

ಬೆಂಗಳೂರು: ರಾಜ್ಯದಲ್ಲಿ ಡೆಂಘೆ ವ್ಯಾಪಕವಾಗಿ ಹರಡುತ್ತಿದ್ದು, ಮಕ್ಕಳಿಂದ ವೃದ್ಧರವರೆಗೂ ಬಾಧಿಸುತ್ತಿದೆ. ಹಾಗಾಗಿ ಸ್ವಲ್ಪ ಮೈ ಬಿಸಿ ಏರಿದರೂ, ಶೀತ, ನೆಗಡಿ ಬಂದರೂ ಜನರು ಆತಂಕಗೊಂಡು ಆಸ್ಪತ್ರೆಯತ್ತ ಮುಖಮಾಡುವ ಆತಂಕ ಸ್ಥಿತಿ ನಿರ್ಮಾಣವಾಗಿದೆ. ಪರಿಣಾಮ ಆಸ್ಪತ್ರೆಗಳು, ಕ್ಲಿನಿಕ್‌ಗಳು ಜನರಿಂದ ತುಂಬಿವೆ.
ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ರಾಜ್ಯದಲ್ಲಿ ಈವರೆಗೂ ಒಂದು ವರ್ಷದೊಳಗಿನ 247 ಮಕ್ಕಳು, 1 ರಿಂದ 18 ವರ್ಷದ 5,132 ಮಂದಿ ಹದಿಹರೆಯದವರು ಹಾಗೂ 18 ಮೇಲ್ಪಟ್ಟ 9,253 ಮಂದಿ ಸೇರಿ 14,632 ಮಂದಿ ಡೆಂಘೆ ಜ್ವರದಿಂದ ಬಳಲಿದ್ದಾರೆ. ಇದರುವರೆಗೂ ಬೆಂಗಳೂರಿನಲ್ಲಿ ಮೂವರು, ಶಿವಮೊಗ್ಗ ಮತ್ತು ಹಾಸನದಲ್ಲಿ ತಲಾ ಇಬ್ಬರು ಹಾಗೂ ಧಾರವಾಡ, ಹಾವೇರಿ ಮತ್ತು ಮೈಸೂರಿನಲ್ಲಿ ತಲಾ ಒಬ್ಬರಂತೆ ಹತ್ತು ಮಂದಿ ಸಾವನ್ನಪ್ಪಿದ್ದಾರೆ. ಇವು ಜನರನ್ನು ಇನ್ನಷ್ಟು ಆತಂಕಕ್ಕೆ ದೂಡಿದೆ.
ಬೇಸಿಗೆ ರಜೆ ಕಳೆದು ಮಕ್ಕಳಿಗೆ ಶಾಲೆ ಆರಂಭವಾಗುತ್ತಲೇ ಮುಂಗಾರು ಮಳೆಯೂ ಪ್ರಾರಂಭವಾಗುತ್ತದೆ. ಪರಿಣಾಮ ಆಟ ಪಾಠಗಳಿಂದ ಹೊರಗಿನ ತಣ್ಣನೆ ವಾತಾವರಣಕ್ಕೆ ಮಕ್ಕಳು ಹೆಚ್ಚು ಒಡ್ಡಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಇದರಿಂದ ಶೀತ, ನೆಗಡಿ, ಜ್ವರ ಸಾಮಾನ್ಯವಾಗಿ ಕಾಡುತ್ತದೆ. ಆದರೆ ಈ ಬಾರಿ ಡೆಂಘೆ ಹಾವಳಿ ಹೆಚ್ಚಾಗಿದ್ದು, ಸಾವಿನ ಸಂಖ್ಯೆಯೂ ಎರಡಂಕಿ ತಲುಪಿರುವುದು ಸಹಜವಾಗಿಯೇ ಭೀತಿ ಮೂಡಿಸಿದೆ.
