ಕಟ್ಟಡ ವಿನ್ಯಾಸಕ್ಕೆ ಎನ್‌ಒಸಿ ಹಾಸ್ಯಾಸ್ಪದ : ಗ್ರಾಮಸ್ಥ ಡಾ.ಸೋಮಶೇಖರ ಆಕ್ಷೇಪ : ಅರಣ್ಯ ಇಲಾಖೆ ನಡೆಗೆ ವಿರೋಧ

04
Published on

ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ

ಕಟ್ಟಡ ರಚನೆ ಸಂದರ್ಭ ವಿನ್ಯಾಸ ರಚನೆಗಾಗಿ ಅರಣ್ಯ ಇಲಾಖೆ ಎನ್‌ಒಸಿ ಕೇಳುವುದು ಹಾಸ್ಯಾಸ್ಪದ ಹಾಗೂ ಅಪಾಯಕಾರಿ. ಕಟ್ಟಡವನ್ನು ಇಕೋ ಸೆನ್ಸಿವಿಟಿ ಜೋನ್‌ನಿಂದ ಹೊರಗೆ ನಿರ್ಮಿಸಬೆಕು ಎಂಬ ನಿಯಮದಿಂದ ಜನರು ಸಂಕಷ್ಟಕ್ಕೆ ಒಳಪಡಿಲಿದ್ದಾರೆ ಎಂದು ಗ್ರಾಮಸ್ಥ ಡಾ.ಸೋಮಶೇಖರ ಕಟ್ಟೆಮನೆ ಆಕ್ಷೇಪಿಸಿದರು.

ಹರಿಹರ ಪಳ್ಳತ್ತಡ್ಕ ಗ್ರಾಮ ಪಂಚಾಯಿತಿಯ ಪ್ರಥಮ ಹಂತದ ಗ್ರಾಮಸಭೆಯಲ್ಲಿ ಮಾತನಾಡಿದರು.

ಗ್ರಾಮಸ್ಥ ವಿನೋದ್ ಕೂಡ ಇಕೋ ಸೆನ್ಸಿಟಿವಿಟಿ ಜೋನ್ ನಿಯಮ ವಿರೋಧಿಸಿದ್ದು, ಸೂಕ್ತ ಕ್ರಮ ಶೀಘ್ರವೇ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪಿಡಿಒ ಶ್ಯಾಮ್‌ಪ್ರಸಾದ್ ಪ್ರತಿಕ್ರಿಯಿಸಿ, ಇತ್ತೀಚೆಗಷ್ಟೇ ಒಂದು ಕಟ್ಟಡ ರಚನೆಗಾಗಿ ಅರಣ್ಯ ಇಲಾಖೆ ಎನ್‌ಒಸಿ ಕೇಳಿದ್ದು, ಈ ಕುರಿತು ಇಲಾಖೆಗೆ ಪತ್ರ ಬರೆಯಲಾಗಿದೆ. ಅರಣ್ಯ ಇಲಾಖೆಯ ಉತ್ತರಕ್ಕಾಗಿ ಕಾಯುತ್ತಿದ್ದೇವೆ ಎಂದರು.

ಸಂಪರ್ಕ ರಸ್ತೆ ಸಮಸ್ಯೆ

ಮಳೆಯ ಅಬ್ಬರಕ್ಕೆ ಬಾಳುಗೋಡು ಐನೆಕಿದು ಸಂಪರ್ಕ ಕಡಿತವಾಗುವ ಸಂಭವ ಇದೆ. ಎರಡು ವರ್ಷದ ಹಿಂದೆ ಸುರಿದ ಭಾರಿ ಮಳೆಯಿಂದ ಶಿವಾಲ ಬಳಿಯ ರಸ್ತೆ ಕೊಚ್ಚಿ ಹೋಗಿದ್ದು, ತಾತ್ಕಾಲಿಕ ಕಾಮಗಾರಿ ಮೂಲಕ ರಸ್ತೆ ಮರುನಿರ್ಮಿಸಲಾಗಿತ್ತು. ಈ ವರ್ಷ ಘಟನೆ ಮರುಕಳಿಸುವ ಭೀತಿ ಇದ್ದು, ಶೀಘ್ರ ಕ್ರಮಕೈಗೊಳ್ಳಲೇಬೇಕು ಎಂದು ಚಂದ್ರಹಾಸ ಶಿವಾಲ ಒತ್ತಾಯಿಸಿದರು.

