ಎರಡೂ ಜಿಲ್ಲೆಯ ಕಾರ್ಯಕರ್ತರೊಂದಿಗೆ ಸಮನ್ವಯತೆ

Sambhrama
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಪ್ರಚಂಡ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಕಿಶೋರಕುಮಾರ್​ ನೇತೃತದಲ್ಲಿ ಶಾಲು ಹೊದೆಸಿ ಸನ್ಮಾನಿಸಲಾಯಿತು. ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯಕುಮಾರ್​ ಶೆಟ್ಟಿ, ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ, ಕಾಪು ಶಾಸಕ ಗುರ್ಮೆ ಸುರೇಶ್​ ಶೆಟ್ಟಿ, ಕ್ಷೇತ್ರದ ಚುನಾವಣಾ ಸಂಚಾಲಕ ಕುತ್ಯಾರು ನವೀನ್​ ಶೆಟ್ಟಿ, ಕುಯಿಲಾಡಿ ಸುರೇಶ್​ ನಾಯಕ್​, ಶಿಲ್ಪಾ ಸುವರ್ಣ, ರೇಷ್ಮಾ ಶೆಟ್ಟಿ ಹಾಗೂ ಕಾರ್ಯಕರ್ತರು ಇದ್ದರು
Published on

ನೂತನ ಸದಸ್ಯ ಕೋಟ ಭರವಸೆ | 6 ತಿಂಗಳೊಳಗೆ ಹಿಂದಿ​ ಕಲಿಯುವಾಸೆ

ಪ್ರಶಾಂತ ಭಾಗ್ವತ ಉಡುಪಿ
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ನೂತನ ಸದಸ್ಯರಾಗಿ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್​ ಪೂಜಾರಿ ಭಾರಿ ಬಹುಮತದೊಂದಿಗೆ ಆಯ್ಕೆಯಾಗಿದ್ದಾರೆ. ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಕೈಗೊಳ್ಳುವ ಕೆಲಸ-ಕಾರ್ಯಗಳ ಕುರಿತಾಗಿ ವಿಜಯವಾಣಿಯೊಂದಿಗೆ ಮನದಾಳ ಬಿಚ್ಚಿಟ್ಟಿದ್ದಾರೆ.

ಟಿಕೆಟ್​ ಹಂಚಿಕೆಯ ಗೊಂದಲ, ಅಸಮಾಧಾನ ಹೇಗೆ ನಿಭಾಯಿಸಿದಿರಿ?
- ಪಕ್ಷದಲ್ಲಿ ಮೂರ್ನಾಲ್ಕು ಜನರು ಆಕಾಂಕ್ಷಿತರು ಇದ್ದರು. ಆದರೆ, ರಾಜ್ಯ ವರಿಷ್ಠರು ಎಲ್ಲವನ್ನೂ ಅಳೆದು, ತೂಗಿ ನನ್ನನ್ನು ಕರೆದು ಸ್ಪರ್ಧಿಸುವಂತೆ ಸೂಚಿಸಿದರು. ಈ ವೇಳೆ ಗೊಂದಲ, ಅಸಮಾಧಾನ ಇದ್ದರೂ ಸಹ ನಿಧಾನಕ್ಕೆ ಕಾರ್ಯಕರ್ತರ ವಿಶ್ವಾಸ ಗಳಿಸಿದ್ದು, ಇಂದು ಅವರೆಲ್ಲರ ಗೆಲುವಾಗಿ ಫಲಿತಾಂಶ ಕಣ್ಮುಂದೆ ಇದೆ.

ಪ್ರಚಾರದಲ್ಲಿ ಯಾವ ಅಂಶ ಗೆಲುವಿಗೆ ಸಹಕಾರಿಯಾಯಿತು?
- ಹತ್ತು ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಕಾರ್ಯ, ಈ ಹಿಂದೆ ನಾನು ಸಚಿವನಾಗಿದ್ದಾಗ ಮಾಡಿದ ಜನಪರ ಕೆಲಸ ಪ್ರಚಾರಕ್ಕೆ ಸುಲಭವಾಯಿತು. ಅಭಿವೃದ್ಧಿ ಕಾರ್ಯ ಮಾಡಿ ತೋರಿಸಿದ್ದೇನೆ, ಮುಂದೆಯೂ ಈ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆಂದು ನೀಡಿದ ಭರವಸೆ ಸಹಕಾರಿಯಾಯಿತು.

ಪ್ರಚಾರದ ಸಂದರ್ಭದಲ್ಲಿ 'ಭಾಷೆ' ವಿಚಾರ ಅಡ್ಡಿಯಾಗಿತ್ತೇ?

- ನಾನು ಕಲಿತಿಲ್ಲ, ಹಿಂದಿ ಬರೋದಿಲ್ಲ ಎಂದು ಪ್ರತಿಸ್ಪರ್ಧಿ ಟೀಕಿಸಿದ್ದರು. ಅದಕ್ಕೆ ನಾನಾಗ ಪ್ರತಿಕ್ರಿಯೆ ನೀಡಿದಂತೆ ಮುಂದಿನ 6 ತಿಂಗಳೊಳಗೆ ಹಿಂದಿ, ಇಂಗ್ಲಿಷ್​ ಕಲಿಯುತ್ತೇನೆ. ಕಲಿತು ಮೊದಲು ಮಾಧ್ಯಮದ ಮುಂದೆಯೇ ಮಾತನಾಡುತ್ತೇನೆ.

