

ಹನಗೋಡು: ಗರ್ಭಿಣಿಯರು ರಕ್ತ ಪರೀಕ್ಷೆ ಸೇರಿದಂತೆ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಆರೋಗ್ಯವಂತ ಮಗುವಿಗೆ ಜನ್ಮ ನೀಡುವಂತೆ ದೊಡ್ಡ ಹೆಜ್ಜೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸುಧಾಕರ್ ಸಲಹೆ ನೀಡಿದರು.
ಹನಗೋಡು ಹೋಬಳಿ ಕಪ್ಪನಕಟ್ಟೆ ಆದಿವಾಸಿ ಹಾಡಿಯಲ್ಲಿ ಸರಗೂರಿನ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್, ಆಶ್ರಯ ಹಸ್ತ ಟ್ರಸ್ಟ್, ದೊಡ್ಡ ಹೆಜ್ಜೂರು ಪ್ರಾಥಮಿಕ ಆರೋಗ್ಯ ಕೇಂದ್ರ, ಶಿಶು ಅಭಿವೃದ್ಧಿ ಯೋಜನಾ ಇಲಾಖೆ ಸಹಯೋಗದೊಂದಿಗೆ ಆದಿವಾಸಿ ಸಮುದಾಯದ ಗರ್ಭಿಣಿಯರಿಗೆ ಗುರುವಾರ ಹಮ್ಮಿಕೊಂಡಿದ್ದ ಸಾಮೂಹಿಕ ಸೀಮಂತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗರ್ಭಿಣಿಯರು ಆಸ್ಪತ್ರೆಗೆ ಬಂದು ತಪ್ಪದೆ ಪರೀಕ್ಷೆ ಮಾಡಿಸಿಕೊಳ್ಳಬೇಕು. ಆಸ್ಪತ್ರೆಯಿಂದ ಸಿಗುವ ಆರೋಗ್ಯ ಸೇವೆಗಳನ್ನು ಪಡೆದುಕೊಳ್ಳಬೇಕು. ಆದಿವಾಸಿ ಮಹಿಳೆಯರಲ್ಲಿ ರಕ್ತ ಹೀನತೆ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿದ್ದು ಸೊಪ್ಪು, ತರಕಾರಿ, ಅಂಗನವಾಡಿಗಳಲ್ಲಿ ನೀಡುವ ಪೌಷ್ಟಿಕ ಆಹಾರ ಸೇವಿಸಬೇಕು. 18ವರ್ಷಕ್ಕಿಂತ ಕಡಿಮೆ ವಯಸ್ಸಿನಲ್ಲಿ ವಿವಾಹ ಮಾಡಿದರೆ ಗರ್ಭಿಣಿಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದರು.
ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಮುದಾಯ ಆಧಾರಿತ ಕಾರ್ಯಕ್ರಮಗಳ ಸಂಯೋಜಕ ಶಿವಲಿಂಗ ಅವರು ವಿವೇಕಾನಂದ ಸ್ಮಾರಕ ಆಸ್ಪತ್ರೆಯಲ್ಲಿರುವ ಆರೋಗ್ಯ ಸೇವೆಗಳ ಬಗ್ಗೆ ಮಾಹಿತಿ ನೀಡಿದರು.
ಅಂಗನವಾಡಿ ಕಾರ್ಯಕರ್ತೆ ಕುಮಾರಿ, ಹಾಡಿಯ ಮುಖಂಡರಾದ ವಿಜಯ್, ಸ್ವಾಮಿ, ವಿವೇಕಾನಂದ ಯೂತ್ ಮೂವ್‌ಮೆಂಟ್ ಆರೋಗ್ಯ ಕಾರ್ಯಕರ್ತ ಪವನ್ ಕುಮಾರ್ ಇದ್ದರು.