

ಹರಿಪ್ರಸಾದ್ ನಂದಳಿಕೆ ಕಾರ್ಕಳ
ಅವಿಭಜಿತ ದ.ಕ. ಜಿಲ್ಲೆಯಲ್ಲಿ ಜನರು ಹೆಚ್ಚಾಗಿ ಕುಚ್ಚಲಕ್ಕಿ ಬಳಸುತ್ತಿದ್ದು, ಪ್ರಸ್ತುತ ವರ್ಷ ಕೃಷಿ ಇಲಾಖೆ ಕುಚ್ಚಲಕ್ಕಿ ತಳಿ ಹೆಚ್ಚಾಗಿ ಬೆಳೆಯುವಂತೆ ಕೃಷಿಕರಿಗೆ ಉತ್ತೇಜನ ನೀಡುತ್ತಿದೆ. ಮುಂಗಾರುಪೂರ್ವ ಮಳೆ ಸುರಿಯುತ್ತಿದ್ದಂತೆ ಕಾರ್ಕಳ ತಾಲೂಕಿನಲ್ಲಿ ಭತ್ತದ ಬಿತ್ತನೆ ಬೀಜಗಳ ವಿತರಣಾ ಪ್ರಕ್ರಿಯೆ ಭರದಿಂದ ಸಾಗುತ್ತಿದೆ.
ಈ ಬಾರಿ ಕಾರ್ಕಳ ತಾಲೂಕಿನ ಕಾರ್ಕಳ ಹಾಗೂ ಅಜೆಕಾರು ಎರಡೂ ರೈತ ಸಂಪರ್ಕ ಕೇಂದ್ರಗಳಲ್ಲಿ ಭದ್ರ(ಎಂಒ 4ತಳಿ) ಎಂಒ 16(ಉಮಾ)ತಳಿ ಸಹ್ಯಾದ್ರಿ ಕೆಂಪುಮುಕ್ತಿ ಬಿತ್ತನೆ ಬೀಜಗಳಿದ್ದು, ಒಟ್ಟು 180.40 ಕ್ವಿಂಟಾಲ್ ಬಿತ್ತನೆ ಬೀಜ ಸರಬರಾಜು ಮಾಡಲಾಗಿದ್ದು, 75.40 ಕ್ವಿಂಟಾಲ್ ಬಿತ್ತನೆ ಬೀಜ ತಾಲೂಕು ವ್ಯಾಪ್ತಿಯಲ್ಲಿ ಈಗಾಗಲೇ ವಿತರಣೆ ಮಾಡಲಾಗಿದೆ. ಹೀಗಾಗಿ ಈ ಬಾರಿ ಕುಚ್ಚಲಕ್ಕಿ ಬೆಳೆಯಲು ಕೃಷಿ ಇಲಾಖೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಕಾರ್ಕಳ ಹೋಬಳಿಯಲ್ಲಿ ಭದ್ರ ತಳಿ 65 ಕ್ವಿಂಟಾಲ್ ಸರಬರಾಜಾಗಿದ್ದು 49 ಕ್ವಿಂಟಾಲ್ ವಿತರಣೆ ಮಾಡಲಾಗಿದೆ. ಉಮಾ ತಳಿ 10.20 ಕ್ವಿಂಟಾಲ್ ಸರಬರಾಜಾಗಿದ್ದು 0.9 ಕ್ವಿಂಟಾಲ್ ವಿತರಣೆ, ಸಹ್ಯಾದ್ರಿ ಕೆಂಪು ಮುಕ್ತಿ 25. ಕ್ವಿಂಟಾಲ್ ಸರಬರಾಜು ಮಾಡಲಾಗಿದ್ದು 4 ಕ್ವಿಂಟಾಲ್ ವಿತರಣೆ, ಅಜೆಕಾರು ಹೋಬಳಿಯಲ್ಲಿ ಭದ್ರ ತಳಿ 60 ಕ್ವಿಂಟಾಲ್ ಸರಬರಾಜಾಗಿದ್ದು 20.750. ಕ್ವಿಂಟಾಲ್ ವಿತರಣೆ ಮಾಡಲಾಗಿದೆ. ಉಮಾ ತಳಿ 10.20 ಕ್ವಿಂಟಾಲ್ ಸರಬರಾಜಾಗಿದ್ದು ರೈತರು ಪಡೆದುಕೊಂಡಿಲ್ಲ. ಸಹ್ಯಾದ್ರಿ ಕೆಂಪುಮುಕ್ತಿ 10 ಕ್ವಿಂಟಾಲ್ ಸರಬರಾಜು ಮಾಡಲಾಗಿದ್ದು 0.750 ಕ್ವಿಂಟಾಲ್ ವಿತರಣೆ ಮಾಡಲಾಗಿದೆ.
