

ಪಡುಬಿದ್ರಿ: ಮುಂಗಾರು ಚುರುಕುಗೊಂಡ ಹಿನ್ನೆಲೆಯಲ್ಲಿ ಕಾಪು ತಾಲೂಕಿನಲ್ಲಿ ಮುಂಜಾಗ್ರತೆ ಮತ್ತು ರಕ್ಷಣಾ ಕಾರ್ಯಗಳ ಸಿದ್ಧತೆ ಚುರುಕಾಗಿದೆ.
ಪಡುಬಿದ್ರಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಬೋಟ್, ಲೈಫ್‌ಜಾಕೆಟ್, ಗಾಳಿ ಟ್ಯೂಬ್ ಇತ್ಯಾದಿ ಪರಿಕರಗಳನ್ನು ಸಿದ್ಧವಾಗಿಟ್ಟುಕೊಳ್ಳಲಾಗಿದೆ ಎಂದು ತಹಸೀಲ್ದಾರ್ ಪ್ರತಿಭಾ ಆರ್. ತಿಳಿಸಿದ್ದಾರೆ. ರಕ್ಷಣಾ ಕಾರ್ಯದಲ್ಲಿ ಗೃಹರಕ್ಷಕದಳದ ಸಿಬ್ಬಂದಿ ಕುಮಾರ್ ಕೋಟ್ಯಾನ್, ಮಹೇಶ್, ನವೀನ್ ಕುಮಾರ್, ಸುಕೇಶ್, ಕೇಶವ್ ಸುಬ್ರಹ್ಮಣ್ಯ ದಿನದ 24 ಗಂಟೆಯೂ ಕರ್ತವ್ಯದಲ್ಲಿರಲಿದ್ದಾರೆ.
ನೆರೆ ಉಂಟಾದ ಸಂದರ್ಭ ತಹಸೀಲ್ದಾರ್ ಕಚೇರಿಯ ಕಂಟ್ರೋಲ್ ರೂಂಗೆ(0820 2551444) ಕರೆ ಮಾಡಬಹುದು. ತಕ್ಷಣವೇ ನಮ್ಮ ಗೃಹರಕ್ಷಕದಳದ ಸಿಬ್ಬಂದಿ ಬೋಟ್‌ನೊಂದಿಗೆ ಆಗಮಿಸಿ ನೆರೆಗೊಳಗಾದವರನ್ನು ರಕ್ಷಿಸಿ ಕಾಳಜಿ ಕೇಂದ್ರಗಳಿಗೆ ಕರೆದೊಯ್ಯುವ ವ್ಯವಸ್ಥೆ ಮಾಡಲಿದ್ದಾರೆ ಎಂದು ತಹಸೀಲ್ದಾರ್ ವಿವರಿಸಿದ್ದಾರೆ.
ಪ್ರತಿ ಗ್ರಾಮದಲ್ಲಿ ಕಾಳಜಿ ಕೇಂದ್ರಗಳನ್ನು ಗುರುತಿಸಲಾಗಿದ್ದು, ವ್ಯವಸ್ಥಿತ ರೀತಿಯಲ್ಲಿ ಸಿದ್ಧಗೊಳಿಸಿಕೊಳ್ಳಲಾಗಿದೆ. ಈಗಾಗಲೇ ನೆರೆ ಉಂಟಾಗುವ ಸಂಭವವಿರುವ ಪ್ರದೇಶಗಳಿಗೆ ಭೇಟಿ ನೀಡಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಅಂತಹ ಪ್ರದೇಶಗಳಿಂದ ಜನರನ್ನು ಸ್ಥಳಾಂತರ ಮಾಡಲು ಮನವೊಲಿಸುವ ಪ್ರಯತ್ನ ಮಾಡಲಾಗಿದೆ.-ಪ್ರತಿಭಾ ಆರ್., ತಹಸೀಲ್ದಾರ್