ಸರ್ಕಾರಿ ಶಾಲೆ ಮೇಲಿನ ಒಲವು ಇಷ್ಟೇನಾ?

FotoJet (1)
Published on

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ ಶಾಲಾ ಕಾಂಪೌಂಡ್ ದುರಸ್ತಿಗಿಲ್ಲ ಇಚ್ಛಾಶಕ್ತಿ

ಗುಡಿಬಂಡೆ: ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಬೇಕು ಎಂದು ಭಾಷಣ ಬೀಗುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮಾತು ಕೇವಲ ವೇದಿಕೆಗೆ ಸೀಮಿತ ಎಂಬುದಕ್ಕೆ ತಾಲೂಕಿನ ವರ್ಲಕೊಂಡ ಸರ್ಕಾರಿ ಶಾಲೆ ಸಾಕ್ಷಿಯಂತಿದೆ.

ವರ್ಲಕೊಂಡ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯದ್ವಾರದ ಕಾಂಪೌಂಡ್ ಬಿರುಕುಬಿಟ್ಟು ಕುಸಿಯುವ ಹಂತದಲ್ಲಿದ್ದರೂ ಅಧಿಕಾರಿಗಳು ಮತ್ತು ಸ್ಥಳಿಯ ಜನಪ್ರತಿನಿಧಿಗಳು ದುರಸ್ತಿಗೆ ಕ್ರಮ ಕೈಗೊಳ್ಳದಿರುವುದನ್ನು ಗಮನಿಸಿದರೆ ಸರ್ಕಾರಿ ಶಾಲೆಗಳ ಮೇಲಿರುವ ಒಲವು ಇಷ್ಟೆನಾ ಎಂಬ ಪ್ರಶ್ನೆ ಕಾಡುತ್ತದೆ.

ವರ್ಲಕೊಂಡ ಗ್ರಾಪಂ ಕಾರ್ಯಾಲಯದ ಮುಂಭಾಗದಲ್ಲೇ ಶಾಲೆಯಿದೆ. ಪ್ರತಿದಿನ ಗ್ರಾಪಂಗೆ ಬರುವ ಅಧಿಕಾರಿಗಳು ಶಾಲೆ ಎದುರೇ ಹಾದು ಹೋಗುತ್ತಾರೆ. ಆದರೆ, ಸಮಸ್ಯೆ ಬಗೆಹರಿಸುವತ್ತ ಮುಂದಾಗದಿರುವುದು ವಿಪರ್ಯಾಸ.

ಎಲ್ಲಿಗೆ ಹೋಗುತ್ತಿದೆ ಅನುದಾನ?

ಸರ್ಕಾರಿ ಶಾಲೆಗಳ ದುರಸ್ತಿ ಹಾಗೂ ಶಿಥಿಲಗೊಂಡ ಕಟ್ಟಡಗಳ ಮರು ನಿರ್ಮಾಣಕ್ಕೆ ಸರ್ಕಾರ ಕೋಟಿ ಕೋಟಿ ಅನುದಾನ ಬಿಡುಗಡೆ ಮಾಡುತ್ತದೆ. ಆದರೆ, ಆ ಅನುದಾನ ಎಲ್ಲಿ ಹೋಗುತ್ತಿದೆ ಎನ್ನುವುದೇ ಯಕ್ಷಪ್ರಶ್ನೆಯಾಗಿದೆ. ಗ್ರಾಪಂ, ತಾಪಂ ಹಾಗೂ ಜಿಪಂಗಳಿಗೆ ಬಿಡುಗಡೆಯಾಗುತ್ತಿರುವ ಅನುದಾನಗಳಲ್ಲಿ ಇಂತಿಷ್ಟು ಪ್ರಮಾಣ ಶಿಕ್ಷಣಕ್ಕೂ ಮೀಸಲಿಡಬೇಕು ಎಂಬ ಆದೇಶವಿದೆ. ಆದರೆ, ಶಿಕ್ಷಣಕ್ಕೆ ಮೀಸಲಿಟ್ಟ ಹಣ ಎಲ್ಲಿ ಹೋಯಿತು ಎನ್ನುವುದು ಪ್ರಶ್ನೆಯಾಗಿದೆ. ಉತ್ತಮವಾಗಿರುವ ಶಾಲಾ ಕಟ್ಟಡಗಳಿಗೆ ಸುಣ್ಣ ಬಣ್ಣ ಬಳಿದು ಅನುದಾನ ದುರ್ಬಳಕೆ ಮಾಡುವ ಬದಲು,ಶಿಥಿಲಗೊಂಡ ಶಾಲಾ ಕಟ್ಟಡಗಳನ್ನು ಸರಿಪಡಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಉತ್ತಮ ವಾತಾವರಣ ನಿರ್ಮಿಸಬೇಕು ಎನ್ನುವುದು ಪಾಲಕರ ಒತ್ತಾಸೆಯಾಗಿದೆ.