ಕರಾವಳಿ ಪ್ರದೇಶದಲ್ಲಿ ಆಹಾರದಲ್ಲಿ ಕುಚ್ಚಲಕ್ಕಿಯನ್ನೇ ಹೆಚ್ಚು ಬಳಸುವ ಕಾರಣ ಕುಚ್ಚಲಕ್ಕಿ ತಳಿಗಳನ್ನು ಕೃಷಿಕರು ಬೆಳೆಸಲು ಒಲವು ಹೊಂದಿದ್ದಾರೆ. ಭದ್ರ (ಎಂಒ 4 ತಳಿ) ಎಂಒ16(ಉಮಾ) ತಳಿ, ಸಹ್ಯಾದ್ರಿ ಕೆಂಪುಮುಕ್ತಿ ಬೀಜಗಳನ್ನೇ ರೈತರು ಮಜಲು ಗದ್ದೆಗಳಲ್ಲಿ ಬೆಳೆಯಲು ಸಿದ್ಧತೆ ನಡೆಸುತ್ತಿದ್ದಾರೆ. ಮುಂಗಾರು ಸರಿಯಾಗಿ ಸುರಿದು ಭೂಮಿ ಹದವಾಗುತ್ತಿದಂತೆ ಈ ಬಾರಿ ತಾಲೂಕು ವ್ಯಾಪ್ತಿಯ ಹೆಚ್ಚಿನ ಗದ್ದೆಗಳಲ್ಲಿ ಕುಚ್ಚಲಕ್ಕಿ ಬೆಳೆಯಲು ರೈತರು ಸಜ್ಜಾಗಿದ್ದಾರೆ.
ಭದ್ರ (ಎಂಒ 4 ತಳಿ) ಐ.ಆರ್.8 ಪಿಟಿಬಿ. 20 ವಂಶವಾಗಿದ್ದು 130-135 ದಿನಗಳಲ್ಲಿ ಕಟಾವಿಗೆ ಸಿದ್ಧವಾಗುತ್ತದೆ. 80-85 ಸೆ.ಮೀ ಎತ್ತರ ಬೆಳೆಯುತಿದ್ದು, ಪ್ರತಿ ಹೆಕ್ಟೇರ್‌ಗೆ 45-50 ಕ್ವಿಂಟಾಲ್ ಇಳುವರಿ ನಿರೀಕ್ಷಿಸಲಾಗುತ್ತದೆ. ಈ ತಳಿ ಮಧ್ಯಮ ಗಾತ್ರವಾಗಿದ್ದು ಹೆಚ್ಚಿನ ಗೊಂಚಲು ಕಾಣಿಸುತ್ತದೆ. ಕಣೆ ಕೀಟ ಭಾದೆಗೆ ಹೆಚ್ಚು ಸಹಿಷ್ಣುತೆ ಹೊಂದಿದೆ. ಎಂಒ16 (ಉಮಾ) ತಳಿ ಎಂ.ಒ6 ಪೊಕ್ಕಲಿ ವಂಶವಾಗಿದ್ದು, 90 ಸೆ.ಮೀ ಎತ್ತರ ಬೆಳೆಯುತ್ತದೆ, ಪ್ರತಿ ಎಕರೆಗೆ 15-18 ಕ್ವಿಂಟಾಲ್ ಇಳುವರಿ ಬರುತ್ತದೆ. ಇದು ಕಣೆ ಕೀಟ ನಿರೋಧಕ ಶಕ್ತಿ ಹೊಂದಿದೆ. ಇನ್ನು ಸಹ್ಯಾದ್ರಿ ಕೆಂಪು ಮುಕ್ತಿ ತಳಿ ಜ್ಯೋತಿ ಕೆಪಿಆರ್-1(ಬ್ಲಾಕ್ ಕ್ರಾಸ್) ಪೋಷಕತತ್ವ ಹೊಂದಿದ್ದು, 125-130 ದಿನಗಳಲ್ಲಿ ಅವಧಿಯಲ್ಲಿ ಬೆಳೆಯುತ್ತದೆ. ಪ್ರತಿ ಹೆಕ್ಟೇರ್‌ಗೆ 50 ಕ್ವಿಂಟಾಲ್ ಧಾನ್ಯ ಇಳುವರಿ ಬರುತ್ತದೆ. ಈ ತಳಿ ಬೆಂಕಿ ರೋಗ ಹಾಗೂ ಊದು ಬತ್ತ ರೋಗ ನಿರೋಧಕ ಶಕ್ತಿ ಹೊಂದಿದೆ. ಈ ಎಲ್ಲ ಭತ್ತದ ತಳಿ ಮಜಲು ಗದ್ದೆಗಳಲ್ಲಿ ಪ್ರಾಶಸ್ತ್ಯ ಸ್ಥಳವಾಗಿದ್ದು, ಮುಂಗಾರು ಹಂಗಾಮಿನ ಸಮಯದಲ್ಲಿ ಬೆಳೆಯಲಾಗುತ್ತದೆ.
ಭದ್ರ(ಎಂಒ 4 ತಳಿ) ಹಾಗೂ ಸಹ್ಯಾದ್ರಿ ಕೆಂಪುಮುಕ್ತಿ ಕೆ.ಜಿ.ಯೊಂದಕ್ಕೆ 55.5 ರೂ. ದರ ನಿಗದಿಪಡಿಸಿದ್ದು, ಅದರಲ್ಲಿ 8 ರೂ. ಸರ್ಕಾರದ ಸಹಾಯಧನ ದೊರೆಯುತ್ತದೆ. ರೈತರಿಗೆ ಕೆ.ಜಿ.ಗೆ 47.5 ರೂ.ಯಲ್ಲಿ ಬಿತ್ತನೆ ಬೀಜ ವಿತರಣೆ ಮಾಡಲಾಗುತ್ತಿದೆ. 25 ಕೆಜಿ ಬ್ಯಾಗ್‌ವೊಂದಕ್ಕೆ 1387.5 ರೂ. ದರ ನಿಗದಿ ಪಡಿಸಲಾಗಿದ್ದು, 200 ರೂ. ಸಬ್ಸಿಡಿಯೊಂದಿಗೆ ರೈತರಿಗೆ 1187.5 ರೂ. ದರದಲ್ಲಿ ಬಿತ್ತನೆ ಬೀಜ ನೀಡಲಾಗುತ್ತಿದೆ. ಉಮಾ ಕೆಜಿಯೊಂದಕ್ಕೆ 47.5 ದರ ನಿಗದಿ ಪಡಿಸಿದ್ದು, ಅದರಲ್ಲಿ 8.ರೂ ಸರ್ಕಾರದ ಸಹಾಯಧನ ಸಿಗುತ್ತದೆ. ರೈತರಿಗೆ ಕೆಜಿಯೊಂದಕ್ಕೆ 39.25 ರೂ. ಬಿತ್ತನೆ ಬೀಜಕ್ಕೆ ನಿಗದಿಪಡಿಸಲಾಗಿದೆ. 30ಕೆಜಿ ಬ್ಯಾಗ್‌ವೊಂದಕ್ಕೆ 1417.5ರೂ. ದರ ನಿಗದಿ ಪಡಿಸಲಾಗಿದ್ದು, 240 ರೂ. ಸಬ್ಸಿಡಿಯೊಂದಿಗೆ ರೈತರಿಗೆ 1175.5 ರೂ. ನಿಗದಿಪಡಿಸಲಾಗಿದೆ.
