

ಹಾವೇರಿ: ನಗರದ ಜಿಲ್ಲಾಸ್ಪತ್ರೆಗೆ ತಪಾಸಣೆಗೆಂದು ಬಂದಿದ್ದ ತುಂಬು ಗರ್ಭಿಣಿಯೊಬ್ಬರು ಊರಿಗೆ ಹೋಗಲು ವಾಹನ ಸಿಗದೇ ಬಿಸಿಲಲ್ಲಿ ಪರದಾಡಿದ ಘಟನೆ ಶನಿವಾರ ನಡೆದಿದೆ.
ತಾಲೂಕಿನ ಹಾಲಗಿ ಗ್ರಾಮದ ಗರ್ಭಿಣಿ ಸಂಗೀತಾ ಬುಳ್ಳಮ್ಮನವರ ಎಂಬುವರನ್ನು ಶುಕ್ರವಾರ ರಾತ್ರಿ ಪಾಲಕರು ಜಿಲ್ಲಾಸ್ಪತ್ರೆಗೆ ತಪಾಸಣೆಗೆಂದು ಕರೆತಂದಿದ್ದರು. ವೈದ್ಯರ ಸಲಹೆ ಮೇರೆಗೆ ರಾತ್ರಿ ಜಿಲ್ಲಾಸ್ಪತ್ರೆಯಲ್ಲಿಯೇ ಉಳಿದಿದ್ದರು. ಹೆರಿಗೆಗೆ ಇನ್ನೂ ಕೆಲವು ದಿನಗಳಾಗಬಹುದು. ಹೆರಿಗೆ ನೋವು ಕಾಣಿಸಿಕೊಂಡ ಮೇಲೆ ಬನ್ನಿ ಎಂದು ವೈದ್ಯರು ಶನಿವಾರ ತಿಳಿಸಿದ್ದಾರೆ. ಬಳಿಕ ತಮ್ಮೂರಿಗೆ ಹೋಗಲು ವಾಹನಕ್ಕಾಗಿ ಗಂಟೆಗಟ್ಟಲೇ ಬಿಸಿಲಲ್ಲೇ ನಿಂತಿದ್ದಾರೆ.
ಇದನ್ನು ಗಮನಿಸಿದ ದಿಗ್ವಿಜಯ ವಾಹಿನಿಯ ವರದಿಗಾರ ಜಿಲ್ಲಾಸ್ಪತ್ರೆಯವರಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ. ನಂತರ 108 ಆಂಬುಲೆನ್ಸ್ನಲ್ಲಿ ಮಾನವೀಯತೆಯ ಆಧಾರದ ಮೇಲೆ ಗರ್ಭಿಣಿ ಹಾಗೂ ಆಕೆಯ ಪಾಲಕರನ್ನು ಹಾಲಗಿಗೆ ಆರೋಗ್ಯಾಧಿಕಾರಿಗಳು ಕಳುಹಿಸಿಕೊಟ್ಟಿದ್ದಾರೆ.