ಶ್ರವಣಬೆಳಗೊಳ ಕ್ಷೇತ್ರದಲ್ಲಿ ಜೆಡಿಎಸ್ನಿಂದ ಸತತ ಎರಡು ಬಾರಿ ಜಯಗಳಿಸಿರುವ, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರೂ ಆಗಿರುವ ಶಾಸಕ ಸಿ.ಎನ್.ಬಾಲಕೃಷ್ಣ ಅವರು ಮುಂದಿನ ಚುನಾವಣೆಯಲ್ಲಿಯೂ ಗೆಲುವಿನ ನಗೆ ಬೀರುವ ಭರವಸೆಯಲ್ಲಿದ್ದಾರೆ. ಎಚ್.ಡಿ.ದೇವೇಗೌಡರ ಕುಟುಂಬದ ಪ್ರಭಾವದಿಂದ ಹೊರಬಂದು ಪಕ್ಷಭೇದ ಮರೆತು ಕೆಲಸ ಮಾಡಿರುವುದು, ಕೆರೆ-ಕಟ್ಟೆಗಳಿಗೆ ನೀರು ತುಂಬಿಸಿರುವುದು, ಸಹಕಾರ ಸಂಘಗಳು, ಸ್ತ್ರೀಶಕ್ತಿ ಸಂಘಗಳ ಬಲವರ್ಧನೆ ಮತ್ತಿತರ ಕಾರ್ಯಗಳು ತಮ್ಮ ಕೈಹಿಡಿಯಲಿವೆ ಎಂಬುದು ಅವರ ವಿಶ್ವಾಸವಾಗಿದೆ. ಇನ್ನು ಕಾಂಗ್ರೆಸ್ನಿಂದ ಇತ್ತೀಚೆಗೆ ತಾನೆ ವಿಧಾನ ಪರಿಷತ್ ಸದಸ್ಯತ್ವ ಅವಧಿ ಮುಗಿಸಿರುವ ಎಂ.ಎ.ಗೋಪಾಲಸ್ವಾಮಿ, ಮಾಜಿ ಶಾಸಕ ಸಿ.ಎಸ್. ಪುಟ್ಟೇಗೌಡ, ಜತ್ತೇನಹಳ್ಳಿ ರಾಮಚಂದ್ರ, ಮಾಜಿ ಸಚಿವ ದಿವಂಗತ ಎಚ್.ಸಿ. ಶ್ರೀಕಂಠಯ್ಯ ಅವರ ಮೊಮ್ಮಗ ಲಲಿತ್ ರಾಘವ ಮತ್ತು ಮನೋಹರ ಕುಂಭೇನಹಳ್ಳಿ ಟಿಕೆಟ್ಗೆ ಪ್ರಯತ್ನ ನಡೆಸಿದ್ದಾರೆ. ಬಿಜೆಪಿಯಿಂದ ಕಣಕ್ಕಿಳಿಯಲು ಅಣತಿ ಆನಂದ್ ಮತ್ತು ಚಿದಾನಂದ ಉತ್ಸುಕರಾಗಿದ್ದಾರೆ.