ಗ್ರಾಮ ಗ್ರಾಮಗಳಲ್ಲಿ ಏರುತ್ತಿದೆ ಚುನಾವಣೆ ಕಳೆ, ಆಕಾಂಕ್ಷಿಗಳಿಂದ ದಾಖಲೆಗಳ ಸಿದ್ಧತೆ

Gramayana Logo
Published on

ವಿಜಯವಾಣಿ ಸುದ್ದಿಜಾಲ ಕಾರವಾರ: ಗ್ರಾಮ ಪಂಚಾಯಿತಿ ಚುನಾವಣೆ ದಿನಾಂಕ ಘೊಷಣೆಯಾಗಿದ್ದು ಅಭ್ಯರ್ಥಿ ಆಕಾಂಕ್ಷಿಗಳು ಸೂಕ್ತ ದಾಖಲೆಗಳ ಸಿದ್ಧತೆಯಲ್ಲಿ ತೊಡಗಿದ್ದಾರೆ. ಮುಖ್ಯವಾಗಿ ಬೇಬಾಕಿ ಪ್ರಮಾಣಪತ್ರ ಪಡೆಯಲು ಗ್ರಾಪಂಗಳಿಗೆ ಲಗ್ಗೆ ಇಟ್ಟಿದ್ದಾರೆ.

ಮನೆಯ ಕರ, ನೀರಿನ ಕರ, ಗ್ರಾಪಂನಿಂದ ಏನಾದರೂ ದಂಡ ವಿಧಿಸಿದ್ದಲ್ಲಿ ಇದರಲ್ಲಿ ಯಾವುದನ್ನಾದರೂ ಕಟ್ಟದೇ ಬಾಕಿ ಉಳಿಸಿಕೊಂಡಿದ್ದಲ್ಲಿ ಪ್ರಮಾಣಪತ್ರ ಲಭ್ಯವಾಗುವುದಿಲ್ಲ. ಬಾಕಿ ತುಂಬಿ ಗ್ರಾಪಂ ಪಿಡಿಒ ಅವರಿಂದ ಬೇಬಾಕಿ ಪ್ರಮಾಣಪತ್ರ ಪಡೆದು ನಾಮಪತ್ರದ ಜತೆ ಸಲ್ಲಿಸುವುದು ಕಡ್ಡಾಯವಾಗಿದೆ. ಇದರಿಂದ ಈಗ ಮರಿ ಪುಡಾರಿಗಳು ಕರ ತುಂಬಲು ತಾವಾಗೇ ಗ್ರಾಪಂಗಳತ್ತ ಬರುತ್ತಿದ್ದಾರೆ.

100 ರೂ.ಠೇವಣಿ: ಇದು ಪಕ್ಷ ರಹಿತವಾಗಿ ನಡೆಯುವ ಚುನಾವಣೆ ಇದಾಗಿದ್ದರಿಂದ ಇಲ್ಲಿ ಪಕ್ಷಗಳು ಈತ ತಮ್ಮ ಪಕ್ಷದ ಅಭ್ಯರ್ಥಿ ಎಂದು ನೀಡುವ ‘ಬಿ’ ಫಾಮ್ರ್ ಅವಶ್ಯಕತೆ ಇಲ್ಲ. ಸಾಮಾನ್ಯ ಅಭ್ಯರ್ಥಿಗಳು ನಾಮಪತ್ರದ ಜತೆ 200 ರೂ. ಠೇವಣಿಯನ್ನು ನಗದು ರೂಪದಲ್ಲಿ ಸಲ್ಲಿಸಬೇಕು. ಎಸ್​ಸಿ, ಎಸ್​ಟಿ, ಒಬಿಸಿ, ಮಹಿಳೆ ಹೀಗೆ ಯಾವುದೇ ಮೀಸಲಾತಿ ಇದ್ದರೂ ಅವರು 100 ರೂ. ಮಾತ್ರ ಠೇವಣಿ ಸಲ್ಲಿಸಿದರೆ ಸಾಕು.

ಒಬ್ಬ ಸೂಚಕ ಬೇಕು: ಗ್ರಾಪಂ ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿ ಕಡ್ಡಾಯವಾಗಿ ಸಂಬಂಧಪಟ್ಟ ಗ್ರಾಪಂನ ಮತದಾರನಾಗಿರಬೇಕು. ಅದನ್ನು ಖಚಿತ ಪಡಿಸಲು ಅಭ್ಯರ್ಥಿ ಯಾವುದಾದರೂ ಒಂದು ಗುರುತಿನ ಚೀಟಿಯ ನಕಲನ್ನು ನಾಮಪತ್ರದ ಜತೆ ಸಲ್ಲಿಸಬೇಕಿದೆ. ಒಬ್ಬ ಅಭ್ಯರ್ಥಿ ನಾಲ್ಕು ನಾಮಪತ್ರ ಸಲ್ಲಿಸಬಹುದಾಗಿದೆ. ಆತನಿಗೆ ಒಬ್ಬ ಸೂಚಕ ಸಹಿ ಹಾಕಿದರೆ ಸಾಕು. ಸೂಚಕನೂ ಅದೇ ಗ್ರಾಪಂನ ಮತದಾರನಾಗಿರಬೇಕಾಗುತ್ತದೆ.