ಡೆಂಘೆ ಜ್ವರಕ್ಕೆ ಕಾರಣವಾಗುವ ಈಡಿಸ್ ಸೊಳ್ಳೆ ಹಗಲು ಹೊತ್ತಿನಲ್ಲಿ ಕಚ್ಚುವುದರಿಂದ ಮನೆಯಲ್ಲಿ ಎಷ್ಟೆಲ್ಲಾ ಸುರಕ್ಷಿತ ಕ್ರಮ ಕೈಗೊಂಡಿದ್ದರೂ, ರಸ್ತೆಯಲ್ಲಿ ತೆರಳುವಾಗ, ಆಟದ ಮೈದಾನ ಸೇರಿ ನಿಂತ ನೀರಿನಲ್ಲಿ ಈಡಿಸ್ ಸೊಳ್ಳೆಗಳು ಉಗಮವಾಗಿ ಮಕ್ಕಳನ್ನು ಕಚ್ಚುವ ಸಾಧ್ಯತೆಗಳು ಹೆಚ್ಚು. ಹಾಗಾಗಿ ಮಕ್ಕಳ ಬಗ್ಗೆ ಹೆಚ್ಚು ಜಾಗ್ರತೆ ವಹಿಸಬೇಕು. ಕೋವಿಡ್ ಸಂದರ್ಭದಲ್ಲಿ ವಹಿಸಿದಷ್ಟೇ ಜಾಗರೂಕತೆ ಈಗಲೂ ವಹಿಸಬೇಕು. ಮಕ್ಕಳಿಗೆ ಸ್ವೆಟರ್ ಸೇರಿ ಮೈತುಂಬ ಬಟ್ಟೆ ಧರಿಸಬೇಕು. ಸೊಳ್ಳೆ ಕಚ್ಚದಂತೆ ಲಭ್ಯವಿರುವ ಲೋಷನ್ ಇಲ್ಲವೆ ಕೊಬ್ಬರಿ ಎಣ್ಣೆ ಮತ್ತು ಬೇವಿನ ಎಣ್ಣೆ 3:1 ಪ್ರಮಾಣದಲ್ಲಿ ಬೆರೆಸಿ ಹಚ್ಚಬೇಕು. ಜ್ವರ ಬಂದಲ್ಲಿ ಶಾಲೆಗೆ ಕಳುಹಿಸಬಾರದು. ನಿರ್ಲಕ್ಷ್ಯ ಮಾಡದೆ ವೈದ್ಯರಲ್ಲಿ ಚಿಕಿತ್ಸೆ ಕೊಡಿಸಬೇಕು ಎಂದು ಕೆ.ಸಿ.ಜನರಲ್ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಲಕ್ಷ್ಮೀಪತಿ ಸಲಹೆ ನೀಡಿದ್ದಾರೆ.
ಎಚ್ಚರಿಕೆಯೇ ಔಷಧ ಹಾಗೂ ಚಿಕಿತ್ಸೆ: ಡೆಂಘೆ ಜ್ವರಕ್ಕೆ ನಿರ್ದಿಷ್ಟ ಔಷಧವಿಲ್ಲ. ಹಾಗಾಗಿ ಮುನ್ನೆಚ್ಚರಿಕೆ ಕ್ರಮಗಳೇ ಔಷಧ ಮತ್ತು ಚಿಕಿತ್ಸೆ ಆಗಿದೆ. ಮನೆಯ ಒಳಗೆ ಹಾಗೂ ಹೊರಗೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸೊಳ್ಳೆಗಳ ಉಗಮಕ್ಕೆ ಕಾರಣವಾಗುವ ಸ್ಥಳಗಳನ್ನು ಸ್ವಚ್ಛಗೊಳಿಸಬೇಕು. ಸಮಪರ್ಕವಾಗಿ ತ್ಯಾಜ್ಯ ವಿಲೇವಾರಿ ಮಾಡಬೇಕು. ಮನೆ ತಾರಸಿ ಹಾಗೂ ಸುತ್ತಮುತ್ತಲು ತೆಂಗಿನ ಚಿಪ್ಪು, ಟೈಯರ್, ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹವಾಗದಂತೆ ನೋಡಿಕೊಳ್ಳಬೇಕು. ಸೊಳ್ಳೆಗಳು ಕಚ್ಚದಂತೆ ಕಿಟಕಿ ಹಾಗೂ ಬಾಗಿಲುಗಳಿಗೆ ಮೆಶ್ ಅಳವಡಿಸಬೇಕು. ಸೊಳ್ಳೆ ನಿರೋಧಕಗಳು ಹಾಗೂ ಸೊಳ್ಳೆ ಪರದೆಗಳನ್ನು ಬಳಸಬೇಕು.
ಆಹಾರದ ಬಗ್ಗೆಯೂ ಗಮನವಿರಲಿ: ಈ ವಾತಾವರಣದಲ್ಲಿ ರೋಗನಿರೋಧಕ ಶಕ್ತಿ ಸಾಮಾನ್ಯವಾಗಿ ಕಡಿಮೆ ಆಗುತ್ತದೆ. ಅಲ್ಲದೆ ಮಳೆಯಿಂದ ನೀರಿನ ಸಂಪರ್ಕದಲ್ಲಿ ಸಮಸ್ಯೆಯಾಗಿ ಕಳುಷಿತ ನೀರು ಪೂರೈಕೆ ಆಗುವ ಸಾಧ್ಯತೆ ಹೆಚ್ಚು. ಹಾಗಾಗಿ ಕುದಿಸಿ ಆರಿಸಿದ ನೀರನ್ನು ಸೇವಿಸಿ, ತಾಜಾ ಹಣ್ಣು ಮತ್ತು ತರಕಾರಿ ಹಾಗೂ ಮನೆಯ ಆಹಾರ ಸೇವನೆ ಉತ್ತಮ. ಕೈಗಳು ಸೇರಿ ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಶೀತ ನೆಗಡಿ ಇದ್ದಲ್ಲಿ ಇತರರಿಗೆ ಹರಡದಂತೆ ಮಾಸ್ಕ್ ಧರಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.