನ, ಹಿಂದುಳಿದ ವರ್ಗ ಬಿ 1 ಸ್ಥಾನ, ಪರಿಶಿಷ್ಟ ಜಾತಿ 1 ಸ್ಥಾನ, ಪರಿಶಿಷ್ಟ ಪಂಗಡಕ್ಕೆ 1 ಸ್ಥಾನ ಮೀಸಲಾಗಿದೆ. ಒಟ್ಟಿನಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳಿಗೆ ಗೆಲ್ಲುವ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು, ಆಕಾಂಕ್ಷಿಗಳನ್ನು ಸಮಾಧಾನಪಡಿಸುವುದು ತ್ರಾಸದ ಕೆಲಸವಾಗಿ ಪರಿಣಮಿಸಿದೆ.