ಕೃಷಿ ಚಟುವಟಿಕೆಗೆ ಬೇಕಾಗಿರುವ ರಸಗೊಬ್ಬರ ಎಲ್ಲೂ ಕೊರತೆಯಾಗದ ರೀತಿಯಲ್ಲಿ ಮುಂಗಾರುಪೂರ್ವದಲ್ಲೇ ದಾಸ್ತಾನು ಮಾಡಿಕೊಳ್ಳಲಾಗಿದೆ. ಖಾಸಗಿ ಅಧಿಕೃತ ರಸಗೊಬ್ಬರ ಮಾರಾಟ ಮಳಿಗೆಗಳಲ್ಲಿ ವಿವಿಧ ಶ್ರೇಣಿಗಳ ರಸಗೊಬ್ಬರ ಬೇಡಿಕೆಗೆ ಅನುಗುಣವಾಗಿ ಲಭ್ಯವಿದ್ದು, ಕಾರ್ಕಳ ಹಾಗೂ ಹೆಬ್ರಿ ತಾಲೂಕಿಗೆ ಅನುಗುಣವಾಗಿ ಮೇ ತಿಂಗಳಾಂತ್ಯಕ್ಕೆ 573 ಟನ್ ಬೇಡಿಕೆಯಿದ್ದು, ರಸಗೊಬ್ಬರ ಮಳಿಗೆಯಲ್ಲಿ 655.62 ಟನ್ ವಿವಿಧ ಶ್ರೇಣಿಯ ರಸಗೊಬ್ಬರ ದಾಸ್ತಾನಿರಿಸಲಾಗಿದೆ. ಆದರೆ ಕಾರ್ಕಳ, ಹೆಬ್ರಿ ಭಾಗಗಳಲ್ಲಿ ಹೆಚ್ಚಾಗಿ ರೈತರು ಹಟ್ಟಿ ಗೊಬ್ಬರಗಳಿಗೆ ಒತ್ತು ನೀಡುತ್ತಿದ್ದು, ಹಟ್ಟಿ ಗೊಬ್ಬರವನ್ನು ಹಾಗೂ ಸುಡುಮಣ್ಣು ಬಳಕೆ ಮಾಡಿಕೊಂಡು ಕೃಷಿ ಕಾರ್ಯದಲ್ಲಿ ತೊಡಗಿಕೊಳ್ಳುತ್ತಾರೆ.
125-140 ದಿನಗಳ ಕಾಲ ಗದ್ದೆಗಳಲ್ಲಿ ನೀರು ಹೊಂದಿರುವ ಪ್ರದೇಶಗಳಲ್ಲಿ ಕುಚ್ಚಲಕ್ಕಿ ತಳಿ ಬೆಳೆಸಬಹುದು. ಕುಚ್ಚಲಕ್ಕಿ ತಳಿಗಳು ಹೆಚ್ಚು ಪ್ರೊಟೀನ್ ಅಂಶ ಹೊಂದಿದೆ. ಮುಂಗಾರು ಹಂಗಾಮಿಗೆ ಎಂಒ4 ತಳಿ, ಎಂಒ16(ಉಮಾ) ತಳಿ, ಸಹ್ಯಾದ್ರಿ ಕೆಂಪುಮುಕ್ತಿ ಬಿತ್ತನೆ ಬೀಜಗಳನ್ನೇ ಇಲಾಖೆ ಸರಬರಾಜು ಮಾಡುತ್ತದೆ.-ಸಿದ್ದಪ್ಪ, ಕೃಷಿಯಾಧಿಕಾರಿ, ಅಜೆಕಾರು ರೈತ ಸಂಪರ್ಕ ಕೇಂದ್ರ