ಭೂರಹಿತರಿಗೆ ಜಮೀನು ನೀಡಲು ಆದ್ಯತೆ

6-hvr-07
Published on

ಹಾವೇರಿ: ಆದಿಜಾಂಬವ ಅಭಿವೃದ್ಧಿ ನಿಗಮದಿಂದ ಭೂ ಒಡೆತನ ಯೋಜನೆಯಡಿ ಭೂಮಿ ರಹಿತ ಆದಿಜಾಂಬವ ಸಮುದಾಯದವರಿಗೆ ಭೂಮಿ ನೀಡುವುದು ಮೊದಲ ಆದ್ಯತೆಯಾಗಿದೆ ಎಂದು ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ದುರ್ಯೋಧನ ಐಹೊಳೆ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಆದಿಜಾಂಬವ ನಿಗಮದಿಂದ ವಿವಿಧ ಯೋಜನೆಯ ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸಿ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಗಮದ ಅಧಿಕಾರಿಗಳು ಹಾಗೂ ಸಮಾಜದ ಮುಖಂಡರು ಸಭೆ ನಡೆಸಿ ಭೂಮಿಯ ಲಭ್ಯತೆ ಹಾಗೂ ಭೂ ರಹಿತ ಆದಿಜಾಂಬವ ಅರ್ಹ ಫಲಾನುಭವಿಗಳ ಪಟ್ಟಿ ಮಾಡಿ ನಿಗಮಕ್ಕೆ ಸಲ್ಲಿಸಿದರೆ ಆದ್ಯತೆಯ ಮೇರೆಗೆ ಮಂಜೂರಾತಿ ನೀಡಲಾಗುವುದು ಎಂದರು.

ಜಿಲ್ಲೆಯಲ್ಲಿ ಆದಿಜಾಂಬವ ಜನಾಂಗ ಹೆಚ್ಚಾಗಿದೆ. ನಿಗಮದ ವ್ಯಾಪ್ತಿಗೆ ಬರುವ ಸಮುದಾಯಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಗಂಗಾ ಕಲ್ಯಾಣ, ನೇರ ಸಾಲ ಯೋಜನೆ ಸೇರಿ ಹಲವು ಯೋಜನೆಗಳನ್ನು ಸಮುದಾಯದ ಏಳಿಗೆಗಾಗಿ ರೂಪಿಸಲಾಗಿದೆ. ಭೂ ಒಡೆತನ ಮತ್ತು ಗಂಗಾ ಕಲ್ಯಾಣ ಯೋಜನೆ ಮೂಲಕ ಭೂ ರಹಿತರನ್ನು ಭೂ ಒಡೆಯರನ್ನಾಗಿ ಮಾಡಲಾಗುವುದು ಎಂದರು.

ಇದಕ್ಕೂ ಮುನ್ನ ಮೈಕ್ರೋ ಕ್ರೆಡಿಟ್ ಪ್ರೇರಣಾ ಯೋಜನೆಯಡಿ ಕೋಣನತಂಬಿಗಿಯ ಸಂಜೀವಿನಿ ಹರಳಯ್ಯ ಮಹಿಳಾ ಸ್ವ ಸಹಾಯ ಸಂಘ ಹಾಗೂ ರಾಣೆಬೆನ್ನೂರಿನ ದಾನಮ್ಮದೇವಿ ಮಹಿಳಾ ಸ್ವ ಸಹಾಯ ಸಂಘಗಳಿಗೆ ತಲಾ 1.25 ಲಕ್ಷ ರೂ. ಪ್ರೋತ್ಸಾಹಧನದ ಚೆಕ್ ಹಾಗೂ ನೇರ ಸಾಲ ಯೋಜನೆಯಡಿ 8 ಫಲಾನುಭವಿಗಳಿಗೆ ತಲಾ 25 ಸಾವಿರದಂತೆ ಸಹಾಯಧನದ ಚೆಕ್ ವಿತರಿಸಲಾಯಿತು. ಉದ್ಯಮಶೀಲತಾ ಅಭಿವೃದ್ಧಿ ಯೋಜನೆ ಹಾಗೂ ಐರಾವತ ಯೋಜನೆಯಡಿ ಟ್ಯಾಕ್ಸಿ ಹಾಗೂ ಟ್ರ್ಯಾಕ್ಟರ್ ಖರೀದಿಸಿದ ಫಲಾನುಭವಿಗಳಿಗೆ ತಲಾ 2.5 ಲಕ್ಷ ರೂ. ಪ್ರೋತ್ಸಾಹಧನ ಚೆಕ್ ನೀಡಿ ಕಾರು ಹಾಗೂ ಟ್ರ್ಯಾಕ್ಟರ್ ಕೀ ಗಳನ್ನು ಹಸ್ತಾಂತರಿಸಲಾಯಿತು.

ಆದಿಜಾಂಬವ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಆರ್.ಎಚ್. ರಾಯಕರ, ಪರಮೇಶ್ವರಪ್ಪ ಮೇಗಳಮನಿ, ಹೊನ್ನಪ್ಪ ತಗಡಿನಮನಿ, ನಾಗರಾಜ ಉಚ್ಚಮ್ಮನವರ, ಬಸವರಾಜ ಹೆಡಿಗ್ಗೊಂಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net