ಈ ಬಗ್ಗೆ ಗ್ರಾಮ ಪಂಚಾಯಿತಿ ವತಿಯಿಂದ ಲೋಕೋಪಯೋಗಿ ಇಲಾಖೆಗೆ ಮನವಿ ಮಾಡಲಾಗುವುದು ಎಂದು ಪಿಡಿಒ ಭರವಸೆ ನೀಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಜಯ ಕುಮಾರ್ ಅಂಣ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಕಲ್ಯಾಣ ಇಲಾಖೆ ಪುತ್ತೂರು ಕಚೇರಿ ಅಧೀಕ್ಷಕ ಕೃಷ್ಣ ನೋಡಲ್ ಅಧಿಕಾರಿಯಾಗಿದ್ದರು. ಅರಣ್ಯ ಇಲಾಖೆಯ ಅಪೂರ್ವ, ಗ್ರಾಪಂ ಉಪಾಧ್ಯಕ್ಷ ಜಯಂತ ಬಾಳುಗೋಡು, ಸದಸ್ಯರಾದ ಪೃಥ್ವಿಚಂದ್ರ ಮುಂಡಾಜೆ, ಪದ್ಮಾವತಿ ಕಲ್ಲೇಮಠ, ಶಿಲ್ಪಾ ಕೊತ್ನಡ್ಕ, ಗ್ರಾಮಸ್ಥೆ ಶಾರದಾ, ಅಧಿಕಾರಿಗಳು, ಗ್ರಾಮಸ್ಥರು ಇದ್ದರು. ಪಿಡಿಒ ಶ್ಯಾಮ್ ಪ್ರಸಾದ್ ವರದಿ ವಾಚಿಸಿದರು.

ಆಡಳಿತಾಧಿಕಾರಿ ನೇಮಕಕ್ಕೆ ಒತ್ತಾಯ

ಹರಿಹರ ಪಳ್ಳತ್ತಡ್ಕಕ್ಕೆ ಗ್ರಾಮ ಆಡಳಿತಾಕಾರಿ ನೇಮಕಗೊಳ್ಳಬೇಕು ಮತ್ತು ಆಡಳಿತಾಧಿಕಾರಿ ಕಚೇರಿ ನಿರ್ಮಿಸಬೇಕು ಎಂದು ಸುಂದರ ಮುಚ್ಚಾರ ಆಗ್ರಹಿಸಿದರು. ಕೊಲ್ಲಮೊಗ್ರು ಗ್ರಾಮ ಆಡಳಿತಾಧಿಕಾರಿ ಮಧು ಕೆ.ಬಿ. ಉತ್ತರಿಸಿ, ಗ್ರಾಮ ಆಡಳಿತಾಧಿಕಾರಿ ಮತ್ತು ಆಡಳಿತಾಧಿಕಾರಿ ಕಚೇರಿ ವ್ಯವಸ್ಥೆಗೆ ಜಿಲ್ಲಾಧಿಕಾರಿ ಅನುಮತಿ ನೀಡಬೇಕು ಎಂದು ಸ್ಪಷ್ಟನೆ ನೀಡಿದರು.

ಭಿಕ್ಷಾಟನೆ ಕರಕ್ಕೆ ವಿರೋಧ

ಭಿಕ್ಷಾಟನೆ ಮಾಡಬಾರದು ಎಂಬ ಕಾನೂನು ಹೊರತಾಗಿ ಗ್ರಾಮ ಪಂಚಾಯಿತಿ ವತಿಯಿಂದಲೇ ಭಿಕ್ಷಾಟನೆ ಕರ ವಸೂಲಿ ಮಾಡುತ್ತಿರುವ ಕುರಿತು ಶ್ರೀಧರ್ ಭಾಗವತ್ ಪ್ರಸ್ತಾಪಿಸಿದರು. ಪಿಡಿಒ ಶ್ಯಾಮ್‌ಪ್ರಸಾದ್ ಪ್ರತಿಕ್ರಿಯಿಸಿದ್ದು, ಭಿಕ್ಷಾಟನೆ ಕರದಿಂದ ಭಿಕ್ಷುಕರ ಪುನರ್ವಸತಿಗಾಗಿ ಸರ್ಕಾರಕ್ಕೆ ಪಾವತಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಕಾಲೇಜು ಕಟ್ಟಡ ಬಳಕೆ

ಹರಿಹರ ಪಲ್ಲತಡ್ಕ ವ್ಯಾಪ್ತಿಯಲ್ಲಿದ್ದ ಸರ್ಕಾರಿ ಕಾಲೇಜು ಬಳಿಕ ವಿದ್ಯಾರ್ಥಿಗಳ ಕೊರತೆ ಎಂಬ ನೆಪವೊಡ್ಡಿ ಬೇರೆಡೆಗೆ ಸ್ಥಳಾಂತರಿಸಲಾಗಿತ್ತು. ಆ ಕಟ್ಟಡ ಈಗ ಪಾಳುಬಿದ್ದಿದ್ದು, ಗ್ರಾಮ ಪಂಚಾಯಿತಿಯ ವಿವಿಧ ಯೋಜನೆಗಳಿಗೆ ಕಾಲೇಜು ಕಟ್ಟಡ ಬಳಕೆ ಮಾಡಬಹುದು ಎಂದು ಗ್ರಾಮಸ್ಥ ಸೋಮಶೇಖರ್ ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net