ಕುಪ್ಪೆಪದವಿನಲ್ಲಿ ಪೂರ್ವ ಮುಂಗಾರು ಜಾಗೃತಿ ಅಭಿಯಾನ

New Project (52)
Published on

ಗುರುಪುರ: ರೈತರಿಗೆ ಕೃಷಿ, ತೋಟಗಾರಿಕೆ, ಹೈನುಗಾರಿಕೆ ಹಾಗೂ ಮೀನುಗಾರಿಕೆ ಕುರಿತಾಗಿ ಶನಿವಾರ ಕುಪ್ಪೆಪದವು ಗ್ರಾಪಂ ಸಭಾಂಗಣದಲ್ಲಿ ‘ಪೂರ್ವ ಮುಂಗಾರು’ ಕೃಷಿ ಮಾಹಿತಿ ನೀಡಲಾಯಿತು.

ಕೇಂದ್ರದ ಭಾರತೀಯ ಕೃಷಿ ಅನುಸಂದಾನ ಪರಿಷತ್, ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ, ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ(ಬೀದರ್), ಕೃಷಿ ವಿಜ್ಞಾನ ಕೇಂದ್ರ ದ.ಕ. ಹಾಗೂ ಇತರ ಕೃಷಿ ಸಂಬಂಧಿತ ಇಲಾಖೆಗಳ ಸಹಯೋಗದಲ್ಲಿ ಮೇ 29ರಿಂದ ಆರಂಭಗೊಂಡು ಜೂನ್ 12ರವರೆಗೆ ಜಿಲ್ಲೆಯಲ್ಲಿ ನಡೆಯಲಿರುವ ವಿಕಸಿತ ಕೃಷಿ ಸಂಕಲ್ಪ ಅಭಿಯಾನದಡಿ ಕಾರ್ಯಕ್ರಮ ಜರುಗಿತು.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಟಿ.ಜೆ.ರಮೇಶ ಕೃಷಿಕರಿಗೆ ಅಭಿಯಾನದ ಉದ್ದೇಶ ಮತ್ತು ಮಹತ್ವ ತಿಳಿಸಿದರು. ಕೇಂದ್ರೀಯ ಮೀನುಗಾರಿಕೆ ಸಂಶೋಧನಾ ಸಂಸ್ಥೆ ಮಂಗಳೂರು ಕೇಂದ್ರದ ಪ್ರಧಾನ ವಿಜ್ಞಾನಿ ಡಾ.ರಾಜೇಶ್ ಕೆ.ಎಂ. ಮೀನು ಕೃಷಿ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡಿದರು.

ರಾಜ್ಯ ರೈತ ಸಂಘದ ಮುಖಂಡ ಮನೋಹರ ಶೆಟ್ಟಿ ನಡಿಕಂಬ್ಳ, ಪಶು ವಿಜ್ಞಾನಿ ಡಾ.ಶಿವಕುಮಾರ್ ಆರ್., ಮಣ್ಣು ವಿಜ್ಞಾನಿ ಡಾ.ಮಲ್ಲಿಕಾರ್ಜುನ ಎಲ್. ಮಾತನಾಡಿದರು. ಕೃಷಿಕರಾದ ಪ್ರತಿಭಾ ಹೆಗಡೆ, ದಯಾನಂದ ಶೆಟ್ಟಿ, ದಾಮೋದರ ಶೆಟ್ಟಿ, ಕುಪ್ಪೆಪದವು ಹಾಲು ಉತ್ಪಾದಕರ ಸಂಘದ ಪದಾಧಿಕಾರಿಗಳು, ಗ್ರಾಮದ ರೈತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net