ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ಅಗತ್ಯ

HELATH
ಸಂಡೂರು ತಾಲೂಕು ಕುರೇಕುಪ್ಪ ಪುರಸಭೆ ವ್ಯಾಪ್ತಿಯ ಎರಡನೇ ಅಂಗನವಾಡಿ ಕೇಂದ್ರದಲ್ಲಿ ಗ್ರಾಮ ಅರೋಗ್ಯ ನೈರ್ಮಲ್ಯ ಮತ್ತು ಪೌಷ್ಟಿಕ ದಿನಾಚರಣೆ ಕುರಿತ ಜಾಗೃತಿ ಕಾರ್ಯಕ್ರಮ ಬುಧವಾರ ನಡೆಯಿತು. ಬಿಎಚ್‌ಇಒ ಶಿವಪ್ಪ, ಪುರಸಭೆ ಸದಸ್ಯ ಕಲ್ಗುಡೆಪ್ಪ, ಆಪ್ತ ಸಮಾಲೋಚಕ ಪ್ರಶಾಂತ್ ಕುಮಾರ್ ಇತರರಿದ್ದರು.
Published on

ಸಂಡೂರು: ಮಹಿಳೆಯರು ಮತ್ತು ಮಕ್ಕಳು ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು ಎಂದು ಪುರಸಭೆ ಸದಸ್ಯ ಕೆ.ಕಲ್ಗುಡೆಪ್ಪ ತಿಳಿಸಿದರು.

ಜಾಗೃತಿ ಕಾರ್ಯಕ್ರಮ

ತಾಲೂಕಿನ ಕುರೇಕುಪ್ಪ ಪುರಸಭೆ ವ್ಯಾಪ್ತಿಯ ಎರಡನೇ ಅಂಗನವಾಡಿ ಕೇಂದ್ರದಲ್ಲಿ ಗ್ರಾಮ ಅರೋಗ್ಯ ನೈರ್ಮಲ್ಯ ಮತ್ತು ಪೌಷ್ಟಿಕ ದಿನ ಆಚರಣೆ ಕುರಿತ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಬುಧವಾರ ಮಾತನಾಡಿದರು.

ಉತ್ತಮ ಆಹಾರದಿಂದ ಆರೋಗ್ಯವಂತ ಮಗು ಪಡೆಯಲು ಸಾಧ್ಯ. ಗರ್ಭಿಣಿಯರು ಹೆಚ್ಚು ಪೌಷ್ಟಿಕ ಆಹಾರವನ್ನು ಪ್ರಾರಂಭದಿಂದಲೇ ಸೇವಿಸಬೇಕು. ಮೊಳಕೆ ಕಟ್ಟಿದ ಕಾಳು, ಹಸಿರು ಸೊಪ್ಪು, ಹಣ್ಣುಗಳು, ಹಾಲು ತುಪ್ಪ, ಮೊಸರುಗಳನ್ನು ಸೇವನೆ ಮಾಡಬೇಕು ಎಂದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಬೆಲ್ಲ, ಶೇಂಗಾ, ಕಡಲೆ, ಮೊಟ್ಟೆ ಸೇವಿಸುವುದರಿಂದ ರಕ್ತ ವೃದ್ಧಿಯಾಗುತ್ತದೆ.

14ಗ್ರಾಂ ರಕ್ತ ಹೊಂದಿದ ಮಹಿಳೆಗೆ ಹೆರಿಗೆ ಸುಲಭವಾಗಲಿದೆ. ಕಾಲಕಾಲಕ್ಕೆ ಭ್ರೂಣದ ಬೆಳವಣಿಗೆ ಮತ್ತು ರಕ್ತವನ್ನು ತಪಾಸಣೆ ಮಾಡಿಸಿಕೊಳ್ಳಬೇಕು. ಜನಿಸಿದ ಕೂಡಲೆ ಶಿಶುಗೆ ತಾಯಿ ಹಾಲು ಪ್ರಾರಂಭಿಸಿ ಪೂರ್ಣ ಅವಧಿಯವರೆಗೆ ಕೊಡಬೇಕು ಎಂದರು.

ಆಶಾ ಕಾರ್ಯಕರ್ತೆ ಬಸಮ್ಮ ಮತ್ತು ನೀಲಮ್ಮ ಅವರು ಏಕದಳ ಮತ್ತು ದ್ವಿದಳ ಧಾನ್ಯಗಳು ಮತ್ತು ಬೆಲ್ಲ, ಸೊಪ್ಪುಗಳ ಕುರಿತು ಚಾರ್ಟ್ ಮೂಲಕ ಮಾಹಿತಿ ನೀಡಿದರು. ಆಪ್ತ ಸಮಾಲೋಚಕ ಪ್ರಶಾಂತ ಕುಮಾರ, ಆಶಾ ಸುಶೀಲಮ್ಮ, ತಿಮ್ಮಕ್ಕ, ಅಂಗನವಾಡಿ ಕಾರ್ಯಕರ್ತೆ ಮಾರೆಕ್ಕ, ಅಂಬಮ್ಮ, ಗರ್ಭಿಣಿಯರಾದ ನೀಲಾವತಿ, ಗೀತಾ, ಸರೋಜಾ, ರೇಣುಕಾ, ಜಡೆಮ್ಮ, ಜ್ಯೋತಿ, ಹುಲಿಗೆಮ್ಮ, ಪುಷ್ಪವತಿ, ಗೌರಿ, ರಸಿಕಾ, ಸುಷ್ಮಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net