ಕಾಂಪೌಂಡ್‌ಗೆ ಕಟ್ಟಿಗೆ ಬಲ

ಈ ಶಾಲೆಯಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಯ ಮುಖ್ಯದ್ವಾರದ ಕಾಂಪೌಂಡ್ ಬಿರುಕುಬಿಟ್ಟು ಬೀಳುವ ಸ್ಥಿತಿಯಲ್ಲಿದೆ. ಮಕ್ಕಳ ಮೇಲೆ ಬಿದ್ದರೆ ಅನಾಹುತ ಸಂಭವಿಸಬಹುದೆಂದು ಶಿಕ್ಷಕರು ಕಾಂಪೌಂಡ್ ಬೀಳದಂತೆ ಕಟ್ಟಿಗೆಯಿಂದ ತಡೆಯೊಡ್ಡಿದ್ದಾರೆ.

"ಹಲವು ದಿನಗಳಿಂದ ಶಾಲೆಯ ಕಾಂಪೌಂಡ್ ಶಿಥಿಲಗೊಂಡಿದ್ದು, ಅನಾಹುತ ಸಂಭವಿಸದಂತೆ ಕಟ್ಟಿಗೆಯನ್ನು ಒತ್ತಾಗಿ ಇಟ್ಟಿದ್ದೇವೆ. ಕಾಂಪೌಂಡ್ ದುರಸ್ತಿ ಮಾಡಿಸುವಂತೆ ಗ್ರಾಪಂ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ." - ಎ.ಗಾಯತ್ರಿ, ಪ್ರಭಾರ ಮುಖ್ಯಶಿಕ್ಷಕಿ, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ವರ್ಲಕೊಂಡ. "ಶಾಲೆಯ ಮುಖ್ಯದ್ವಾರದ ಕಾಂಪೌಂಡ್ ಶಿಥಿಲವಾಗಿರುವ ಬಗ್ಗೆ ದೂರು ಬಂದಿದ್ದು, ಈಗಾಗಲೇ ತಾಲೂಕು ಕಾರ್ಯ ನಿರ್ವಾಹಣಾಧಿಕಾರಿಗಳ ಗಮನಕ್ಕೆ ತಂದಿದ್ದೇನೆ, ಜತೆಗೆ ನರೇಗಾ ಯೋಜನೆಯಡಿ ಮಾಡಿಸಬೇಕೆಂದು ಚರ್ಚಿಸಿದ್ದೇವೆ, ಸರ್ಕಾರದಿಂದ ಅನುದಾನ ಬರುವುದು ತಡವಾದರೆ, ಸ್ವಂತ ಖರ್ಚಿನಲ್ಲಿ ಕಾಂಪೌಂಡ್ ಸರಿಪಡಿಸುತ್ತೇನೆ." - ಭೀಮಪ್ಪ, ಅಧ್ಯಕ್ಷ, ವರ್ಲಕೊಂಡ ಗ್ರಾಪಂ. "ಪ್ರತಿದಿನ ಶಾಲೆಗೆ ಬರುವ ಮಕ್ಕಳ ಮೇಲೆ ಬಿದ್ದು ಅನಾಹುತಕ್ಕೆ ಕಾರಣವಾಗುವ ಭಯ ಕಾಡುತ್ತಿದೆ. ಗ್ರಾಪಂ ಕಚೇರಿ ಎದುರಲ್ಲೇ ಶಾಲೆ ಇದ್ದರೂ ಅಧಿಕಾರಿಗಳು ಜಾಣಕುರುಡು ತೋರುತ್ತಿದ್ದಾರೆ." - ಶಿವಕುಮಾರ್, ವರ್ಲಕೊಂಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net