

ಅಥಣಿ ಗ್ರಾಮೀಣ: ಒಂಬತ್ತು ತಿಂಗಳ ಗರ್ಭಿಣಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ತೇರದಾಳ ಪಟ್ಟಣದ ಅಪ್ಪಯ್ಯ ರಾಚಯ್ಯ ಮಠಪತಿ (35) ಬಂಧಿತ ಆರೋಪಿ. ಡಿ.20ರಂದು ಸುವರ್ಣಾ ಮಹಾಂತಯ್ಯ ಮಠಪತಿ (35) ಇವರನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಅಥಣಿ ಪೊಲೀಸರು ತಂತ್ರಜ್ಞಾನದ ಸಹಕಾರ ಮೂಲಕ ಕಾರ್ಯಾಚರಣೆ ನಡೆಸಿ 56 ಗಂಟೆಯಲ್ಲಿ ಆರೋಪಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿ ಅಪ್ಪಯ್ಯ ಸುವರ್ಣಾಳ ಹಿರಿಯ ಸಹೋದರಿ ಶಾಂತವ್ವಳ ಪತಿಯಾಗಿದ್ದು, ಸುವರ್ಣಾ ಮನೆಯಲ್ಲಿಯೇ ವಾಸವಾಗಿದ್ದನು. ಬಟ್ಟೆ ವ್ಯಾಪಾರ ಮಾಡುತ್ತಿದ್ದನು. ಕೊಲೆಯಾದ ಸುವರ್ಣಾ ಹಾಗೂ ಆರೋಪಿ ಅಪ್ಪಯ್ಯ ನಡುವೆ ಅನೈತಿಕ ಸಂಬಂಧ ಜತೆಗೆ ಹಣಕಾಸಿನ ವ್ಯವಹಾರವಿತ್ತು. ಸುವರ್ಣಾ ಅಪ್ಪಯ್ಯನಿಗೆ ಹಣ ಕೊಟ್ಟಿದ್ದರು.
ಕೊಟ್ಟ ಹಣ ಮರಳಿ ಕೇಳಿದ್ದರಿಂದ ಕೋಪಕೊಂಡ ಅಪ್ಪಯ್ಯ ಸುವರ್ಣಾಳನ್ನು ಮಾರಕಾಸದಿಂದ ಕೊಚ್ಚಿ ಕೊಲೆ ಮಾಡಿದ್ದಾನೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಕಾರ್ಯಾಚರಣೆಯಲ್ಲಿ ಪಿಎಸ್‌ಐ ಗಿರೀಮಲ್ಲಪ್ಪ ಉಪ್ಪಾರ, ಎಎಸ್‌ಐ ಯಶವಂತ ರಾಮೋಜಿ, ಸಿಬ್ಬಂದಿಗಳಾದ ಮಹಾಂತೇಶ ಪಾಟೀಲ, ಶ್ರೀಧರ ಬಾಂಗಿ, ಜಮೀರ ಡಾಂಗೆ, ಸಿಡಿಆರ್ ತಂತ್ರಜ್ಞ ವಿನೋಧ ಠಕ್ಕಣ್ಣವರ, ತನಿಖಾಸಹಾಯಕ ಸುಭಾಷ ಬಬಲೇಶ್ವರ, ರಮೇಶ ಹಾದಿಮನಿ, ಕಲ್ಮೇಶ ಶಿರಗೂರ ಇದ್ದರು.