ನಾಮಪತ್ರ ನಿಗದಿತ ನಮೂನೆಯನ್ನು ಚುನಾವಣಾ ಆಯೋಗ ಸಿದ್ಧಪಡಿಸಿದೆ. ಚುನಾವಣಾ ಅಧಿಸೂಚನೆ ಹೊರಟ ದಿನದಿಂದಲೇ (ಕರಾವಳಿಯಲ್ಲಿ ಡಿ.7 ಹಾಗೂ ಘಟ್ಟದ ಮೇಲಿನ ತಾಲೂಕುಗಳಲ್ಲಿ ಡಿ.11)ಅದನ್ನು ಸಂಬಂಧಪಟ್ಟ ಗ್ರಾಪಂಗಳಲ್ಲಿ ಕೊಡಲು ಪ್ರಾರಂಭಿಸಲಾಗುತ್ತದೆ. ಅಂದೇ ನಾಮಪತ್ರ ಸ್ವೀಕಾರವೂ ಪ್ರಾರಂಭವಾಗುತ್ತದೆ. ಅದೇ ನಮೂನೆಯಲ್ಲಿ ಕಡ್ಡಾಯವಾಗಿ ನಾಮಪತ್ರ ಭರ್ತಿ ಮಾಡಿ ಸಲ್ಲಿಸಬೇಕು.

ಕೈಬರಹದಲ್ಲೂ ಕೊಡಬಹುದು ಘೊಷಣಾ ಪತ್ರ: ನಾಮಪತ್ರ ಸಲ್ಲಿಸುವ ವೇಳೆ ಅಭ್ಯರ್ಥಿ ತನ್ನ ಸ್ವ ವಿವರದ ಘೊಷಣಾ ಪತ್ರ (ಅಫಿಡವಿಟ್)ನೀಡಬೇಕು. ಅದರಲ್ಲಿ ಅಭ್ಯರ್ಥಿಯ ಮೇಲೆ ಕ್ರಿಮಿನಲ್ ಪ್ರಕರಣಗಳಿದ್ದಲ್ಲಿ ಅದರ ಮಾಹಿತಿ, ತನ್ನ ಹಾಗೂ ಕುಟುಂಬದ ಒಟ್ಟು ಆಸ್ತಿಯ ವಿವರ, ಶಿಕ್ಷಣ, ಉದ್ಯೋಗ ಇತರ ವಿಷಯಗಳನ್ನು ನೀಡಬೇಕು. ಆತ ನೋಟರಿಯಿಂದ ಅಫಿಡವಿಟ್ ಮಾಡಿಸಬಹುದು. ಇಲ್ಲವೇ ಎಲ್ಲ ಮಾಹಿತಿಯನ್ನೂ ಕೈಯ್ಯಲ್ಲೇ ಬರೆದುಕೊಟ್ಟರೂ ಸ್ವೀಕರಿಸಬೇಕು ಎಂದು ನಿಯಮ ಹೇಳುತ್ತದೆ. ಕೈಯ್ಯಲ್ಲಿ ಬರೆಯುವುದಾದರೂ ನೋಟರಿಯವರು ಸಿದ್ಧಪಡಿಸುವ ಮಾದರಿಯಲ್ಲೇ ಎಲ್ಲ ಮಾಹಿತಿಗಳು ಇರಬೇಕಾಗುತ್ತದೆ.

ಖರ್ಚಿನ ಮಿತಿಯಿಲ್ಲ: ಎಂಎಲ್​ಎ, ಎಂಪಿ ಚುನಾವಣೆಗಳಲ್ಲಿ ಪ್ರಚಾರಕ್ಕಾಗಿ ಒಬ್ಬ ಅಭ್ಯರ್ಥಿಗರಿಷ್ಠ ಎಷ್ಟು ಖರ್ಚು ಮಾಡಬಹುದು ಎಂಬ ಮಿತಿಯನ್ನು ಚುನಾವಣಾ ಆಯೋಗ ವಿಧಿಸುತ್ತದೆ. ಅವರು ಕಡ್ಡಾಯವಾಗಿ ಖರ್ಚಿನ ಲೆಕ್ಕ ಕೊಡಬೇಕಿದೆ. ಗ್ರಾಪಂಗಳಲ್ಲಿ ಆ ಸಮಸ್ಯೆ ಇಲ್ಲ. ಒಬ್ಬ ಅಭ್ಯರ್ಥಿ ಪ್ರಚಾರಕ್ಕಾಗಿ ಎಷ್ಟು ಬೇಕಾದರೂ ಖರ್ಚು ಮಾಡಬಹುದು ಅದರ ಲೆಕ್ಕ ಕೊಡಬೇಕೆಂದೇನಿಲ್ಲ.

ಅಧಿಸೂಚನೆ ಹೊರಟ ದಿನದಿಂದ ಸಂಬಂಧಪಟ್ಟ ಗ್ರಾಪಂ ಕಚೇರಿಗಳಲ್ಲೇ ನಾಮಪತ್ರ ಸ್ವೀಕಾರ ಪ್ರಾರಂಭವಾಗಲಿದೆ. ಅಭ್ಯರ್ಥಿ ಯಾವುದೇ ದಾಖಲೆ ಕೊಡದೇ ಇದ್ದರೂ ನಾಮಪತ್ರ ತಿರಸ್ಕೃತವಾಗಲಿದೆ. ಇದರಿಂದ ಆಕಾಂಕ್ಷಿಗಳು ಎಲ್ಲ ದಾಖಲೆಗಳನ್ನು ಸಂಗ್ರಹಿಸಿ, ಮತ್ತೊಮ್ಮೆ, ಮಗದೊಮ್ಮೆ ಪರಿಶೀಲಿಸಿ ನಾಮಪತ್ರ ಸಲ್ಲಿಸುವುದು ಒಳಿತು. | ರಾಮಚಂದ್ರ ಕಟ್ಟಿ ತಹಸೀಲ್ದಾರ್ ಕಾರವಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net