72 ಗಂಟೆಗಳ ನಾದೋಪಾಸನೆಗೆ ಸಿದ್ಧತೆ

ಚಿಂತಾಮಣಿ ಕೈವಾರದ ಶ್ರೀ ಯೋಗಿನಾರೇಯಣ ಮಠದಲ್ಲಿ ಗುರುಹುಣ್ಣಿಮೆ ಪ್ರಯುಕ್ತ ಮೂರು ದಿನ ನಡೆಯುವ ಗುರುಪೂಜಾ ಸಂಗೀತೋತ್ಸವಕ್ಕೆ ಸಿದ್ಧಗೊಳ್ಳುತ್ತಿರುವ ಪೆಂಡಾಲ್.
17cmy7
ಚಿಂತಾಮಣಿ ಕೈವಾರದ ಶ್ರೀ ಯೋಗಿನಾರೇಯಣ ಮಠದಲ್ಲಿ ಗುರುಹುಣ್ಣಿಮೆ ಪ್ರಯುಕ್ತ ಮೂರು ದಿನ ನಡೆಯುವ ಗುರುಪೂಜಾ ಸಂಗೀತೋತ್ಸವಕ್ಕೆ ಸಿದ್ಧಗೊಳ್ಳುತ್ತಿರುವ ಪೆಂಡಾಲ್.
Published on

ನಾಳೆಯಿಂದ ಕೈವಾರದಲ್ಲಿ ಗುರುಪೂಜಾ ಸಂಗೀತೋತ್ಸವ- ವಿವಿಧ ಕಲಾವಿದರಿಂದ ನಿರಂತರ ಕಾರ್ಯಕ್ರಮ

ವಿಜಯವಾಣಿ ಸುದ್ದಿಜಾಲ ಚಿಂತಾಮಣಿ
ತಾಲೂಕಿನ ಶ್ರೀ ಕ್ಷೇತ್ರ ಕೈವಾರದ ಶ್ರೀ ಯೋಗಿನಾರೇಯಣ ಮಠದಲ್ಲಿ ಗುರು ಪೂರ್ಣಿಮೆ ಅಂಗವಾಗಿ ಮೂರು ದಿನ ನಡೆಯಲಿರುವ ಗುರುಪೂಜಾ ಸಂಗೀತೋತ್ಸವ ಶುಕ್ರವಾರ (ಜು.19)ದಿಂದ ಆರಂಭವಾಗಲಿದೆ.
ತಾಲೂಕಿನ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಕೈವಾರವೂ ಒಂದು. ಬೆಟ್ಟದ ತಪ್ಪಲಿನಲ್ಲಿರುವ ಈ ಕ್ಷೇತ್ರ ಆಷಾಢ ಮಾಸದ ಹುಣ್ಣಿಮೆ ಸಂದರ್ಭದಲ್ಲಿ ಸಿಂಗಾರಗೊಳ್ಳುತ್ತದೆ. ಗುರುಪೂರ್ಣಿಮೆ ಅಂಗವಾಗಿ ಗುರುಪೂಜೆ ಹಾಗೂ 72 ಗಂಟೆಗಳ ನಿರಂತರ ಸಂಗೀತೋತ್ಸವ ನಡೆಯುತ್ತದೆ. ಉತ್ಸವಕ್ಕೆ ಸಿದ್ಧತೆಗಳು ಭರದಿಂದ ಸಾಗಿದ್ದು ವಿಶಾಲವಾದ ಪೆಂಡಾಲ್ ಗಳನ್ನು ಹಾಕಲಾಗಿದೆ. ದೇವಾಲಯಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ.
ಜು.19ರ ಶುಕ್ರವಾರ ಬೆಳಗ್ಗೆ 5.30ಕ್ಕೆ ಘಂಟಾನಾದ, ಸುಪ್ರಭಾತ ಹಾಗೂ ಗೋಪೂಜೆಯೊಂದಿಗೆ ಪೂಜೆಗಳು ಆರಂಭವಾಗುತ್ತವೆ. ಸದ್ಗುರು ತಾತಯ್ಯನವರ ಉತ್ಸವಮೂರ್ತಿಯನ್ನು ಸಭಾಂಗಣದ ವೇದಿಕೆಯಲ್ಲಿ ಪ್ರತಿಷ್ಠಾಪಿಸಿದ ನಂತರ ಸಂಗೀತೋತ್ಸವಕ್ಕೆ ಚಾಲನೆ ಸಿಗಲಿದೆ. ಕ್ಷೇತ್ರದ ಧರ್ಮಾಧಿಕಾರಿ ಡಾ. ಎಂ.ಆರ್. ಜಯರಾಮ್ ನೇತೃತ್ವದಲ್ಲಿ ಸಾಮೂಹಿಕ ನಾಮ ಸಂಕೀರ್ತನೆ ಸಮರ್ಪಿಸಲಾಗುತ್ತದೆ. ನಂತರ ವಿವಿಧ ಕಲಾವಿದರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಏನೇನು ಕಾರ್ಯಕ್ರಮ?
ಜು.19ರ ಬೆಳಗ್ಗೆ ಆರಂಭವಾಗುವ ಗುರುಪೂಜಾ ಸಂಗೀತೋತ್ಸವ ಜು.22ರ ಸೋಮವಾರ ಬೆಳಗ್ಗೆ 6 ಗಂಟೆಗೆ ಸಮಾಪ್ತಿಯಾಗಲಿದೆ. ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಯ ಕಲಾವಿದರಲ್ಲದೆ, ನಾಡಿನ ಪ್ರಸಿದ್ಧ ಸಂಗೀತಗಾರರು ಪಾಲ್ಗೊಳ್ಳಲಿದ್ದಾರೆ. ಕರ್ನಾಟಕ, ಆಂಧ್ರ, ತಮಿಳುನಾಡಿನಿಂದಲೂ ಸಹಸ್ರಾರು ಸಂಖ್ಯೆಯಲ್ಲಿ ಭಜನಾ ತಂಡಗಳು ಭಾಗವಹಿಸಲಿವೆ. ಈ ಮೂರು ದಿನ ಸಾಮೂಹಿಕ ಭಜನೆ, ನಾದಸ್ವರ, ಹರಿಕಥೆ, ಬುರ‌್ರಕಥೆ, ಸಂಗೀತ ಕಛೇರಿ, ಭರತನಾಟ್ಯ, ಕೂಚಿಪುಡಿ ನೃತ್ಯ, ಕಥಾಕೀರ್ತನೆ, ವೀಣಾವಾದನ, ಕೊಳಲುವಾದನ, ವೀರಗಾಸೆ, ಡೊಳ್ಳುಕುಣಿತ, ಪಂಡರಿ ಭಜನೆ, ಕೋಲಾಟ, ತೊಗಲುಬೊಂಬೆ ಇತ್ಯಾದಿ ನಾನಾ ಪ್ರಕಾರದ ಕಲೆಗಳು ಸದ್ಗುರು ಶ್ರೀ ಯೋಗಿನಾರೇಯಣ ತಾತಯ್ಯನವರಿಗೆ ಸಮರ್ಪಣೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net