

ಬೆಂಗಳೂರು: ವರಮಹಾಲಕ್ಷ್ಮೀಹಬ್ಬದ ದಿನವಾದ ಆಗಸ್ಟ್ 5ರಂದು ಮುಜರಾಯಿ ದೇವಸ್ಥಾನಗಳಲ್ಲಿ ಮಹಿಳೆಯರಿಗೆ ಅರಿಶಿನ-ಕುಂಕುಮ, ಹಸಿರು ಬಳೆಗಳನ್ನು ನೀಡುವಂತೆ ಸರ್ಕಾರ ಸೂಚನೆ ನೀಡಿದೆ. ಧಾರ್ಮಿಕ ದತ್ತಿ ಇಲಾಖೆಯ ಎಲ್ಲ ದೇವಾಲಯಗಳಿಗೆ ಈ ಆದೇಶ ಮಾಡಲಾಗಿದೆ.
ಭಾರತೀಯ ಸಂಸ್ಕೃತಿಯಲ್ಲಿ ಸ್ತ್ರೀಯರಿಗೆ ಬಹಳ ಮಹತ್ವಪೂರ್ಣವಾದ ಸ್ಥಾನವನ್ನು ನೀಡಿ ಗೌರವಿಸಲಾಗುತ್ತಿದ್ದು, ಪ್ರತೀ ವರ್ಷ ಶ್ರೀವರಮಹಾಲಕ್ಷ್ಮೀ ವ್ರತ, ಸ್ವರ್ಣಗೌರೀವ್ರತ ಮತ್ತು ನವರಾತ್ರಿಗಳಲ್ಲಿಯೂ ಸ್ತ್ರೀ ದೇವತೆಯನ್ನು ಪೂಜಿಸಿ ಆರಾಧಿಸಲಾಗುತ್ತದೆ. ಇನ್ನು ವರಮಹಾಲಕ್ಷ್ಮೀ ಹಬ್ಬದ ದಿನ ಮಹಿಳೆಯರು ವರಮಹಾಲಕ್ಷ್ಮಿಯನ್ನು ಪೂಜೆ ಮಾಡಿ, ದೇವಾಲಯಗಳಿಗೆ ದೇವರ ದರ್ಶನಾರ್ಥಿಗಳಾಗಿ ಬಂದು ದೇವರ ಪ್ರಸಾದಗಳಾದ ಅರಿಶಿನ, ಕುಂಕುಮ, ಹೂವು ಮುಂತಾದ ಪ್ರಸಾದಗಳನ್ನು ಸ್ವೀಕರಿಸುವ ಸಂಪ್ರದಾಯವೂ ಇರುತ್ತದೆ.
ಆದ್ದರಿಂದ, ನಾಡಿನ ಸಮಸ್ತ ಮಹಿಳೆಯರನ್ನು ಗೌರವಿಸುವ ಸಲುವಾಗಿ ಹಾಗೂ ಶ್ರೀವರಮಹಾಲಕ್ಷ್ಮೀಯವರ ಕೃಪಾಕಟಾಕ್ಷವು ಲಭಿಸಲೆಂದು ಶ್ರೀ ವರಮಹಾಲಕ್ಷ್ಮಿ ವ್ರತದ ದಿನದಂದು ಅಧಿಸೂಚಿತ ದೇವಾಲಯಕ್ಕೆ ಆಗಮಿಸುವ ಮಹಿಳೆಯರಿಗೆ ಆಯಾಯ ದೇವಾಲಯಗಳ ವತಿಯಿಂದ ಉತ್ತಮ ಗುಣಮಟ್ಟದ ಕಸ್ತೂರಿ ಅರಿಶಿನ-ಕುಂಕುಮ ಮತ್ತು ಹಸಿರು ಬಳೆಗಳನ್ನು ಗೌರವ ಸೂಚಕವಾಗಿ ನೀಡುವುದು ಸೂಕ್ತ ಎಂಬುದಾಗಿ ಜುಲೈ 18ರಂದು ನಡೆದ ರಾಜ್ಯ ಧಾರ್ಮಿಕ ಪರಿಷತ್ ಸಭೆಯಲ್ಲಿ ನಿರ್ಣಯಿಸಲಾಗಿರುತ್ತದೆ.
ಹೀಗಾಗಿ ವರಮಹಾಲಕ್ಷ್ಮಿ ವ್ರತದ ದಿನವಾದ ಆ. 5ರಂದು ಎಲ್ಲಾ ಅಧಿಸೂಚಿತ ದೇವಸ್ಥಾನಗಳಿಗೆ ಆಗಮಿಸುವ ಮಹಿಳೆಯರಿಗೆ ಆಯಾಯ ದೇವಾಲಯಗಳ ವತಿಯಿಂದ ಉತ್ತಮ ಗುಣಮಟ್ಟದ ಕಸ್ತೂರಿ ಅರಿಶಿನ-ಕುಂಕುಮ ಮತ್ತು ಹಸಿರು ಬಳೆಗಳನ್ನು ತಂದು ದೇವರ ಮುಂದೆ ಇಟ್ಟು ಪೂಜಿಸಿ ಗೌರವಪೂರ್ವಕವಾಗಿ ಸ್ತ್ರೀಯವರಿಗೆ ನೀಡುವುದು ಹಾಗೂ ಅದರ ವೆಚ್ಚವನ್ನು ಆಯಾಯ ದೇವಸ್ಥಾನದ ನಿಧಿಯಿಂದ ನಿಯಮಾನುಸಾರ ಭರಿಸಲು ತಿಳಿಸಿದೆ.
“ಪ್ರಸಾದ ರೂಪವಾದ ಅರಿಶಿನ ಕುಂಕುಮವನ್ನು ಕಾಗದದ ಲಕೋಟೆಗಳಲ್ಲಿ ಸರ್ಕಾರದ ಲಾಂಛನದೊಂದಿಗೆ ದೇವಾಲಯದ ಹೆಸರನ್ನು ಮುದ್ರಿಸಿ, ಇದರೊಂದಿಗೆ ಲಗತ್ತಿಸಿರುವ ಮಾದರಿಯಲ್ಲಿ ಲಕೋಟೆಯನ್ನು ತಯಾರಿಸಿಕೊಂಡು ದೇವಾಲಯಕ್ಕೆ ಆಗಮಿಸುವ ಸ್ತ್ರೀಯರಿಗೆ ನೀಡುವುದು" ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.