ಹೈನುಗಾರಿಕೆ, ಮಾವು, ಟೊಮ್ಯಾಟೊ ಮತ್ತು ತರಕಾರಿ ಬೆಳೆಗಳಿಗೆ ಪ್ರಸಿದ್ಧಿ ಪಡೆದ ಬಂಗಾರದ ಭೂಮಿ ಕೋಲಾರದ ರಾಜಕಾರಣದಲ್ಲಿ ರಾಯಲಸೀಮಾದ ರಕ್ತಚರಿತೆ ದೂರಾಗಿದೆ. ಆದರೆ, ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ, ಹೈನುಗಾರಿಕೆ ಹರಿಕಾರ ಎಂ.ವಿ.ಕೃಷ್ಣಪ್ಪ, ನಿಷ್ಠುರವಾದಿ ಸಿ.ಬೈರೇಗೌಡರಂಥ ಪ್ರಾಮಾಣಿಕರನ್ನು ಕಂಡ ಜಿಲ್ಲೆಯಲ್ಲಿ ಪ್ರಸ್ತುತ ನೋಟಿಗಾಗಿ ವೋಟು ಪ್ರಾಮುಖ್ಯತೆ ಪಡೆದುಕೊಂಡಿದೆ. ಪಕ್ಷ, ವ್ಯಕ್ತಿ, ಸಿದ್ಧಾಂತ ನಗಣ್ಯವಾಗಿ ಹಣ, ಜಾತಿ, ತೋಳ್ಬಲ ಸದ್ದು ಮಾಡುತ್ತಿದೆ. ಕಳೆದ ಬಾರಿ 6 ಕ್ಷೇತ್ರಗಳಲ್ಲಿ 4 ಸ್ಥಾನ ಗೆದ್ದು ಪಾರಮ್ಯ ಮೆರೆದಿದ್ದ ಕಾಂಗ್ರೆಸ್ ತೆಕ್ಕೆಗೆ ಜೆಡಿಎಸ್ ಪರಿತ್ಯಾಗಿ ಕೆ.ಶ್ರೀನಿವಾಸಗೌಡ ಬಂದಿದ್ದಾರೆ. ಆದರೆ 7 ಬಾರಿ ಸಂಸದರಾಗಿದ್ದ ಕಾಂಗ್ರೆಸ್ನ ಕೆ.ಎಚ್.ಮುನಿಯಪ್ಪಗೆ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ಕುಮಾರ್ ಮುಂದಾಳತ್ವದ ‘ಘಟಬಂಧನ್’ ಸೋಲಿನ ರುಚಿ ತೋರಿಸಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಮುನಿಯಪ್ಪ ಯತ್ನಿಸುತ್ತಿದ್ದಾರೆ. ‘ಮುನಿ’ಯಪ್ಪ ಅವರನ್ನು ಮಣಿಸಲು ಕೋಲಾರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಕರೆತರುವ ಪ್ರಯತ್ನ ನಡೆದಿದೆ. ಆದರೆ ಒಳೇಟು ಸುಳಿವರಿತ ಸಿದ್ದರಾಮಯ್ಯ ಅಖಾಡಕ್ಕಿಳಿಯಲು ಹಿಂದೆಮುಂದೆ ನೋಡುತ್ತಿದ್ದಾರೆ. ಇನ್ನು 2018ರ ಚುನಾವಣೆ ಪ್ರಚಾರಕ್ಕೆ ಪ್ರಧಾನಿ ಮೋದಿ ಬಂದಿದ್ದರೂ ಬಿಜೆಪಿ ಖಾತೆ ತೆರೆಯಲಿಲ್ಲ. ಈಗ ಪರಿಸ್ಥಿತಿ ಸುಧಾರಿಸಿದ್ದರೂ ಚುನಾವಣೆಯನ್ನು ಪಕ್ಷ ಗಂಭೀರವಾಗಿ ಪರಿಗಣಿಸಿಲ್ಲ. ಮೂಲ, ಹೊಸಬರ ನಡುವಿನ ಸಮರ ಮುಂದುವರಿದಿದೆ. ಲೋಕಸಭಾ ಚುನಾವಣೆಯಲ್ಲಿ ಕಮಲದ ಗೆಲುವಿಗೆ ಕಾರಣರಾಗಿದ್ದ ಘಟಬಂಧನ್ ನಾಯಕರ ಋಣ ತೀರಿಸಲು ಜಿಲ್ಲಾ ಮುಖಂಡರು ಪಕ್ಷಕ್ಕೆ ದುರ್ಗತಿ ತಂದಿದ್ದಾರೆ ಎಂಬ ನೋವು ಕಾರ್ಯಕರ್ತರಲ್ಲಿದೆ. ಕಳೆದ ಬಾರಿ ಪ್ರಬಲ ಪೈಪೋಟಿ ನೀಡಿದ್ದ ಜೆಡಿಎಸ್, ಅಭ್ಯರ್ಥಿಗಳ ಘೋಷಣೆ ಮಾಡಿಕೊಂಡು ಪ್ರಬಲ ಎದುರಾಳಿಯಾಗಿ ಕಾದಾಟಕ್ಕೆ ಸಜ್ಜಾಗಿದೆ.