ಮುಂದಿನ ಯೋಜನೆ, ಕಾಯಕರ್ತರಿಗೆ ಭರವಸೆ ಏನು?

- ಕರಾವಳಿಯಲ್ಲಿ ಮೀನುಗಾರಿಕೆ, ಕೈಗಾರಿಕೆ ಹಾಗೂ ಚಿಕ್ಕಮಗಳೂರಲ್ಲಿ ಅಡಿಕೆ-ಕಾಫಿ ಪ್ರಮುಖವಾಗಿದೆ. ಈ ಎರಡೂ ಜಿಲ್ಲೆಯ ನಡುವೆ ರಾಷ್ಟ್ರೀಯ ಹೆದ್ದಾರಿ ಸಂಪರ್ಕದ ಕೊರತೆ ಇದೆ. ಕೆಲವು ಪ್ರದೇಶಗಳಲ್ಲಿ ಕಾಡು ಇರುವುದರಿಂದ ಸಮಸ್ಯೆಯಾಗಿದ್ದು, ಮುಂದಿನ ದಿನಗಳಲ್ಲಿ ಅಭಿವೃದ್ಧಿಯ ರೂಪು-ರೇಷೆ ನಿರ್ಮಿಸುತ್ತೇನೆ. ನನ್ನ ಹಾಗೂ ಪಕ್ಷದ ಗೆಲುವಿಗಾಗಿ ಕಾರ್ಯಕರ್ತರೇ ಹಣ ಖರ್ಚು ಮಾಡಿ ಪ್ರಚಾರ ಕಾರ್ಯ ನಡೆಸಿದ್ದಾರೆ. ಹೀಗಾಗಿ ಕ್ಷೇತ್ರದಲ್ಲಿ ನನಗೆ ಯಾವುದೇ ಸಮಸ್ಯೆಯಾಗದು. ಮಲೆನಾಡು-ಕರಾವಳಿ ಜಿಲ್ಲೆ ಹೊಂದಿರುವ ಈ ಕ್ಷೇತ್ರದಲ್ಲಿ ಮೊದಲಿಗೆ ಎಲ್ಲ ಕಾರ್ಯಕರ್ತರೊಂದಿಗೆ ಸಮನ್ವಯತೆ ಸಾಧಿಸುತ್ತೇನೆ.

Sambhrama2
ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಹಾಗೂ ಜಿಲ್ಲಾ ಯುವ ಮೋರ್ಚಾ ಪದಾಧಿಕಾರಿಗಳು ಅಜ್ಜರಕಾಡು ಜಿಲ್ಲಾ ಆಸ್ಪತ್ರೆ ಮುಂಭಾಗದಲ್ಲಿ ಕುಣಿದು ಸಂಭ್ರಮಿಸಿ, ಮೋದಿಗೆ ಜೈಕಾರ ಹಾಕಿದರು.

ಬಿಜೆಪಿಯ ಜಿಲ್ಲಾಧ್ಯಕ್ಷನಾಗಿ ನೇಮಕಗೊಂಡ ಬಳಿಕ ನಡೆದ ಮೊದಲ ಚುನಾವಣೆ ಇದಾಗಿದ್ದು, ನಿರೀಕ್ಷೆಗೂ ಮೀರಿದ ಅತ್ಯದ್ಭುತ ಗೆಲುವು ಲಭಿಸಿದೆ. ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಭಾವ ಹಾಗೂ ನಮ್ಮ ಅಭ್ಯರ್ಥಿ ಪೂಜಾರಿ ಅವರ ಸರಳ ಸಜ್ಜನಿಕೆಯ ವ್ಯಕ್ತಿತ್ವ ಮತದಾರರ ಮೇಲೆ ಪ್ರಭಾವ ಬೀರಿತ್ತು. ಗ್ಯಾರಂಟಿ ವ್ಯಾಮೋಹಕ್ಕೆ ಒಳಗಾಗದೆ ಇಷ್ಟು ದೊಡ್ಡ ಅಂತರದಲ್ಲಿ ಗೆಲುವು ನೀಡಿದ ಎಲ್ಲ ಮತದಾರರಿಗೆ ಜಿಲ್ಲಾಧ್ಯಕ್ಷನಾಗಿ ಧನ್ಯವಾದ ಹೇಳುತ್ತೇನೆ. ಕಿಶೋರಕುಮಾರ್​ ಕುಂದಾಪುರ. ಜಿಲ್ಲಾಧ್ಯಕ್ಷ, ಬಿಜೆಪಿ, ಉಡುಪಿ ಕಿಶೋರಕುಮಾರ್​ ಕುಂದಾಪುರ. ಜಿಲ್ಲಾಧ್ಯಕ್ಷ, ಬಿಜೆಪಿ, ಉಡುಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net